ಕರ್ನಾಟಕ

ಇಂದು ವಿರಾಟ್‌ ಹಿಂದೂ ಸಮಾಜೋತ್ಸವ: ಭಾರಿ ಬಂದೋಬಸ್ತ್‌; ತೊಗಾಡಿಯಾ ವಿಡಿಯೊ ಭಾಷಣಕ್ಕೂ ನಿರ್ಬಂಧ

Pinterest LinkedIn Tumblr

go

ಬೆಂಗಳೂರು: ನಗರದಲ್ಲಿ ಭಾನುವಾರ (ಫೆ.8) ‘ವಿರಾಟ್‌ ಹಿಂದೂ ಸಮಾಜೋತ್ಸವ’ ನಡೆ­ಯಲಿರುವ ಸ್ಥಳದಲ್ಲಿ ವಿಡಿಯೊ ಕಾನ್ಫರೆನ್ಸ್‌ ಸೇರಿದಂತೆ ಬೇರೆ ಯಾವುದೇ ರೀತಿಯಲ್ಲೂ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಅಂತರರಾಷ್ಟ್ರೀಯ ಕಾರ್ಯಾ-ಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರ ಭಾಷಣ ಪ್ರಸಾರ ಮಾಡದಂತೆ ಪೊಲೀಸರು ನಿಷೇಧ ಹೇರಿದ್ದಾರೆ.

ಬಸವನಗುಡಿಯಲ್ಲಿ ನಡೆಯಲಿರುವ  ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ಪ್ರಚೋದನಾ­ಕಾರಿ ಭಾಷಣ ಮಾಡಬಹುದೆಂಬ ಕಾರಣಕ್ಕೆ ಅವರಿಗೆ ಫೆ.5ರಿಂದ 11ರವರೆಗೆ ನಗರ ಪ್ರವೇಶಿಸದಂತೆ ಪೊಲೀಸರು ಹಿಂದೆ ನಿರ್ಬಂಧ ವಿಧಿಸಿದ್ದರು.

‘ಸಮಾಜೋತ್ಸವದ ಆಯೋಜಕರು ಕಾರ್ಯ­ಕ್ರಮದ ಸ್ಥಳದಲ್ಲಿ ಬೃಹತ್‌ ಪರದೆ ಹಾಗೂ ಧ್ವನಿ­ವರ್ಧಕ­ಗಳನ್ನು ಅಳವಡಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ತೊಗಾಡಿಯಾ ಅವರ ಭಾಷಣ ಪ್ರಸಾರಕ್ಕೆ  ಮುಂದಾಗಿದ್ದರು. ಈ ಬಗ್ಗೆ ಗುಪ್ತಚರ ವಿಭಾಗದ ಡಿಸಿಪಿ ವರದಿ ನೀಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ತಿಳಿಸಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಅಥವಾ ಬೇರೆ ಯಾವುದೇ ವಿಧಾನದ ಮೂಲಕ ಪ್ರಚೋದನಾಕಾರಿ ಭಾಷಣ ಪ್ರಸಾರ ಮಾಡುವುದು ಕಾನೂನು ಉಲ್ಲಂಘನೆಯಾಗು­ತ್ತದೆ. ಅಲ್ಲದೇ, ಧಾರ್ಮಿಕ ಭಾವನೆ ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಸಂಜೆ 6 ಗಂಟೆ­ವರೆಗೆ ತೊಗಾಡಿಯಾ ಅವರ ಭಾಷಣ ಪ್ರಸಾರ ಮಾಡದಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಶಿಸ್ತು ಕ್ರಮ: ತೊಗಾಡಿಯಾ ಅವರು ಆದೇಶ ಉಲ್ಲಂಘಿಸಿ ಕಳ್ಳದಾರಿಯಿಂದ ನಗರ ಪ್ರವೇಶಿಸಿದರೆ ಅಥವಾ ಆಯೋಜಕರು ಅವರ ಭಾಷಣ ಪ್ರಸಾರ ಮಾಡಿ­ದರೆ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಹೇಳಿದ್ದಾರೆ.

ಬಿಗಿ ಭದ್ರತೆ: ಮೈದಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡ­ಲಾಗಿದೆ. ಸುಮಾರು 6 ಸಾವಿರ ಪೊಲೀಸ್‌ ಸಿಬ್ಬಂದಿ, ಒಂದು ಸಾವಿರ ಗೃಹರಕ್ಷಕರು, ಗಡಿ ಭದ್ರತಾ ಪಡೆಯ ಎರಡು ಕಂಪೆನಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳ 25 ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾ­ಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಅಲೋಕ್‌ಕುಮಾರ್‌ ತಿಳಿಸಿದ್ದಾರೆ.

***
ತೊಗಾಡಿಯಾ ಭಾಷಣಕ್ಕೆ ನಿಷೇಧ ಹೇರಿ­ರು­ವಾಗ ವಿಡಿಯೊ ಕಾನ್ಫರೆನ್ಸ್‌ ನಡೆಸು­ವುದು ಕಾನೂನು ಉಲ್ಲಂಘನೆ­ಯಾಗು­ತ್ತದೆ. ವಿಡಿಯೊ ಕಾನ್ಫರೆನ್ಸ್ ನಡೆಸಿದರೆ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಂದೇಶ ಖಚಿತ
ವಿರಾಟ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಪ್ರವೀಣ್‌ ತೊಗಾಡಿಯಾ ಅವರ ಸಂದೇಶ ದೊರೆಯಲಿದೆ. ಅದು ಯಾವ ಮಾಧ್ಯಮದ ಮೂಲಕ ಎನ್ನುವುದು ಕಾದು ನೋಡಿ.
–  ಟಿ.ಎ.ಪಿ. ಶೆಣೈ, ವಿಎಚ್‌ಪಿ, ದಕ್ಷಿಣ ಪ್ರಾಂತ ಕಾರ್ಯದರ್ಶಿ

Write A Comment