ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ.
ಹೊಸದಾಗಿ ಆಯ್ಕೆಯಾದ 67 ಮಂದಿ ಶಾಸಕರನ್ನೊಳಗೊಂಡ ಸಭೆಯಲ್ಲಿ ಕ್ರೇಜಿವಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಘೋಷಿಸಲಾಯಿತು.
‘ಸಭೆಯಲ್ಲಿ ಕೇಜ್ರಿವಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಗಿದೆ. ಇದಕ್ಕೆ ಕೇಜ್ರಿವಾಲ್ ಅವರೂ ಸಮ್ಮತಿಸಿದ್ದಾರೆ. ನಾವು ರಾಜ್ಯಪಾಲ ನಜೀಬ್ ಜಂಗ್ ಅವರನ್ನು ಭೇಟಿ ಮಾಡಲಿದ್ದೇವೆ’ ಎಂದು ಚಾಂದನಿ ಚೌಕ್ ಕ್ಷೇತ್ರದ ಎಎಪಿ ಶಾಸಕಿ ಅಲ್ಕಾ ಲಾಂಬ ಹೇಳಿದ್ದಾರೆ.
‘ಸಭೆಯಲ್ಲಿ ಕೇಜ್ರಿವಾಲ್ ಅವರು ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ದೆಹಲಿಯ ಜನತೆಗೆ ಧನ್ಯವಾದ ಅರ್ಪಿಸಿದರು’ ಎಂದು ಲಾಂಬ ತಿಳಿಸಿದ್ದಾರೆ.
