ಕನ್ನಡ ವಾರ್ತೆಗಳು

ಎಂಡೋ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ :ಎಂಡೋ ಸಂತ್ರಸ್ತ ಎಪಿಎಲ್ ಕಾರ್ಡ್‌ದಾರರಿಗೆ ಉಚಿತ ಪಡಿತರಕ್ಕೆ ಪ್ರಸ್ತಾವನೆ

Pinterest LinkedIn Tumblr

Endo_Meet_Dc

ಮಂಗಳೂರು, ಮಾ.20: ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಪೀಡಿತರಾಗಿದ್ದು, ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಪಡಿತರ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವ ಸತಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಎಂಡೋಸಲ್ಫಾನ್ ಪೀಡಿತ ಕುಟುಂಬದ ಹಿತ ದೃಷ್ಟಿಯಿಂದ ಈ ಪ್ರಸ್ತಾವನೆ ಕಳುಹಿಸಿ ನೆರವು ನೀಡುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ ಎಂದ ಜಿಲ್ಲಾಧಿಕಾರಿ, ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದರು.

ಎಂಡೋಸಲ್ಫಾನ್ ಪೀಡಿತರಿಗೆ ಮೂರು ತಿಂಗಳಿನಿಂದ ಮಾಸಾಶನವಿಲ್ಲ :ಶ್ರೀಧರ ಗೌಡ

2015ರ ಜನವರಿ, ಫೆಬ್ರವರಿ, ಮಾರ್ಚ್ ಹೀಗೆ ಕಳೆದ ಮೂರು ತಿಂಗಳಿನಿಂದ ಎಂಡೋಸಲ್ಫಾನ್ ಪೀಡಿತರಿಗೆ ನೀಡಲಾಗುವ ಮಾಸಾಶನ ನೀಡಿಲ್ಲ. ಇದು ಎಂಡೋ ಸಲ್ಫಾನ್ ಪೀಡಿತರ ಬಗ್ಗೆ ಸರಕಾರದ ನಿರ್ಲಕ್ಷ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡದ ಅಧ್ಯಕ್ಷ ಶ್ರೀಧರ ಗೌಡ ಕೆ.ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಯಾವ ಕಾರಣಕ್ಕೂ ಮಾಸಾಶನ ಸ್ಥಗಿತಗೊಳ್ಳಬಾರದು. ತಕ್ಷಣ ಮಾಸಾಶನದ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ತಂಗಡಿ ತಾಲೂಕಿನ ಶಿರ್ತಾಡಿಯಲ್ಲಿ ಎಂಡೋಸಲ್ಫಾನ್ ಪೀಡಿತರ ಶಿಬಿರ ನಡೆಸಿ ಹೆಚ್ಚುವರಿ ಚಿಕಿತ್ಸೆಗಾಗಿ 6 ಮಂದಿ ಯನ್ನು ವೆನ್ಲಾಕ್ ಆಸ್ಪತ್ರೆಗೆ ಬರುವಂತೆ ಸೂಚಿ ಸಲಾಗಿತ್ತು. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಇದು ನೊಂದ ಪೀಡಿತರಿಗೆ ಇಲಾಖೆ ಮಾಡುವ ಅವಮಾನವಾಗಿದೆ ಎಂದು ಶ್ರೀಧರ ಗೌಡ ಕೆ. ಹೇಳಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷವನ್ನು ಸಹಿಸಲು ಸಾಧ್ಯವಿಲ್ಲ. ಶಿಬಿರ ನಡೆಸಿದ ಬಳಿಕ ಅದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವುದು ಇಲಾಖೆಯ ಜವಾಬ್ದಾರಿ ಎಂದು ಎಚ್ಚರಿಸಿದರು.

ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಆಗ್ರಹ : ಡಾ. ರವೀಂದ್ರನಾಥ ಶಾನ್‌ಬಾಗ್

ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಬೇಕು ಎಂದು ಸಂತ್ರಸ್ತರ ಪೋಷಕರು ಮತ್ತು ಸಂತ್ರಸ್ತರ ಪರವಾಗಿ ಹೋರಾಟ ಮಾಡುವ ಸಂಘಟನೆಗಳು ಆಗ್ರಹಿಸಿದವು. ತಾತ್ಕಾಲಿಕ ಪುನರ್ವಸತಿ ಕೇಂದ್ರದ ಬದಲು ಶಾಶ್ವತ ಕೇಂದ್ರ ತೆರೆದರೆ ಎಂಡೋ ಪೀಡಿತರಿಗೆ ಉಪಕಾ ರವಾಗಲಿದೆ. ಕುಟುಂಬದ ಹಿರಿಯರು ಸಾವಿಗೀಡಾದರೆ ಎಂಡೋ ಪೀಡಿತರಿಗೆ ದಿಕ್ಕಿಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ ಎಂದು ಡಾ. ರವೀಂದ್ರನಾಥ ಶಾನ್‌ಬಾಗ್ ಅಭಿಪ್ರಾಯಪಟ್ಟರು.

ಎಂಡೋ ಪೀಡಿ ತರ ಬಗ್ಗೆ ಸಮಗ್ರ ಸಮೀಕ್ಷೆ ಮಾಡದ ಕಾರಣ ಎಂಡೋಪೀಡಿತರ ಸಂಖ್ಯೆ ನಿಖರವಾಗಿಲ್ಲ. ಅಲ್ಲದೆ ಅರ್ಹ ಸಂತ್ರಸ್ತರು ಫಲಾನುಭವಿಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ. ಅರ್ಹರಲ್ಲದವರು ಸರಕಾರದ ಮಾಸಾಶನ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಪೀರ್ ಒತ್ತಾಯಿಸಿದರು.

ಎಂಡೋ ಪೀಡಿತರ ಬಗ್ಗೆ ಆರೋಗ್ಯ ಇಲಾಖೆ ಕೊಡುವ ಅಂಕಿ ಅಂಶ ಸರಿ ಇಲ್ಲ. ಮಾಹಿತಿಯೂ ಅಸಮರ್ಪಕವಾಗಿದೆ. ನೆಟ್ಟನಿಗೆ ಮುಡ್ನೂರು ಗ್ರಾಮದಲ್ಲಿ ಎಂಡೋಸಲ್ಫಾನ್‌ಗೆ ತುತ್ತಾಗಿ 6 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಆ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಇಲ್ಲ ಎಂದು ಹೋರಾಟಗಾರರು ದೂರಿದರು.

ಸಭೆಯಲ್ಲಿ ಜಿಪಂ ಸಿಇಒ ಶ್ರೀವಿದ್ಯಾ, ಡಿಎಚ್‌ಒ ಡಾ.ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.

Write A Comment