-ಯತೀಶ್ ಕುಮಾರ್ ಜಿ.ಡಿ
ರೆನಾಲ್ಟ್ ಸಂಸ್ಥೆಯ ಸಣ್ಣ ಎಸ್‌ಯುವಿ ಡಸ್ಟರ್ ಭಾರತದಲ್ಲಿ ಕಾಲಿರಿಸಿದ್ದೇ ತಡ ಹೊಸದೊಂದು ಶಕೆಯೇ ವಾಹನ ಪ್ರಪಂಚದಲ್ಲಿ ಆರಂಭವಾಯಿತು. ಒಂದೇ ವರ್ಷದಲ್ಲಿ ಈ ವಾಹನಕ್ಕೆ ಎಷ್ಟು ಬೇಡಿಕೆ ದೊರಕಿತು ಎಂದರೆ ಉಳಿದ ಕಂಪೆನಿಗಳು ಸಹ ಇದೇ ವರ್ಗದ ವಾಹನ ಉತ್ಪಾದನೆ ಆರಂಭಿಸಿದವು. ನಿಸಾನ್‌ನ ಟೆರೆನ್ನೊ ಡಸ್ಟನ್‌ನ ತದ್ರೂಪವೇ.
ಸ್ಕೋಡಾದ ಯೇತಿ, ಫೋರ್ಡ್ ಇಕೋಸ್ಪೋರ್ಟ್ ಸಂಪೂರ್ಣ ನವೀನ ಸಣ್ಣ ಎಸ್‌ಯುವಿಗಳಾದರೆ, ಫಿಯಟ್‌ನ ಅವೆಂಚುರಾ ಮತ್ತು ಮಹೀಂದ್ರಾ ಕಂಪೆನಿಯ ಕ್ವಂಟೋಅದೇ ಕಂಪೆನಿಯ ಈಗಾಗಲೇ ಅಸ್ತಿತ್ವದಲ್ಲಿರುವ ವಾಹನಗಳಿಗೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ ಮಾರುಕಟ್ಟೆಗೆ ಬಿಡಲಾಗಿದೆ.
ಭಾರತದಲ್ಲಿ ಈ ವರ್ಗಕ್ಕೆ ಪಟ್ಟಣಗಳಲ್ಲೇ ಅತಿ ಹೆಚ್ಚು ಬೇಡಿಕೆ. ಪಟ್ಟಣದ ಗ್ರಾಹಕರನ್ನೇ ಗಮನದಲ್ಲಿ ಇರಿಸಿಕೊಂಡು ಮತ್ತಷ್ಟು ವಾಹನಗಳು ಈ ವರ್ಷ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಮೇಲೆ ಹೇಳಿದ್ದು ಆರಂಭಿಕ ಐಶಾರಾಮಿ ವರ್ಗಕ್ಕೆ ಸೇರಿದ ವಾಹನಗಳಾದರೆ ಐಶಾರಾಮಿ ವರ್ಗಕ್ಕೆ ಸೇರಿದ ಔಡಿ, ಬಿಎಂಡಬ್ಲು ಹಾಗೂ ಮರ್ಸಿಡಸ್ ಬೆಂಜ್ ಸಹ ಈ ವರ್ಗದಲ್ಲಿ ಹಿಂದೆ ಬಿದ್ದಿಲ್ಲ. ಬೆಂಜ್‌ನ ಜಿಎಲ್‌ಎ 200, ಔಡಿಯ ಕ್ಯೂ 3, ಬಿಎಂಡಬ್ಲುನ ಎಕ್ಸ್ 1 ಸಹ ಇದೇ ವರ್ಗದಲ್ಲಿ ಪರಸ್ಪರ ಸ್ಪರ್ಧೆಗೆ ಇಳಿದಿವೆ.
ಜಿಎಲ್‌ಎ 200 ವಾಹನದ ಆಕರ್ಷಕ ಅಂಶ ಮುಂಭಾಗ ದಲ್ಲಿ ಎದ್ದು ಕಾಣುವ ಬೆಂಜ್ ಲೋಗೋ. ವಾಹನದ ಏರೋ ಡೈನಮಿಕ್ ವಿನ್ಯಾಸ. ಈ ವಾಹನವನ್ನು ಸುಮಾರು ಆರು ನೂರು ಕಿ.ಮೀ ಚಲಾಯಿಸಿ ಪೆಟ್ರೋಲ್ ವಾಹನದ ಗುಣಗಳನ್ನು ವಿಶ್ಲೇಷಿಸುವ ಅವಕಾಶ ದೊರೆಕಿತ್ತು. ಐಶಾರಾಮಿ ವಾಹನ ಎಂದ ಮೇಲೆ ಔಡಿಯ ಕ್ಯೂ 3, ಬಿಎಂಡಬ್ಲುನ ಎಕ್ಸ್ 1ಗೆ ಸರಿಸಮಾನವಾಗಿ ಅಭಿವೃದ್ಧಿ ಮಾಡಲಾಗಿದೆ. ಪ್ರತಿಸ್ಪರ್ಧಿ ವಾಹನಗಳಲ್ಲಿ ಆಟೋಗೇರ್ ಶಿಫ್ಟ್ ಸೌಲಭ್ಯವನ್ನು ಮುಂಭಾಗದ ಸೀಟಿನ ಮಧ್ಯಭಾಗದಲ್ಲಿ ನೀಡಿದ್ದರೆ, ಬೆಂಜ್ ಈ ಸೌಲಭ್ಯವನ್ನು ಸ್ಟೇರಿಂಗ್‌ನ ಹಿಂಬದಿ ಸ್ಟಿಕ್ ರೂಪದಲ್ಲಿ ಅಳವಡಿಸಿದೆ.
ಪ್ರತಿಸ್ಪರ್ಧಿ ವಾಹನಗಳಲ್ಲಿ ಇಲ್ಲದ ಹಲವು ಸೌಲಭ್ಯ ಜಿಎಲ್‌ಎ ಹೊಂದಿದೆ. ವಾಹನವು ಸ್ಪಯಂಚಾಲಿತ ಏಳು ಗೇರ್ ಹೊಂದಿದೆ. ಆಟೋಗೇರ್ ವಾಹನಗಳಲ್ಲಿ ಮುಂದಿರುವ ವಾಹನಗಳನ್ನು ಹಿಂದಿಕ್ಕಲು ಅಥವಾ ಹೆಚ್ಚಿನ ವೇಗವನ್ನು ಪಡೆದುಕೊಳ್ಳಲು ಆಕ್ಸಿಲರೇಟರ್ ಅನ್ನು ಮತ್ತಷ್ಟು ಒತ್ತಬೇಕಾಗು ತ್ತದೆ. ಆದರೆ ಬೆಂಜ್‌ನಲ್ಲಿ ವಾಹನ ಮುನ್ನುಗ್ಗುವ ಸಮಯದಲ್ಲಿ ಗೇರ್ ಅನ್ನು ಹೆಚ್ಚು– ಕಡಿಮೆ ಮಾಡಲು ಸ್ಟೇರಿಂಗ್‌ನ ಎರಡೂ ಬದಿಯಲ್ಲಿ ಪ್ರತ್ಯೇಕ ಸ್ಟಿಕ್ ಇದೆ. ಲೈಟ್ ನಿಯಂತ್ರಿಸಲು ಸ್ಟೇರಿಂಗ್‌ನ ಎಡಬದಿಯಲ್ಲಿ ಒಂದು ಸ್ಟಿಕ್ ಇದೆ. ಅದರ ಕೆಳಗೆ ಮತ್ತೊಂದು ಸಣ್ಣ ಸ್ಟಿಕ್ ನೀಡಿದ್ದಾರೆ. ಈ ಕಲ್ಪನೆಗೆ ಶಹಬ್ಬಾಸ್ ಎನ್ನಬೇಕು. ಇದನ್ನು ಒತ್ತಿದರೆ ಸಾಕು ವಾಹನ ವೇಗವಾಗಿ ಮುನ್ನುಗ್ಗುತ್ತದೆ. ಇದನ್ನು ಓವರ್‌ಟೇಕ್ ಮಾಡುವಾಗ ಬಳಸಬಹುದು.
ನಾನು ಹೊರಟ್ಟಿದ್ದು ಬೆಂಗಳೂರಿನಿಂದ ಮೈಸೂರು ಹೆದ್ದಾರಿಯಲ್ಲಿ. ಅಲ್ಲಿಂದ ಮುಂದಕ್ಕೆ ಹುಣಸೂರು ಮಾರ್ಗವಾಗಿ ನಾಗರಹೊಳೆಯತ್ತ. ಸಣ್ಣ ಎಸ್‌ಯುವಿಯನ್ನು ರಾಜ್ಯ ಹೆದ್ದಾರಿ ಹಾಗೂ ಕಚ್ಚಾ ರಸ್ತೆಯಲ್ಲೂ ಪರೀಕ್ಷಿಸುವ ಉದ್ದೇಶ ಇತ್ತು. ಕಚ್ಚಾ ರಸ್ತೆಯಲ್ಲಿ ಓಡಿಸಿದರೆ ಸಸ್ಪೆಷನ್‌ನ ನಿಜಗುಣ ಗೊತ್ತಾಗುತ್ತದೆ. ಎಸ್‌ಯುವಿ ಅಂದ ಮೇಲೆ ಕುಲುಕಾಟವನ್ನು ತಾಳಿಕೊಳ್ಳಬೇಕು. ಆದರೆ ವಾಹನದ ಸಮಸ್ಯೆ ಇರುವುದೇ ಶಾಕ್ ಅಬ್ಸರ್ವರ್‌ನಲ್ಲಿ.
ಹೆದ್ದಾರಿಯಲ್ಲಿ ಸುಯ್ ಎಂದು ಬೆಣ್ಣೆ ಯಂತೆ ನಯವಾಗಿ ಸಾಗುವ ವಾಹನ ಹಳ್ಳಕೊಳ್ಳದ ರಸ್ತೆಯಲ್ಲಿ ಕಾಟ ಕೊಡುತ್ತದೆ. ಇನ್ನು ಕಾರಿನ ಒಳಗೆ ಸಾಕಷ್ಟು ಜಾಗವಿದೆ. ಮುಂದಿನ ಸೀಟ್ ಅನ್ನು ಆರಾಮವಾಗಿರಲಿ ಎಂದು ಹಿಂದಕ್ಕೆ ಸರಿಸಿದರೆ ಹಿಂಬದಿ ಕೂತವರಿಗೆ ಕೊಂಚ ಇಕ್ಕಟ್ಟಾಗುತ್ತದೆ. ಇದನ್ನು ಸರಿಪಡಿಸಲು ಮುಂಬದಿ ಸೀಟನ್ನು ಮುಂದಕ್ಕೆ ಜಾರಿಸಿದರೆ ತಲೆ ಮೇಲ್ಛಾ ವಣಿಗೆ ಹತ್ತಿರವಾಗಿ ಅಸುರಕ್ಷತೆಯ ಭಾವ ತರುತ್ತದೆ. ಆದರೆ ವಾಹನದಲ್ಲಿ ಏಳು ಏರ್‌ಬ್ಯಾಗ್ ನೀಡಿ ರಕ್ಷಣೆ ನೀಡಿದ್ದಾರೆ. ಮುಂದಿನ ಎರಡೂ ಸೀಟ್‌ಗಳಿಗೆ ಎಲೆಕ್ಟ್ರಾನಿಕ್ ಹೊಂದಾಣಿಕೆ ಸೌಲಭ್ಯವಿದೆ. ಮೂರು ಬಗೆಯ ಹೊಂದಾಣಿಕೆ ಮೋಡ್ ಇದೆ. ಜೊತೆಯಲ್ಲಿ ಮ್ಯಾನುಯಲ್ ನಿಯಂತ್ರಣವೂ ಇದೆ.
ವಾಹನವನ್ನು ಆನ್ ಮಾಡಿದರೆ ಕೇವಲ 7.6 ಸೆಕೆಂಡ್‌ನಲ್ಲಿ ನೂರು ಕಿ.ಮೀ ವೇಗದಲ್ಲಿ ಮುನ್ನುಗ್ಗುತ್ತದೆ. ಒಳ್ಳೆಯ ಮೈಲೇಜ್ ಸಹ ಇದೆ. 1940 ಕೆ.ಜಿ ತೂಕದ ವಾಹನ ನಗರದ ಜೊತೆಗೆ ಹೆದ್ದಾರಿಗೂ ಸೂಕ್ತ. ವಾಹನದ ಮೇಲ್ಛಾವಣಿಯನ್ನು ತೆರೆಯುವ ಸೌಲಭ್ಯವಿದೆ. ಪ್ರಶಾಂತ ವಾತಾವರಣದಲ್ಲಿ ಇದನ್ನು ತೆರೆದು ಆನಂದಿಸಬಹುದು. ಐಶಾರಾಮಿ ವರ್ಗದ ಎಲ್ಲಾ ವಾಹನ ಗಳಲ್ಲೂ ಈ ಸೌಲಭ್ಯವಿರುತ್ತದೆ.
ಹೆಡ್‌ಲೈಟ್‌ನಲ್ಲಿ ಎಲ್‌ಇಡಿ ತಂತ್ರಜ್ಞಾನ ಅಳವಡಿಸಿದ್ದಾರೆ. ಬೆಳಿಗ್ಗೆಯೂ ಸಣ್ಣಗೆ ಮಿಂಚುತ್ತದೆ.
ಕೆಳಹಂತದ ವಾಹನದಲ್ಲಿ ಎಲ್‌ಇಡಿ ಪ್ರತ್ಯೇಕವಾಗಿ ಬಲ್ಬ್ ಮಾದರಿಯಲ್ಲಿರುತ್ತದೆ. ಆದರೆ ಇಲ್ಲಿ ಇದನ್ನು ನೋಡುವುದೇ ಅಂದ. ರಿವರ್ಸ್ ಕ್ಯಾಮೆರಾ, ಮ್ಯಾಪ್, ರೇಡಿಯೊ ಅಂತರ್ಗತವಾಗಿದೆ. ಉತ್ತಮ ಗುಣ ಮಟ್ಟದ ಹರ್ಮನ್ ಕಾರ್ಡನ್‌ನ 3ಡಿ ಸರೊಂಡ್ ಧ್ವನಿವರ್ಧಕ ವನ್ನು ಅಳವಡಿಸಿದ್ದಾರೆ. ಒಟ್ಟಾರೆ ಈ ಸಣ್ಣ ಎಸ್‌ಯುವಿ ಮೇಲ್ವರ್ಗದ ಗ್ರಾಹಕರನ್ನು ಮನಸೆಳೆಯುವುದರಲ್ಲಿ ಸಂಶಯವೇ ಇಲ್ಲ.
