ರಾಷ್ಟ್ರೀಯ

ಶಾಸಕನ ಮಗ ಚಪ್ರಾಸಿ ಕೆಲಸ ಮಾಡಬಾರದೆ..?

Pinterest LinkedIn Tumblr

Heeralal-Varma

ಅಜ್ಮೇರ್, ಮಾ.22: ಬರೀ 8ನೆ ತರಗತಿ ಓದಿರುವ ನನ್ನ ಮಗ ಅವನ ವಿದ್ಯಾರ್ಹತೆಗೆ ತಕ್ಕಂತೆ ಚಪ್ರಾಸಿ (ಪೀವನ್) ಕೆಲಸ ಮಾಡಬೇಕೇ ಹೊರತು, ಶಾಸಕನ ಪುತ್ರ ಎಂಬ ಕಾರಣಕ್ಕೆ ರಾಜಕೀಯ ಪ್ರವೇಶ ಮಾಡುವುದಾಗಲಿ, ಅರ್ಹತೆಗೆ ಮೀರಿದ ಕೆಲವನ್ನಾಗಲಿ ಮಾಡುವುದು ನನಗೆ ಇಷ್ಟವಿಲ್ಲ. ಅವನ ಯೋಗ್ಯತೆಗೆ ತಕ್ಕ ಕೆಲಸವನ್ನೇ ಅವನು ಮಾಡಬೇಕು. ರಾಜಸ್ಥಾನದ ಟೊಂಕ್ ವಿಧಾನಸಭೆಯನ್ನು 2ನೆ ಬಾರಿಗೆ ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಹೀರಾಲಾಲ್ ವರ್ಮ ಹೇಳಿದ ಮಾತುಗಳಿವು.

ಸಂದರ್ಭ: ಕೇವಲ 8ನೆ ತರಗತಿ ಪಾಸಾಗಿರುವ ತಮ್ಮ ಪುತ್ರ ಇತ್ತೀಚೆಗೆ ಅಜ್ಮೇರಿನಲ್ಲಿ ನಡೆದ ರಾಜಸ್ಥಾನ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ ಕರೆದಿದ್ದ ಚಪ್ರಾಸಿ (4ನೆ ದರ್ಜೆ) ಕೆಲಸದ ಸಂದರ್ಶನಕ್ಕೆ ಹಾಜರಾಗಿದ್ದ ಹಿನ್ನೆಲೆಯಲ್ಲಿ ಶಾಸಕ ವರ್ಮ ಹೀಗೆ ಹೇಳಿದ್ದಾರೆ.

ಹೀರಾಲಾಲ್ ವರ್ಮ ರಾಜಕೀಯ ಪ್ರವೇಶಕ್ಕೆ ಮುನ್ನ ರಾಜ್ಯ ಸರ್ಕಾರದಲ್ಲಿ ಅಧಿಕಾರಿಯಾಗಿದ್ದರು. 8ನೆ ತರಗತಿ ಉತ್ತೀರ್ಣನಾಗಿರುವ ನನ್ನ ಮಗ ಹಂಸರಾಜ್ ಸದ್ಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 5 ಸಾವಿರ ರೂ. ಸಂಪಾದಿಸುತ್ತಿದ್ದಾನೆ. ಅವನು ವ್ಯಾಸಂಗದಲ್ಲಿ ತುಂಬಾ ಹಿಂದಿದ್ದ. ಹಾಗಾಗಿ 10ನೆ ತರಗತಿ ಪಾಸು ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಅವನಿಗೆ ಉಳಿದಿರುವುದು ಇದೊಂದೇ ಅವಕಾಶ. ಹಾಗಾಗಿ ಅವರ ವಿದ್ಯಾಭ್ಯಾಸ ಮಟ್ಟ, ಅರ್ಹತೆಗೆ ಮಾಡಿದ ಯಾವುದೇ ಹೆಚ್ಚಿನ ಕೆಲಸಗಳಿಗಾಗಲಿ, ರಾಜಕೀಯ ಪ್ರವೇಶಕ್ಕಾಗಲಿ ಅವನನ್ನು ಹಚ್ಚುವುದು ನನಗೆ ಬೇಕಿಲ್ಲ ಎಂಬುದು ಈ ಪರಿಶಿಷ್ಟ ಜಾತಿಗೆ ಸೇರಿದ ಶಾಸಕ ವರ್ಮಾ ಅವರ ಮಾತು. ತಮ್ಮ ಮಗ ಚಪ್ರಾಸಿ ಕೆಲಸಕ್ಕೆ ಅರ್ಜಿ ಹಾಕಿದ ಬಗ್ಗೆ ಇತರ ಶಾಸಕರು ಪ್ರಶ್ನಿಸಿದಾಗ ವರ್ಮಾ ಹೇಳಿದ್ದಿಷ್ಟು. ನಿಮಗಿದು ಅಸಹಜ ಎನಿಸಿದರೂ ಅದೇನೂ ಪಾಪದ ಅಥವಾ ತಪ್ಪು ಕೆಲಸವಲ್ಲ ಎಂಬುದು.

ನಾನು ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರ. ಅಲ್ಲದೆ ಗೋಲ್ಡ್ ಮೆಡಲಿಸ್ಟ್. ನಾನು ಕ್ಲಾಸ್ ಒನ್ ಆಫೀಸರ್ ಆಗಿದ್ದೆ. ಆದರೆ ಮಗನಿಗೆ ವಿದ್ಯೆ ಹತ್ತಲಿಲ್ಲ. ಈಗ ಅವನ ವಿದ್ಯೆಗೆ ಚಪ್ರಾಸಿ ಕೆಲಸವೇ ಸರಿ. ಎಷ್ಟಾದರೂ ಸರ್ಕಾರಿ ಕೆಲಸ. ಜೀವನಕ್ಕೆ ಭದ್ರತೆ ಇರುತ್ತದೆ ಎಂದು ವರ್ಮಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ವರ್ಮಾ ಹಿರಿಯ ಮಗ ಮಾಜಿ ನಗರ ಸಭಾಸದಸ್ಯ ಮತ್ತು ಉದ್ಯಮಿ. ಇನ್ನೊಬ್ಬ ಮಗ ಇದೀಗ ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ. ಮಗಳು ಬಿಇಡಿ ಓದುತ್ತಿದ್ದಾಳೆ.

Write A Comment