ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಸೀಮೆಎಣ್ಣೆ ಮುಕ್ತ ನಗರವಾಗಿ ಘೋಷಿಸಲಾಗಿದ್ದು ನಗರ ವ್ಯಾಪ್ತಿಯ ಅಧಿಕೃತ ವಾಸಿಗಳ ಪೈಕಿ ಅಡುಗೆ ಅನಿಲ ರಹಿತ ಎಲ್ಲಾ298 ಫಲಾನುಭವಿಗಳಿಗೆ ಸುಮಾರು 5.80 ಲಕ್ಷ ರೂ. ವೆಚ್ಚದಲ್ಲಿ ಉಚಿತ ಅಡುಗೆ ಅನಿಲ ವಿತರಿಸುವ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವಾಗಿ ಬೆಳೆಯುತ್ತಿರುವ ನಗರವಾಗಿ ಮೂಲ್ಕಿ ಕಂಡು ಬಂದಿದ್ದು ಇಲ್ಲಿನ ಅಭಿವೃದ್ಧಿಯಲ್ಲಿ ಸಮುದಾಯವು ಸಹ ಮುಕ್ತವಾಗಿ ಭಾಗಿ ಆಗಬೇಕು ಎಂದು ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಲ್ಕಿ ಸಮುದಾಯ ಭವನದಲ್ಲಿ ಶನಿವಾರ ವಿವಿಧ ಕಾಮಗಾರಿಯ ಉದ್ಘಾಟನೆ ಮತ್ತು ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಲಿಂಗಪ್ಪಯ್ಯ ಕಾಡು ವ್ಯಾಪ್ತಿಯಲ್ಲಿ ಬೆಳ್ತಿಗೆ ಅಕ್ಕಿಯನ್ನು ಉಪಯೋಗಿಸುವ ವಲಸಿಗರು ಅಧಿಕವಿದ್ದು, ಕುಚ್ಚಲು ಅಕ್ಕಿ ವಿತರಣೆಯಿಂದ ತೊಂದರೆಯಾಗುತ್ತಿದೆ ಎಂದು ಮನವಿ ಬಂದಿದ್ದು ಈ ಹಿನ್ನಲೆಯಲ್ಲಿ ಆಹಾರ ಇಲಾಖೆಯಿಂದ ಮುಂದೆ ಬೆಳ್ತಿಗೆ ಅಕ್ಕಿಯನ್ನೇ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಮೂಲ್ಕಿ ಬಳಿಯ ಸಮುದ್ರ ಕೊರತೆಯ ತಡೆಗೋಡೆಗೆ ೫ ಕೋಟಿ ರೂ. ಮಂಜೂರುಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸ್ತೆ ಮತ್ತು ಅಕ್ಕಸಾಲಿಗರಕೇರಿ ರಸ್ತೆಯನ್ನು ೩೦ ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣ, ಹಾಗೂ ೭ಲಕ್ಷರೂ. ವೆಚ್ಚದಲ್ಲಿ ಪುರ್ ನಿರ್ಮಾಣಗೊಂಡ ಮೂಲ್ಕಿ ಪಂಚಾಯಿತಿ ಆವರಣದ ಉದ್ಯಾನವನವನ್ನು ಸಚಿವರು ಗಿಡಕ್ಕೆ ನೀರೆರೆಯುವ ಮೂಲಕ ಲೋಕಾರ್ಪಣೆಗೊಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ವಸಂತಿ ಭಂಡಾರಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ, ವಿಪಕ್ಷ ನಾಯಕಿ ವಿಮಲಾ ಪೂಜಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಉಪನಿರ್ದೇಶಕ ಶರಣ ಬಸಪ್ಪ, ನಿರೀಕ್ಷಕ ವಾಸು ಶೆಟ್ಟಿ, ಮುಖ್ಯಾಧಿಕಾರಿ ವಾಣಿ ಆಳ್ವ, ಇಂಜಿನಿಯರ್ ಪದ್ಮನಾಭ, ಆರೋಗ್ಯ ವಿಭಾಗದ ರಾಜೇಶ್, ಗುತ್ತಿಗೆದಾರ ರಾಘು ಸುವರ್ಣ, ಸಮಾಜ ಸೇವಕ ಯಾದವ ಕೋಟ್ಯಾನ್ ಪಡುಬೈಲ್, ಪಂಚಾಯಿತಿ ಸದಸ್ಯರಾದ ಪುರುಷೋತ್ತಮ ರಾವ್, ಬಿ.ಎಂ.ಆಸಿಫ್, ಪುತ್ತುಬಾವ, ರಾಧಿಕಾ ಕೋಟ್ಯಾನ್, ಬಶೀರ್ ಕುಳಾಯಿ ಇನ್ನಿತರರು ಹಾಜರಿದ್ದರು.
_ನರೇಂದ್ರ ಕೆರೆಕಾಡು