ಮೂಲ್ಕಿ: ಕಿನ್ನಿಗೋಳಿ ಬಳಿಯ ಪಕ್ಷಿಕೆರೆ ಹೊಸಕಾಡಿನ ಮೂರು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು ಮನೆಗಳಿಂದ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ನಗದನ್ನು ಕಳ್ಳರು ದೋಚಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಪಕ್ಷಿಕೆರೆ ಪೇಟೆಯಲ್ಲಿ ಹಾರ್ಡ್ವೇರ್ ಅಂಗಡಿಯನ್ನು ಹೊಂದಿರುವ ವಿಶ್ವನಾಥ ಶೆಟ್ಟಿಗಾರ್ ಎಂಬವರ ಮನೆಯ ಎದುರಿನ ಬಾಗಿಲಿನ ಒಳಗಿನ ಚಿಲಕವನ್ನು ಕಿಟಿಕಿಯಿಂದ ಕೊಕ್ಕೆಯೊಂದರ ಸಹಾಯದಿಂದ ತೆಗೆದು ಒಳ ಪ್ರವೇಶಿಸಿದ ಕಳ್ಳರು, ವಿಶ್ವನಾಥ ದಂಪತಿಗಳು ಮಲಗಿದ್ದ ಕೋಣೆಯ ಕಪಾಟಿನಿಂದಲೇ ಸುಮಾರು ೧೭.೫ ಪವನ್ ಬಂಗಾರ ಹಾಗೂ ೧೦ ಸಾವಿರ ನಗದನ್ನು ಕಳ್ಳತನ ಮಾಡುವಲ್ಲಿ ಯಶಸ್ಸಾಗಿದ್ದಾರೆ.
ಕಳ್ಳರು ಮನೆ ಬಾಗಿಲಿನ ಚಿಲಕ ಒಳಬದಿಯಿಂದ ಸುಲಭವಾಗಿ ತೆರೆಯಲು ಸೋಪ್ ಆಯಿಲ್ನ್ನು ಕಿಟಕಿಯ ಮೂಲಕ ಸಿಂಪಡಿಸಿರುವುದು ಕಂಡು ಬಂದಿದೆ. ಕಳ್ಳತನ ನಡೆಯುವಾಗ ಮನೆಯಲ್ಲಿ ನಾಲ್ಕು ಮಂದಿ ಮಲಗಿದ್ದರೂ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಪಕ್ಕದಲ್ಲಿರುವ ಅಹಮದ್ ಎಂಬುವವರ ಮನೆಯಿಂದ ಕಳ್ಳತನ ನಡೆಸಲು ಹಿಂಬಾಗಿಲಿನ ಚಿಲಕವನ್ನು ತೆಗೆಯಲು ವಿಫಲಯತ್ನ ನಡೆಸಿದ್ದು ತೆಗೆಯಲು ಆಗದೇ ಮುಂಬಾಗಿಲಿನ ಹೊರಭಾಗದ ಚಿಲಕವನ್ನು ಹಾಕಿ ಪರಾರಿಯಾಗಿದ್ದಾರೆ.
ಅದೇ ಪರಿಸರದ ಕೆಳ ಬದಿಯಲ್ಲಿರುವ ಹರೀಶ್ ಸುವರ್ಣ ಎಂಬವರ ಮನೆಗೆ ನುಗ್ಗಿರುವ ಕಳ್ಳರು ಕಿಟಿಕಿಯ ಮೂಲಕ ಮನೆಯ ಹಿಂಬಾಗಿಲಿನ ಚಿಲಕವನ್ನು ತೆಗೆದು ಮನೆಯ ಕೋಣೆಯಲ್ಲಿದ್ದ ಕಪಾಟನ್ನು ತೆರೆಯಲು ಯತ್ನಿಸಿದ್ದು ಅದು ಫಲಕಾರಿಯಾಗದೇ ಹರೀಶ್ ಸುವರ್ಣ ದಂಪತಿಗಳು ಮಲಗಿದ್ದ ಕೋಣೆಯಲ್ಲೇ ಇದ್ದ ಸೂಟ್ಕೇಸನ್ನು ಕಳವು ಮಾಡಿ ಅಡುಗೆ ಕೋಣೆಯಲ್ಲಿ ಅದನ್ನು ಒಡೆದು ಅದರಲ್ಲಿದ್ದ ೧೦ ಸಾವಿರ ನಗದು ಹಣ ದೋಚಿದ್ದಾರೆ.
ಕಳ್ಳರು ಕೋಣೆಯಲ್ಲಿ ಕಳ್ಳತನ ಮಾಡುತ್ತಿರುವುದನ್ನು ಹರೀಶ್ ಸುರ್ಣರ ಮಗಳಿಗೆ ಗೊತ್ತಾದರು ಪ್ರಾಣಭಯದಿಂದ ಮಲಗಿದ್ದು ಬೇಕೆಂದೇ ಕೆಮ್ಮಿದ್ದರಿಂದ ಕಳ್ಳರು ಜಾಗ ಖಾಲಿ ಮಾಡಿದರು ನಂತರ ನಮ್ಮನ್ನು ಎಬ್ಬಿಸಿ ಘಟನೆ ಬಗ್ಗೆ ತಿಳಿಸಿದಾಗ ಪಂಚಾಯಿತಿ ಸದಸ್ಯ ಮಯ್ಯದಿ ಎಂಬುವರಿಗೆ ಮಾಹಿತಿ ನೀಡಿದೆವು ಅವರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಹರೀಶ್ ಸುವರ್ಣ ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಶ್ವಾನದಳ ಪಕ್ಕದ ಗುಡ್ಡ ಪ್ರದೇಶದಲ್ಲಿ ಸುಮಾರು ೧೦೦ ಮೀಟರ್ ರಸ್ತೆಯ ಮೂಲಕ ಸಾಗಿ ನಂತರ ಕಾಲು ದಾರಿ ಮೂಲಕ ಸಾಗಿತು. ಅಲ್ಲಿ ಬೈಕ್ ಚಕ್ರದ ಗುರುತುಗಳಿದ್ದವು. ಕಳ್ಳರು ತಮ್ಮ ಬೈಕ್ನ್ನು ಅಲ್ಲಿ ನಿಲ್ಲಿಸಿ ನಡೆದುಕೊಂಡು ಬಂದು ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂಬ ಗುಮಾನಿ ಪೊಲೀಸರಿಗೆ ವ್ಯಕ್ತವಾಗಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ವೃತ್ತಿಪರ ತಂಡದ ಕೃತ್ಯ..?
ಸುಮಾರು ಆರು ತಿಂಗಳ ಹಿಂದೆ ಈ ಪರಿಸರದ ೧೦೦ ಮೀಟರ್ ದೂರದಲ್ಲಿನ ಮುಖ್ಯರಸ್ತೆಯಲ್ಲಿರುವ ಮನೆಯೊಂದರಲ್ಲಿ ಇದೇ ರೀತಿಯಲ್ಲಿ ಕಳ್ಳತನ ನಡೆದಿದ್ದು ಆ ಮನೆಯ ಸಿ,ಸಿ ಕ್ಯಾಮಾರ ಹೊಡೆದು ಹಾಕಿ ಮನೆಗೆ ನುಗ್ಗಿ, ಮನೆಯಲ್ಲಿ ಜನರಿದ್ದರು ಸೋಪ್ ಆಯಿಲ್ ಬಳಸಿ ಚಿಲಕವನ್ನು ತೆಗೆದು ಕಳ್ಳತನ ನಡೆಸಿದ್ದರು.
ಆ ನಂತರ ಮೂರು ತಿಂಗಳ ಹಿಂದೆ ಹಳೆಯಂಗಡಿ ತೋಕೂರು ಲೈಟ್ ಹೌಸ್ ಬಳಿಯ ಬೇಕರಿ ಉದ್ಯಮಿಯೋರ್ವರ ಮನೆಯಲ್ಲಿಯೂ ಸಹ ಇದೇ ರೀತಿಯ ಕಳ್ಳತನ ನಡೆದಿದ್ದು ಪ್ರಕರಣಗಳ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಈಗ ಪಕ್ಷಿಕೆರೆಯ ಮನೆಗಳಲ್ಲೂ ಇದೇ ರೀತಿ ಕೃತ್ಯ ನಡೆದಿದ್ದು ಇದು ವೃತ್ತಿ ಪರ ತಂಡದ ಕೃತ್ಯ ಎಂದು ಪೊಲೀಸರು ಬಲವಾಗಿ ಸಂಶಯಿಸಿದ್ದಾರೆ.
_ನರೇಂದ್ರ ಕೆರೆಕಾಡು