ಬೆಂಗಳೂರು, ಮಾ.22: ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಇಂದು ನಗರದ ಆನಂದರಾವ್ ವೃತ್ತದ ಗಾಂಧಿಪ್ರತಿಮೆ ಬಳಿ ಬೆಳಗಿನಿಂದ ಸಂಜೆವರೆಗೆ ಪ್ರತಿಭಟನೆ ನಡೆಸಿತು.
ಗಾಂಧಿ ಪ್ರತಿಮೆ ಬಳಿ ಆಗಮಿಸಿದ ಬಿಜೆಪಿ ಮುಖಂಡರು ಪ್ರತಿಭಟನೆ ಆರಂಭಕ್ಕೂ ಮುನ್ನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಡಿ.ಕೆ.ರವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ, ಕೆ.ಜೆ.ಜಾರ್ಜ್ ಹಾಗೂ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಾನ ಮನಸ್ಕ ವೇದಿಕೆ ನೇತೃತ್ವದಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್ ಇದೊಂದು ನಾಚಿಕೆಗೇಡಿನ ಸರ್ಕಾರ, ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ವಹಿಸಲು ಹಠಮಾರಿತನ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಡಿ.ಕೆ.ರವಿ ಅವರದು ಆತ್ಮಹತ್ಯೆಯಲ್ಲ ಎಂದು ಜನರೇ ಹೇಳುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಸಿಬಿಐ ತನಿಖೆಗೂ ವಹಿಸದೆ ಹೇಡಿತನ ಪ್ರದರ್ಶಿಸಿದೆ ಎಂದು ಹರಿಹಾಯ್ದರು.
ಮಹಿಳಾ ಐಎಎಸ್ ಅಧಿಕಾರಿ ಹಾಗೂ ರವಿ ಪತ್ನಿ ಅವರ ವಿರುದ್ಧ ಅವಹೇಳನಕಾರಿ ವರದಿ ಪ್ರಕಟಿಸಲಾಗುತ್ತಿದೆ. ಮಹಿಳಾ ಐಎಎಸ್ ಅಧಿಕಾರಿ ಮೇಲೆ ವರ್ಗಾವಣೆ ಒತ್ತಡ ಹೇರಲಾಗುತ್ತಿದೆ. ಸಿಐಡಿಗೆ ಈ ಪ್ರಕರಣ ವಹಿಸುವ ನೆಪದಲ್ಲಿ ಮನೆ ಒಡೆಯುವ ಕೆಲಸ ಮಾಡುತ್ತಿರುವ ಸರ್ಕಾರ, ಸಾಕ್ಷಿನಾಶಕ್ಕೂ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದಲ್ಲಿ ಡಿ.ಕೆ.ರವಿ ಹುಟ್ಟೂರಾದ ಕುಣಿಗಲ್‌ನ ದೊಡ್ಡಕೊಪ್ಪಲಿನಿಂದ ಬೆಂಗಳೂರಿನವರೆಗೆ ಬಿಜೆಪಿ ಪಾದಯಾತ್ರೆ ನಡೆಸಿ ವಿಧಾನಸೌಧ ಹಾಗೂ ಮುಖ್ಯಮತ್ರಿ ಮನೆಗೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿದರು. ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಮಾತನಾಡಿ, ನಿರ್ಭಯ ಪ್ರಕರಣದಂತೆ ಡಿ.ಕೆ.ರವಿ ಪ್ರಕರಣ ಜನಾಕ್ರೋಶ ಮೂಡಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ, ರಾಜ್ಯಸರ್ಕಾರ ಶಿಫಾರಸು ಮಾಡಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಹೇಳಿದ್ದಾರೆ. ಎಂ.ಎನ್.ರೆಡ್ಡಿ ಆತ್ಮಹತ್ಯೆ ಪ್ರಕರಣ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತ ಮತ್ತೊಂದು ಕುಟುಂಬ ಬಲಿ ಪಡೆಯಲು ಹೊರಟಿದೆ. ಒತ್ತಾಯಪೂರ್ವಕವಾಗಿ ಆ ಅಧಿಕಾರಿಯಿಂದ ಹೇಳಿಕೆ ಪಡೆಯಲಾಗಿದೆ ಎಂದು ಆರೋಪಿಸಿದರು.
ಇಂತಹ ಪ್ರಕರಣಗಳ ತನಿಖೆ ನಡೆಯುವಾಗ ಮಧ್ಯಂತರ ವರದಿ ಮಂಡನೆ ಸರಿಯಲ್ಲ. ಇದು ಕಾನೂನು ವಿರುದ್ಧವಾಗುತ್ತದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಅಡ್ವೈಜರಿ ಕಮಿಟಿ ಕಳುಹಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವ ಅನಂತ್‌ಕುಮಾರ್ ಅವರಿಗೆ ಮನವಿ ಪತ್ರ ನೀಡಿದರು. ಕೇಂದ್ರ ರಸಗೊಬ್ಬರ ಸಚಿವ ಅನಂತ್‌ಕುಮಾರ್ ಮಾತನಾಡಿ, ಭೂ ಮಾಫಿಯಾ, ಮರಳು ಮಾಫಿಯಾ ತಡೆಗಟ್ಟಿ ತೆರಿಗೆ ಸಂಗ್ರಹದಲ್ಲಿ ಸಾಧನೆ ಮಾಡಿದ ಐಎಎಸ್ ಅಧಿಕಾರಿ ಡಿ.ಕೆ.ರವಿ ಕೆಲಸ ಪ್ರಧಾನಿ ಗಮನಕ್ಕೂ ಬಂದಿದೆ. ಸಿಬಿಐ ತನಿಖೆಯನ್ನು ವಿಳಂಬ ಮಾಡುವ ಮೂಲಕ ಸಾಕ್ಷಿ ನಾಶ ಆತಂಕ ಎದುರಾಗಿದೆ. ಸಿಬಿಐ ತನಿಖೆಗೆ ವಹಿಸುವ ಸಂಬಂಧ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈಶ್ವರಪ್ಪ ಮಾತನಾಡಿ, ಸಿಬಿಐಗೆ ಈ ಪ್ರಕರಣ ವಹಿಸುವವರೆಗೂ ನಮ್ಮ ಹೋರಾಟ ನಿಲ್ಲದು. ಪಕ್ಷಾತೀತವಾಗಿ ಮಂಗಳವಾರ ಕುಣಿಗಲ್‌ನ ದೊಡ್ಡಕೊಪ್ಪಲಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸಿಬಿಐಗೆ ಪ್ರಕರಣ ವಹಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ವಿನಾಶಕಾಲೆ ವಿಪರೀತ ಬುದ್ಧಿ ಎಂಬಂತೆ ರಾಜ್ಯಸರ್ಕಾರ ವರ್ತಿಸುತ್ತಿದೆ ಎಂದು ದೂರಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರವಿ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕಾಗಿದೆ. ಹಾಗಾಗಿ ಸಿಬಿಐಗೆ ವಹಿಸುವುದು ಸೂಕ್ತ. ಜನಾಭಿಪ್ರಾಯವಿದ್ದರೂ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಅಧಿಕಾರಿಗಳು ಲೇಖನ ಸ್ಥಗಿತ ಹೋರಾಟ ನಡೆಸುವ ಸ್ಥಿತಿಗೆ ಸರ್ಕಾರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಚ್ಚೇಗೌಡ, ಶಾಸಕರಾದ ಮುನಿರಾಜು, ಅಶ್ವತ್ಥನಾರಾಯಣ, ಸಂಸದರಾದ ಶ್ರೀರಾಮುಲು, ಪ್ರತಾಪ್‌ಸಿಂಹ, ಸುರೇಶ್‌ಕುಮಾರ್, ತಾರಾ, ಎಂ.ಕೃಷ್ಣಪ್ಪ, ಕರಡಿ ಸಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.