ಕರ್ನಾಟಕ

ಹೇಗಿತ್ತು ಅಂದಿನ ಬೆಂಗಳೂರು: ಐದು ತಲೆಮಾರಿನ ಬಂಗಾರದ ಕಥೆ

Pinterest LinkedIn Tumblr

kkk

ಸುಶೀಲಾ ಡೋಣೂರ
ಹೇಗಿತ್ತು ಅಂದಿನ ಬೆಂಗಳೂರು, ಹೇಗಿತ್ತು ಅಂದಿನ ಚಿನ್ನದ ಜಗತ್ತು, ಅಂದು ಬಂಗಾರ ಖರೀದಿಸುವ ಗ್ರಾಹಕರು ಯಾರಿದ್ದರು, ಹೇಗಿತ್ತು ಅವರ ಆಸಕ್ತಿ–ಅಭಿರುಚಿ… ಬೆಂಗಳೂರಿನೊಂದಿಗೆ ಬೆಳೆದು ಬಂದ ಈ  ಹಳದಿ ಲೋಹದ ಕಥೆಯನ್ನು ಬಿಚ್ಚಿಟ್ಟಿದ್ದಾರೆ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಸಂಸ್ಥೆಯ ಸಿ.ವಿನೋದ್ ಹಯಗ್ರೀವಿ. ಅಂದಿನ ಬೆಂಗಳೂರು ಮತ್ತು ಬಂಗಾರದ ಕಥೆಯನ್ನು ಒಟ್ಟೊಟ್ಟಿಗೇ ಕಟ್ಟಿಕೊಟ್ಟ ಅವರ ಮಾತಿನ ಲಹರಿಯನ್ನು ಸುಶೀಲಾ ಡೋಣೂರ  ಇಲ್ಲಿ ದಾಖಲಿಸಿದ್ದಾರೆ.

ಅಂದಿನ ಬೆಂಗಳೂರು ಮತ್ತು ಚಿನ್ನದ ಜಗತ್ತು– ಎರಡೂ ಈಗಿನಂತಿರಲಿಲ್ಲ. ಜನರೂ, ಅವರ ಆಸಕ್ತಿಗಳೂ ಹೀಗಿರಲಿಲ್ಲ. ಕಳೆದ ಐದಾರು ದಶಕಗಳಿಂದ ಈಚೆಗೆ ಬದಲಾಗಿದ್ದು ಬೆಂಗಳೂರು ಮಾತ್ರವಲ್ಲ; ಬಂಗಾರದ ಲೋಕವೂ, ಧರಿಸುವವರ ಮನೋಭಿಲಾಷೆಯೂ…

ಅದು 1865–70ರ ನಡುವಿನ ಕಾಲ. ಅತ್ತ ಮೈಸೂರು, ಸಂಡೂರು ರಾಜ–ಮಹಾರಾಜರು, ಹೈದರಾಬಾದ್ ನಿಜಾಮರು, ಸವಣೂರಿನ ನವಾಬರು, ವಿದೇಶದಿಂದ ಬಂದು ನೆಲೆಸಿದ್ದ ಬ್ರಿಟಿಷರು… ಹೀಗೆ ಜಗತ್ತಿನ ಎಲ್ಲಾ ದಿಕ್ಕುಗಳ ಸಂಸ್ಕೃತಿಗಳು–ಪದ್ಧತಿಗಳು ಅಂದಿಗೆ ಮೈಸೂರು ರಾಜ್ಯವಾಗಿದ್ದ, ಇಂದಿನ ‘ಬೆಂಗಳೂರು’ ಎಂಬ ಈ ಮಹಾನಗರಿಯಲ್ಲಿ ಬಂದು ಸೇರಿದ್ದವು.
ಎಲ್ಲರೂ ಅವರವರ ನೆಲದ ಸಂಪ್ರದಾಯ, ಸಂಸ್ಕೃತಿಗಳನ್ನು ಬಿಂಬಿಸುವ  ಆಭರಣಗಳನ್ನು ಬಯಸುವವರು. ಅವರವರ ಅಭಿರುಚಿಗೆ ತಕ್ಕಂತೆ ಆಭರಣಗಳನ್ನು ಕೆತ್ತಿ ಕೊಡುವುದು ಸವಾಲಿನ ಸಂಗತಿಯೇನೊ ಆಗಿತ್ತು. ಅದೇ ವೇಳೆ ಅದೊಂದು ಅದ್ಭುತ ಅನುಭವ ಕಟ್ಟಿಕೊಟ್ಟ ಅವಕಾಶವೆಂದೂ ಹೇಳಬಹುದು.

ರಾಯಲ್ ಗ್ರಾಹಕರು
ಅಂದು ಗ್ರಾಹಕರೆಂದರೆ ಸಾಮಾನ್ಯರೇನೂ ಅಲ್ಲ. ಸಾಮಾನ್ಯ ಜನ, ದುಡಿಯುವ ವರ್ಗ ಆಗ ಬಂಗಾರದ ಅಂಗಡಿಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ಎನ್ನಿ. ರಾಜಮನೆತನದವರು, ನಿಜಾಮರು, ನವಾಬರು ಹಾಗೂ ಬ್ರಿಟ್ರಿಷರು ಅಗ್ರಪಂಕ್ತಿಯಲ್ಲಿ ಇರುತ್ತಿದ್ದರು. ಜಮೀನುದಾರರು, ವಿಜ್ಞಾನಿಗಳು, ವೈದ್ಯರು, ಎಂಜಿನಿಯರುಗಳು, ಅಧಿಕಾರಿ ವರ್ಗದವರೂ ಚಿನ್ನದ ಗ್ರಾಹಕರಾಗಿದ್ದರು.

ಇದಮಿತ್ಥಂ ಬೇಡಿಕೆ
ಪ್ರತಿಯೊಂದು ಮನೆತನಕ್ಕೂ ಅದರದೇ ಆದ ಅಭಿರುಚಿ, ವೈಯಕ್ತಿಕ ಆಸಕ್ತಿಗಳೂ ಇರುತ್ತಿದ್ದವು. ಪ್ರತಿ ಗ್ರಾಹಕರಿಗೂ ಅವರದೇ ಆದ ವಿಶಿಷ್ಟವೂ, ಕಲಾತ್ಮಕವೂ ಆದ ಸಂಗ್ರಹ ಬೇಕು.  ಹರಳು, ಪಚ್ಚೆ, ಮುತ್ತು, ರತ್ನಗಳನ್ನು ಬಳಸಿ ಪ್ರತಿಯೊಬ್ಬರಿಗೂ ವಿಶೇಷವೇ ಆದ ಆಭರಣ ಮಾಡಿ ಕೊಡುವುದಿತ್ತು. ಹಾರಗಳು, ಬೈತಲೆ ಆಭರಣ, ಬಳೆ, ಡಾಬು, ಕಿವಿಯೋಲೆ, ಮೂಗಿನ ನತ್ತು… ಎಷ್ಟು ಭಾರ ಇರಬೇಕು, ಎಷ್ಟು ಹರಳು, ಮುತ್ತು, ರತ್ನಗಳನ್ನು ಅಳವಡಿಸಬೇಕು, ಯಾವ ರೂಪದಲ್ಲಿರಬೇಕು ಎಂಬುದನ್ನೆಲ್ಲ ಯುವರಾಣಿಯರು ನಿಖರವಾಗಿ ಬರೆದು ಕೊಡುತ್ತಿದ್ದರು.

ರಾಜವಂಶದ ಕೂಸುಗಳಿಗೂ…
ರಾಜವಂಶದದಲ್ಲಿ ಒಂದು ಮಗು ಹುಟ್ಟಿತೆಂದರೆ ಆ ಸಂಭ್ರಮವನ್ನು ನಾಡಹಬ್ಬದಂತೆ ಆಚರಿಸಲಾಗುತ್ತಿತ್ತು. ಕೂಸು ಹುಟ್ಟಿದ ಕೂಡಲೇ ಅದರ ಅಳತೆಗೆ ತಕ್ಕಂತೆ ಸೊಂಟದ ಪಟ್ಟಿಯಿಂದ ಹಿಡಿದು ಕಿರೀಟದವರೆಗೆ ಎಲ್ಲಾ ರೀತಿಯ ಆಭರಣಗಳು ಸಿದ್ಧಗೊಳ್ಳುತ್ತಿದ್ದವು. ಅದು ಹೆಣ್ಣು ಮಗು ಆಗಿದ್ದರಂತೂ ಬೆಳೆದು ದೊಡ್ಡದಾಂತೆ ಮತ್ತೆ ಮತ್ತೆ ವಿಶೇಷ ಒಡವೆಗಳ ಸಿದ್ಧತೆ ನಡೆಯುತ್ತಿತ್ತು.

ಗ್ರಾಂಗಳ ಲೆಕ್ಕವೇ ಇರಲಿಲ್ಲ
ಆಗ ಗ್ರಾಂ ಲೆಕ್ಕವೇ ಇರಲಿಲ್ಲ. ‘ಎಷ್ಟು ಕೆ.ಜಿ., ಎಷ್ಟು ಸವರನ್, ಎಷ್ಟು ತೊಲ’ ಎನ್ನುವ ಲೆಕ್ಕದಲ್ಲಿ ಆಭರಣ ಸಿದ್ಧಗೊಳ್ಳುತ್ತಿದ್ದವು. ಚಿನ್ನದ ಗ್ರಾಹಕರು ಬೆರಳೆಣಿಕೆಯಲ್ಲಿದ್ದರೂ, ಚಿನ್ನದ ಜಗತ್ತು ಶ್ರೀಮಂತವಾಗಿದ್ದ ಕಾಲವದು. ತೊಲ–ತೊಲಗಳನ್ನು ತೂಗಿ ತೂಗಿ ಕೊಡುತ್ತಿದ್ದ ಕಾಲ. ಆಗಿನ ಆಭರಣಗಳನ್ನು ಈಗಿನ ಹೆಣ್ಣು ಮಕ್ಕಳಿಗೆ ಧರಿಸಲೂ ಆಗದು.

ಸ್ವಾತಂತ್ರ್ಯಾ ನಂತರವೂ ಅದೇ ಹೆಜ್ಜೆ
ಬೆಂಗಳೂರಿನ ಚಿನ್ನದ ಮಾರುಕಟ್ಟೆ ದೇಶದ ಇತರೆ ನಗರಗಳಿಗೆ ಹೋಲಿಸಿದರೆ   ವಿಶಿಷ್ಟವೂ, ವಿಭಿನ್ನವೂ ಆಗಿತ್ತು. ಬ್ರಿಟಿಷರೂ, ರಾಜವಂಶಸ್ಥರೂ ವಿನ್ಯಾಸ ಹಾಗೂ ಗುಣಮಟ್ಟದ ಬಗ್ಗೆ ಬಹಳ ನಿಖರವಾಗಿದ್ದರು. ಆ ಬದ್ಧತೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಅದೇ ನೀತಿ ನಮ್ಮ ಕೆಲಸದ ವೈಖರಿಯಾಗಿ ರೂಪುಗೊಂಡಿತು.
ದೇಶದ ಇತರೆ ಭಾಗಗಳಿಂದ ಜನ ಚಿನ್ನ ಖರೀದಿಗೆ ಬೆಂಗಳೂರಿಗೆ ಬರುತ್ತಿದ್ದರು. ಏಕೆಂದರೆ ಬ್ರಿಟಿಷರು ಯುರೋಪಿಯನ್ ಮಾದರಿಯ ವಿಶೇಷ ವಿನ್ಯಾಸವಿರುವ, ಗುಣಮಟ್ಟದಲ್ಲೂ ಅಷ್ಟೇ ಶ್ರೇಷ್ಠವಾಗಿರುವ ಆಭರಣಗಳ ಸಂಸ್ಕೃತಿಯನ್ನು ಇಲ್ಲಿ ತಂದಿದ್ದರು.

ಈ ನೆರಳು ಸ್ವಾತಂತ್ರ್ಯಾ ನಂತರವೂ ಹಾಗೇ ಮುಂದುವರಿಯಿತು. ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಅದೇ ಶ್ರೀಮಂತಿಕೆ, ಗುಣಮಟ್ಟ ಮುಂದೆ ಸಾಗಿತು.  ಬ್ರಿಟಿಷರ ಎಷ್ಟೋ ಆಚಾರ ವಿಚಾರ, ಸಂಸ್ಕೃತಿ, ಕಾನೂನುಗಳು ಇಂದಿಗೂ ನಮ್ಮ ನೆಲದಲ್ಲಿವೆ, ಅವರು ಕಟ್ಟಿ ಕೊಟ್ಟ ಕಟ್ಟಡಗಳು ನಮ್ಮಲ್ಲಿನ್ನೂ ನೆಲೆ ನಿಂತಿವೆ. ಹಾಗೆಯೇ ನೂರಾರು ವರ್ಷಗಳ ಹಿಂದೆ ಅವರು ಕಲಿಸಿ ಕೊಟ್ಟು ಹೋದ ಬಂಗಾರದ ಸಂಸ್ಕೃತಿಯೂ ಉಸಿರಾಡುತ್ತಿದೆ.

ಹೊಸ ಫ್ಯಾಷನ್, ಅದೇ ನೆರಳು
ಇಂದು ನಾವು ಹೊಸ ಫ್ಯಾಷನ್ ಎಂದು ಅದೆಷ್ಟೋ ವಿಶಿಷ್ಟ ವಿನ್ಯಾಸಗಳನ್ನು ತರುತ್ತೇವೆ. ಅವೆಲ್ಲ ಯಾವುದೋ ಒಂದು ಕಡೆಯ ಇತಿಹಾಸದ, ಯಾವುದೋ ಒಂದು ಕಾಲದ, ಯಾವುದೋ ಮನೆತನದ ಸಂಪ್ರದಾಯದ ತುಣುಕಾಗಿರುತ್ತದೆ.
ತಾಂತ್ರಿಕತೆ ಸಾಕಷ್ಟು ಮುಂದುವರೆದಿದೆ. ತರಬೇತಿ ಪಡೆದ ವಿನ್ಯಾಸಕರಿದ್ದಾರೆ. ಆದರೆ ಇಂದಿನ ಚಿನ್ನದ ಲೋಕ ಅಂದಿನ ಚಿನ್ನದ ಅರಮನೆಯ ನೆರಳಿನಲ್ಲಿಯೇ ಇರುವುದು  ಮಾತ್ರ ಸತ್ಯ.

145 ವರ್ಷ ವರ್ಷಗಳ ಸುದೀರ್ಘ ಇತಿಹಾಸ
ಬರೋಬ್ಬರಿ 145 ವರ್ಷ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕೃಷ್ಣಯ್ಯ ಚೆಟ್ಟಿ ಸಂಸ್ಥೆಯ ಐದನೇ ತಲೆಮಾರು  ಸಿ.ವಿನೋದ್ ಹಯಗ್ರೀವಿ ಸುಮಾರು ಮೂರು ದಶಕಗಳ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ‘ಚಿನ್ನದ ವ್ಯವಹಾರ ಕೇವಲ ಹಣಕಾಸಿನ ಲೆಕ್ಕಾಚಾರದಲ್ಲಿಲ್ಲ. ಅದು ಯಾವತ್ತಿಗೂ ಜನರ ಭಾವನೆಗಳೊಂದಿಗೆ ಗುರುತಿಸಿಕೊಂಡಿರುವ ಹಾಗೂ ಒಂದು ದೇಶದ, ಒಂದು ಕಾಲದ, ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ಮೌಲ್ಯಗಳನ್ನು ಪ್ರತಿನಿಧಿಸುವ ನಮ್ಮ ಬದುಕಿನ ಬಹುಮುಖ್ಯ ಪರಿಚಾರಿಕೆ’ ಎನ್ನುವುದು ಅವರ ಗ್ರಹಿಕೆ.

ಅಜ್ಜ, ಅಪ್ಪ ಯಾರೂ ಚಿನ್ನವನ್ನು ಹಣದೊಂದಿಗಿನ ಲೆಕ್ಕಾಚಾರವೆಂದು ಗುರುತಿಸಲಿಲ್ಲ. ಗ್ರಾಹಕರು ಕೇವಲ ನಮ್ಮ ಉತ್ಪನ್ನಗಳನ್ನು ಕೊಳ್ಳುವ ಖರೀದಿದಾರರಲ್ಲ, ಭಾವನೆ ಹಾಗೂ ಸಂಸ್ಕೃತಿಯ ಪ್ರತೀಕವದು. ಪ್ರೀತಿ–ಗೌರವದ ಕೊಂಡು–ಕೊಳ್ಳುವಿಕೆ ಎಂದು ನಂಬಿದ್ದರು.  ಇಂದಿಗೂ ಅದೇ ರೀತಿ ನಡೆದುಕೊಂಡು ಹೊರಟಿದೆ.

Write A Comment