ನವದೆಹಲಿ: ದೆಹಲಿಯಲ್ಲಿ ಬೀಸಿದ ‘ಎಎಪಿ ಚಂಡಮಾರುತ’ಕ್ಕೆ ಸಿಲುಕಿ ಬಿಜೆಪಿ ಮತ್ತು ಕಾಂಗ್ರೆಸ್ ದೂಳಿಪಟವಾಗಿವೆ. ಎರಡೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕೇಜ್ರಿವಾಲ್ ನೇತೃತ್ವದ ಪಕ್ಷವು ರೂಢಿಗತ ರಾಜಕಾರಣವನ್ನು ನುಚ್ಚುನೂರು ಮಾಡಿದೆ.
ರಾಜಧಾನಿ ಮತದಾರರು ‘ಐತಿಹಾಸಿಕ ತೀರ್ಪು’ ನೀಡಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಏಕಪಕ್ಷೀಯ ತೀರ್ಪು ಹೊರಬಂದಿರುವುದು ತುಂಬ ವಿರಳ. ಇಂಥದೊಂದು ಫಲಿತಾಂಶ ಬರಬಹುದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಎಪಿ–, ಬಿಜೆಪಿ ನಾಯಕರು ಅಥವಾ ರಾಜಕೀಯ ಪಂಡಿತರಿಗೂ ಕಲ್ಪನೆ ಇರಲಿಲ್ಲ. ಲೋಕಸಭೆ ಚುನಾವಣೆ ಬಳಿಕ ನಡೆದ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಹಾಗೂ ಜಮ್ಮು– ಕಾಶ್ಮೀರ ವಿಧಾನಸಭೆ ಚುನಾವಣೆಗಳಲ್ಲಿ ನಾಗಾಲೋಟದಲ್ಲಿ ಸಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಜೋಡಿ ದೆಹಲಿಯಲ್ಲಿ ಮುಗ್ಗರಿಸಿದೆ.
ಒಂದು ವರ್ಷದ ಪರಿಶ್ರಮದ ಫಲ:
ಜಾತಿ, ಮತ, ವರ್ಗ, ಧರ್ಮಗಳನ್ನು ಮೀರಿ ಜನ ಎಎಪಿ ಬೆಂಬಲಿಸಿದ್ದಾರೆ. ಒಟ್ಟು ಮತದಾರರಲ್ಲಿ ಅರ್ಧಕ್ಕೂ ಹೆಚ್ಚು ಜನ ಹೊಸ ಪಕ್ಷದ ಕೈಹಿಡಿದಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಸುಲಭವಾಗಿ ಒಲಿದ ಗೆಲುವಲ್ಲ. ಒಂದು ವರ್ಷದ ಪರಿಶ್ರಮದ ಫಲ. ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿ, 49ದಿನದಲ್ಲಿ ರಾಜೀನಾಮೆ ಕೊಟ್ಟ ಬಳಿಕ ಅವರು ಪ್ರತಿ ಬೀದಿ, ಓಣಿಗಳನ್ನು ಅಲೆದಿದ್ದಾರೆ. ಜನರಿಗೆ ಕೈ ಮುಗಿದಿದ್ದಾರೆ.
‘ರಾಜೀನಾಮೆ ಕೊಟ್ಟು ತಪ್ಪು ಮಾಡಿದ್ದೇನೆ. ಕ್ಷಮಿಸಿ, ಇನ್ನೊಂದು ಅವಕಾಶ ಕೊಡಿ’ ಎಂದು ಬೇಡಿದ್ದಾರೆ. ಅವರ ಮನವಿಗೆ ಜನಮನ್ನಣೆ ಸಿಕ್ಕಿದೆ.
ತಲೆಕೆಳಗಾದ ಬಿಜೆಪಿ ತಂತ್ರ: ಎಎಪಿ ಬಗ್ಗುಬಡಿಯಲು ಬಿಜೆಪಿ ಮಾಡಿದ ಎಲ್ಲ ರಾಜಕೀಯ ತಂತ್ರಗಳೂ ತಲೆಕೆಳಗಾಗಿವೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದ ಬಿಜೆಪಿ, ದೆಹಲಿ ಚುನಾವಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಘೋಷಿಸಿತು. ಮೋದಿ ಅವರ ಫೆಬ್ರುವರಿ 10ರ ರಾಮಲೀಲಾ ಮೈದಾನದ ಸಮಾವೇಶ ಜನರಿಲ್ಲದೆ ಸೊರಗಿದ ಬಳಿಕ ಹತಾಶರಾದ ಬಿಜೆಪಿ ನಾಯಕರು ಅವಸರದಲ್ಲಿ ಬೇಡಿ ಅವರನ್ನು ಕರೆತಂದರು. ಮೊದಲೇ ಗುಂಪುಗಾರಿಕೆಯಿಂದ ನಲುಗಿದ್ದ ಪಕ್ಷಕ್ಕೆ ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
ನಿಷ್ಪ್ರಯೋಜಕವಾದ ಬೇಡಿ ಅಸ್ತ್ರ: ಬಿಜೆಪಿ ಪ್ರಯೋಗಿಸಿದ ‘ಬೇಡಿ ಅಸ್ತ್ರ’ ನಿಷ್ಪ್ರಯೋಜಕವಾದ ಬಳಿಕ ಪುನಃ ಮೋದಿ ವರ್ಚಸ್ಸನ್ನು ಪರೀಕ್ಷೆಗೊಡ್ಡಿತು. ಪ್ರಧಾನಿ ಸುಮಾರು ನಾಲ್ಕು ಸಭೆಗಳನ್ನು ನಡೆಸಿದರು. ಆ ಸಭೆಗಳೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿ ಆಗಲಿಲ್ಲ. ಬೇಡಿ ಪ್ರವೇಶದಿಂದ ಪಕ್ಷದೊಳಗಿನ ಅಸಮಾಧಾನ ಹೆಚ್ಚಾಯಿತು. ಕೆಳ ಹಂತದಲ್ಲಿ ಕಾರ್ಯಕರ್ತರು ಪಕ್ಷಕ್ಕೆ ಕೈ ಕೊಡಬಹುದೆಂದು ಅಂದಾಜಿಸಿದ ಅಮಿತ್ ಷಾ, ಸುಮಾರು 120 ಸಂಸದರು, ಎಐರಡು ಡಜನ್ ಸಚಿವರು, ಸಾವಿರಾರು ಕಾರ್ಯಕರ್ತರನ್ನು ಪ್ರಚಾರಕ್ಕೆ ನಿಯೋಜಿಸಿದರು. ಒಂದು ರೀತಿ ಇಡೀ ಕೇಂದ್ರ ಸರ್ಕಾರವೇ ಟೊಂಕ ಕಟ್ಟಿ ನಿಂತಿತು. ಬೇನಾಮಿ ಕಂಪೆನಿಗಳಿಂದ ಎರಡು ಕೋಟಿ ದೇಣಿಗೆ ಪಡೆದ ಆರೋಪವೂ ಸೇರಿ ಹೆಜ್ಜೆ, ಹೆಜ್ಜೆಗೂ ಎಎಪಿಗೆ ಬಿಜೆಪಿ ಅಡ್ಡಗಾಲು ಹಾಕಿತು. ಅದ್ಯಾವುದಕ್ಕೂ ಮತದಾರರು ಕಿವಿಗೊಡದೆ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದಾರೆ.
ನರೇಂದ್ರ ಮೋದಿ, ಕೇಜ್ರಿವಾಲ್ ಅವರನ್ನು ‘ನಕ್ಸಲರು’ ಎಂದು ಕರೆದರು. ಅವರನ್ನು ಕಾಡಿಗೆ ಅಟ್ಟಿ ಎಂದೂ ಅಬ್ಬರಿಸಿದರು. ಹೋರಾಟಗಾರರು, ಚಳವಳಿಗಾರರು ಆಡಳಿತ ಮಾಡಲು ಲಾಯಕ್ಕಿಲ್ಲ ಎಂದೂ ಜರಿದರು. ಕಾಂಗ್ರೆಸ್ ನಾಯಕರೂ ಅವರನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಕೇಜ್ರಿವಾಲ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜನರ ಮನೆ ಬಾಗಿಲಿಗೆ ಹೋಗುತ್ತಿದ್ದರು.
ಯಶಸ್ವಿಯಾದ ಸಕಾರಾತ್ಮಕ ಪ್ರಚಾರ: ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರು. ಎಎಪಿ ಪಕ್ಷ ಅಧಿಕಾರಕ್ಕೆ ಬಂದರೆ ಏನೇನು ಕೆಲಸ ಮಾಡಲಿದೆ ಎಂದು ಮನವರಿಕೆ ಮಾಡಿದರು. ಬೆಲೆ ಏರಿಕೆಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು. ಶಾಲೆ– ಕಾಲೇಜು ತೆರೆಯುವುದಾಗಿ ಮಾತು ಕೊಟ್ಟರು. ಎಎಪಿಯ 49 ದಿನದ ಸರ್ಕಾರ ಬಡವರಿಗೆ ಅರ್ಧ ದರದಲ್ಲಿ ವಿದ್ಯುತ್ ಪೂರೈಸಿದ್ದು, ಉಚಿತವಾಗಿ 700 ಲೀಟರ್ ನೀರು ಕೊಟ್ಟಿದ್ದು ನೆನಪು ಮಾಡಿದರು. ಪೊಲೀಸರ ಕಿರುಕುಳಕ್ಕೆ ಕಡಿವಾಣ ಹಾಕಿದ್ದನ್ನು ಪ್ರಸ್ತಾಪಿಸಿದರು. ಎಎಪಿಯ ಸಕಾರಾತ್ಮಕ ಪ್ರಚಾರ ಯಶಸ್ವಿಯಾಯಿತು.
ಕೇಜ್ರಿವಾಲ್ ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುವರೇ? ಉಚಿತ ನೀರು, ಅರ್ಧ ದರದ ವಿದ್ಯುತ್ ಪೂರೈಕೆಯಿಂದ ಆರ್ಥಿಕ ಹೊರೆಯನ್ನು ಹೇಗೆ ನಿಭಾಯಿಸುತ್ತಾರೆ? ಎಲ್ಲ ಜನ ಕಲ್ಯಾಣ ಕಾರ್ಯಕ್ರಮಗಳಿಗೂ ಸಂಪನ್ಮೂಲ ಹೇಗೆ ಹೊಂದಿಸುತ್ತಾರೆಂದು ಅವರ ರಾಜಕೀಯ ವಿರೋಧಿಗಳು ಕೇಳುತ್ತಿದ್ದಾರೆ.
ಒಂದಂತೂ ನಿಜ ಜನ ಎಎಪಿ ಸರ್ಕಾರದಿಂದ ಬಹಳಷ್ಟು ನಿರೀಕ್ಷಿಸಿದ್ದಾರೆ. ಕಳೆದ ಬಾರಿ ಆಯ್ಕೆಯಾದಾಗ ಮಾಡಿದ ತಪ್ಪನ್ನು ಪುನಃ ಮಾಡಬಾರದು ಎಂದು ಅಪೇಕ್ಷಿಸಿದ್ದಾರೆ. ಕೇಜ್ರಿವಾಲ್ ಮತ್ತು ಅವರ ಸಂಗಡಿಗರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಬಯಸಿದ್ದಾರೆ. ಎಎಪಿಗೆ ಮತದಾರರು ಅಧಿಕಾರ ಕೊಟ್ಟಿದ್ದಾರೆ. ಅವರು ಅದನ್ನು ಹೇಗೆ ಉಳಿಸಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುವರೇ? ಅಥವಾ ಅನಗತ್ಯ ಸಂಘರ್ಷಕ್ಕೆ ಇಳಿಯುವರೇ ಎನ್ನುವ ಕುತೂಹಲವಿದೆ.
ಚುನಾವಣೆ ಸೋಲಿನಿಂದ ಬಿಜೆಪಿ ನಾಯಕರು ತತ್ತರಿಸಿದ್ದಾರೆ. ಈ ಸೋಲು ಅವರಿಗೆ ಅನಿರೀಕ್ಷಿತ ಅಲ್ಲದಿದ್ದರೂ, ಇಷ್ಟೊಂದು ದೊಡ್ಡ ಹೊಡೆತ ಬೀಳಬಹುದು ಎಂದು ಭಾವಿಸಿರಲಿಲ್ಲ. ಪ್ರತಿ ಹಂತದಲ್ಲೂ ಅವರು ಎಡವಿದ್ದಾರೆ. ಅಭಿವೃದ್ಧಿ ಮಂತ್ರ ಪಠಿಸುತ್ತಾ ಲೋಕಸಭೆ ಚುನಾವಣೆ ಗೆದ್ದ ನರೇಂದ್ರ ಮೋದಿ ಸರ್ಕಾರ ಎಂಟು ತಿಂಗಳಲ್ಲಿ ಮಾತನಾಡುವುದನ್ನು ಬಿಟ್ಟು ಬೇರೆನೂ ಮಾಡಿಲ್ಲ. ಕೊಟ್ಟ ಮಾತು ಮರೆತು ‘ಘರ್ ವಾಪಸಿ’, ಚರ್ಚ್‌ಗಳ ಮೇಲೆ ದಾಳಿ, ಮತೀಯ ಗಲಭೆ ಹರಡುವ ಕೆಲಸದಲ್ಲಿ ಮಗ್ನವಾಗಿದೆ ಎಂಬ ಭಾವನೆ ರಾಜಧಾನಿ ಜನರಿಗೆ ಬಂದಿದೆ. ಬಹುತೇಕರಿಗೆ ಬಿಜೆಪಿ ಸಾಗುತ್ತಿರುವ ದಿಕ್ಕು ಇಷ್ಟವಾಗಿಲ್ಲ ಎನ್ನುವುದು ಸುಳ್ಳಲ್ಲ.
ನರೇಂದ್ರ ಮೋದಿ ಅವರನ್ನು ಹೆಜ್ಜೆ, ಹೆಜ್ಜೆಗೂ ತೂಗಿ ನೋಡುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ದೆಹಲಿ ಭೇಟಿ ಸಮಯದಲ್ಲಿ ಪ್ರಧಾನಿ ತೊಟ್ಟಿದ್ದ ಹತ್ತು ಲಕ್ಷ ರೂಪಾಯಿ ಸೂಟ್ ಮತದಾರರ ಕಣ್ಣು ಕುಕ್ಕಿದೆ. ಕೋಟಿನ ಮೇಲೆ ಪುಟ್ಟ ಅಕ್ಷರದಲ್ಲಿ ಹಾಕಲಾಗಿದ್ದ ‘ನರೇಂದ್ರ ದಾಮೋದರದಾಸ್ ಮೋದಿ’ ಹೆಸರಿನ ವಿನ್ಯಾಸ ಬಿಸಿ,ಬಿಸಿ ಚರ್ಚೆಗೆ ವಸ್ತುವಾಗಿದೆ. ಎನ್‌ಡಿಎ ಸರ್ಕಾರದ ನೀತಿ, ಕಾರ್ಯಕ್ರಮ, ಸುಗ್ರೀವಾಜ್ಞೆಗಳು ಜನರ ಟೀಕೆಗಳಿಗೆ ವಸ್ತುವಾಗಿವೆ.
ಅಸಹನೆಯ ಪ್ರತಿಫಲನ: ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್– ಚಲೋ ಚಲೇ ಮೋದಿ ಕೆ ಸಾಥ್’ ಎಂಬ ಘೋಷಣೆಯನ್ನು ಮತದಾರರು ತಿರಸ್ಕರಿಸಿದ್ದಾರೆ. ಚುನಾವಣೆ ಫಲಿತಾಂಶ ಮೋದಿ ಸರ್ಕಾರದ ಮೇಲಿನ ಜನಾಭಿಪ್ರಾಯ ಅಲ್ಲ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಇದು ಕೇಂದ್ರ ಸರ್ಕಾರದ ವಿರುದ್ಧದ ಜನಾಭಿಪ್ರಾಯ ಅಲ್ಲದಿದ್ದರೂ, ಅವರ ಆಡಳಿತದ ಮೇಲಿನ ಅಸಹನೆಯ ಪ್ರತಿಫಲನ. ಎಚ್ಚರಿಕೆ ಗಂಟೆ. ಏಕೆಂದರೆ ಪ್ರಧಾನಿ ಅವರೇ ಇದನ್ನು ಮಹತ್ವದ ಚುನಾವಣೆ ಎಂದು ವ್ಯಾಖ್ಯಾನಿಸಿದ್ದರು. ಇಡೀ ವಿಶ್ವವೇ ಈ ಕಡೆ ನೋಡುತ್ತಿದೆ ಎಂದಿದ್ದರು.
ಬಿಜೆಪಿಯೊಳಗೆ ಬಿರುಕು: ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯೊಳಗೆ ಬಿರುಕು ಕಾಣಿಸಿಕೊಂಡಿದೆ. ಮೋದಿ ಅವರಿಂದಾಗಿ ಮೂಲೆ ಸೇರಿರುವ ಹಿರಿಯ ನಾಯಕರು ಆಪ್ತ ವಲಯದಲ್ಲಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲವು ಸಂಸತ್ ಸದಸ್ಯರು ನಾಯಕತ್ವ ವಿರುದ್ಧ ಅಪಸ್ವರ ತೆಗೆದಿದ್ದಾರೆ. ಬಿಜೆಪಿಯೊಳಗೆ ಶುರುವಾಗುತ್ತಿರುವ ಅಸಮಾಧಾನವನ್ನು ಮೋದಿ, ಅಮಿತ್ ಷಾ ಹೇಗೆ ನಿಭಾಯಿಸುತ್ತಾರೆಂದು ನೋಡಬೇಕಿದೆ.
ಕಾಂಗ್ರೆಸ್ ಸೋಲಿನ ಯಾತ್ರೆ ಮುಂದುವರಿಸಿದಿದೆ. ಸೋನಿಯಾ ಹಾಗೂ ರಾಹುಲ್ ಅವರನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ. ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಚಾಕೊ, ಪ್ರಚಾರ ಸಮಿತಿ ಅಧ್ಯಕ್ಷ ಅಜಯ್ ಮಾಕನ್ ರಾಜೀನಾಮೆ ನೀಡಿದ್ದಾರೆ. ರಾಹುಲ್ ರಾಜೀನಾಮೆಗೂ ಕೂಗೆದ್ದಿದೆ. ಪ್ರಿಯಾಂಕ ನಾಯಕತ್ವ ವಹಿಸಿಕೊಳ್ಳಬೇಕೆಂದು ಮತ್ತೊಮ್ಮೆ ಒತ್ತಾಯ ಬಂದಿದೆ.
ಬಿಜೆಪಿ ಮತದಾರರು ಬಹುತೇಕ ತಮ್ಮ ನಿಷ್ಠೆ ಬದಲಿಸಿಲ್ಲ. ಆದರೆ, ಕಾಂಗ್ರೆಸ್ ಮತದಾರರು ಎಎಪಿಗೆ ಪಕ್ಷಾಂತರ ಮಾಡಿದ್ದಾರೆ. ದೆಹಲಿ ವಿಧಾನಸಭೆ ಹೊಸ ರಾಜಕೀಯ ಪರಂಪರೆ ಹುಟ್ಟುಹಾಕಿದೆ. ದೇಶದ ಜನರು ಆಸಕ್ತಿಯಿಂದ ತನ್ನತ್ತ ನೋಡುವಂತೆ ಮಾಡಿದೆ. ಇದು ಬಿಹಾರ ಹಾಗೂ ಪಶ್ಚಿಮ ಬಂಗಾಳ, ಪಂಜಾಬ್ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.