ಮನೋರಂಜನೆ

ತಂಬೂರಿಗೆ ಸಿರಿ ತಂದ ರಾಜಮ್ಮ

Pinterest LinkedIn Tumblr

svec08rajamma-cut

ಆಡಿಕೊಳ್ಳಲು ಬ್ಯಾಡಿ
ಬಡವರ ಬದುಕ
ಕತ್ತಾಲ ಬೆಳದಿಂಗಳೊಳಗ
… … …
ಹಾದೀಲಿ ಹೋಗೋರೆ ಹಾಡೆಂದು ಹೇಳ್ಬೇಡಿ
ಹಾಡೆಲ್ಲ ನನ್ನ ಒಡಲ – ಉರಿ
ಬೆವರೆಲ್ಲ ನನ್ನ ಕಣ್ಣೀರು

ಈ  ನೆಲದೊಡಲ ಸಾರವನ್ನು ಹೀರಿ ಬೆಳೆದ ಅನೇಕ ಜನಪದ ಕಲಾವಿದರಲ್ಲಿ ತಂಬೂರಿ ರಾಜಮ್ಮನವರೂ ಒಬ್ಬರಾಗಿದ್ದಾರೆ. ಜನಪದ ಗೀತೆ, ತತ್ವಪದ, ಮಹಾಕಾವ್ಯಗಳ ಹಾಡುವಿಕೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದವರು ರಾಜಮ್ಮ. ಬಾಲ್ಯದಿಂದ ಬದುಕಿನ ಕೊನೆಯವರೆಗೂ ಹಾಡುಗಾರಿಕೆಯ ಒಡನಾಟದಲ್ಲೇ ಬದುಕನ್ನು ಸವೆಸಿದ ಕಲಾವಿದೆ. ರಾಜಮ್ಮನವರ ಕೈಯೊಳಗೆ ತಂಬೂರಿ ಎಂದೂ ಅಪಸ್ವರ ನುಡಿದದ್ದಿಲ್ಲ. ಬದುಕಿನುದ್ದಕ್ಕೂ ನೋವುಂಡು, ಬಡತನದ ಸಂಕಷ್ಟಗಳ ನಡುವೆಯೇ ಬೆಳೆದ ಅಪ್ರತಿಮ ಕಲಾವಿದೆ ಅವರು.

ತಳಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ ಹಾಗೂ ಅವರ ಬದುಕಿನ ಅನುಭವ ಕಥನದ ದಾಖಲೀಕರಣ ಮಹತ್ವದ್ದಾಗಿದೆ. ಮೌಖಿಕ ಸಾಹಿತ್ಯ ಪರಂಪರೆಯಾಧಾರಿತ ಚರಿತ್ರೆಯನ್ನು ಪುನರ್ ನಿರ್ಮಾಣ ಹಾಗೂ ವ್ಯಾಖ್ಯಾನಕ್ಕೆ ಒಳಪಡಿಸುವಾಗ ಜನಪದರ ಆತ್ಮಕಥನಗಳು ಬಹುಮುಖ್ಯ ಆಕರಗಳಾಗಬಲ್ಲವು. ಈ ಹಿನ್ನೆಲೆಯಲ್ಲಿ ರಾಜಮ್ಮನವರ ಬದುಕು ಸಾಮಾಜಿಕ, ಸಾಮುದಾಯಿಕ ಆತ್ಮಕಥನದಂತೆ ಮುಖ್ಯವೆನ್ನಿಸುತ್ತದೆ.

‘ತಂಬೂರಿ ರಾಜಮ್ಮ’ ಎಂದೇ ನಾಡಿನಾದ್ಯಂತ ಚಿರಪರಿಚಿತರಾದ ರಾಜಮ್ಮ ಮೂಲತಃ ಕೊಳ್ಳೇಗಾಲದ ಕಾಮಗೆರೆಯವರು. ಜನಪದ ವೃತ್ತಿಗಾಯಕರಾಗಿ ಅವರು ಅಗಣಿತ ಊರುಕೇರಿಗಳನ್ನು ತಿರುಗುತ್ತಾ ತಮ್ಮೊಳಗಿನ ಕಲೆಯನ್ನು ಹಂಚುತ್ತಾ ಅನುಭವದ ಜಗತ್ತನ್ನು ವಿಸ್ತರಿಸಿಕೊಂಡವರು. ಕಾಮಗೆರೆ ಕೆಂಪೇಗೌಡ, ಸತ್ತಿಗಾಲದ ನಿಂಗಮ್ಮ ದಂಪತಿಗಳ ಒಟ್ಟು ಆರುಜನ ಮಕ್ಕಳಲ್ಲಿ ತಂಬೂರಿ ರಾಜಮ್ಮ ಕೊನೆಯ ಮಗಳು.

ತಂದೆ ಕೆಂಪೇಗೌಡರು ಮೋಡಿಕಾರರಾಗಿದ್ದು, ಅಲೆಮಾರಿ ವೃತ್ತಿ ಕಲಾವಿದರಾಗಿದ್ದರು. ಹೀಗೆ ಅಲೆಮಾರಿ ಕಲಾವಿದರ ಕುಟುಂಬದಲ್ಲಿ ಹುಟ್ಟಿದ್ದ ರಾಜಮ್ಮ, ಬಾಲ್ಯದಲ್ಲಿಯೇ ಸೋಬಾನೆ ಪದಗಳನ್ನು ಹಾಡುವ ಕಲಾವಿದರ ಗಾನ ಮಾಧುರ್ಯಕ್ಕೆ ಮಾರುಹೋಗಿದ್ದರು. ಏಳೆಂಟು ವರ್ಷದ ಹುಡುಗಿಯಾಗಿದ್ದಾಗ ಮೈಸೂರಿನ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಆಕಸ್ಮಾತ್ತಾಗಿ ತಂದೆಯಿಂದ ಬೇರ್ಪಟ್ಟ ಬಾಲಕಿ ರಾಜಮ್ಮ, ಪಾಂಡವಪುರದ ಶಂಕರಾನಂದ ಮಠಕ್ಕೆ ಬಂದು ಸೇರಿದರು.

ಅಲ್ಲಿ ನಿತ್ಯ ಗುರುಭಜನೆಗಳಲ್ಲಿ ತೊಡಗಿಸಿಕೊಂಡ ಅವರು ತಮ್ಮ ಗಾಯನ ಪ್ರತಿಭೆಯನ್ನು ಕಟ್ಟಿಕೊಳ್ಳಲಾರಂಭಿಸಿದರು. ಆದರೆ, ಅದು ಸಂಪೂರ್ಣ ವೃತ್ತಿಪರ ಪ್ರತಿಭೆಯಾಗಿ ಹೊರಹೊಮ್ಮಿದ್ದು, ಅಟ್ಲು ಮಾದಪ್ಪನವರ ಕೈ ಹಿಡಿದ ನಂತರ. ಸ್ವತಃ ವೃತ್ತಿಕಲಾವಿದರಾಗಿದ್ದ ಮಾದಪ್ಪನವರು ಕಂಸಾಳೆ ಮಾದಪ್ಪನವರೆಂದೇ ಹೆಸರು ವಾಸಿಯಾಗಿದ್ದರು. ಇವರು ಕಂಸಾಳೆ, ಜನಪದ ಹಾಡು, ಕಥೆ ಇವುಗಳಲ್ಲಿ ಪರಿಣತಿಯನ್ನು ಪಡೆದಿದ್ದೇ ಅಲ್ಲದೆ, ತಮ್ಮ ಹೆಂಡತಿ ರಾಜಮ್ಮನಿಗೆ ಈ ಕಲೆಗಳ ಕಲಿಕೆ ವಿಷಯದಲ್ಲಿ ತಾವೇ ಗುರುವೂ ಆದರು.

ಇದನ್ನು ರಾಜಮ್ಮನವರು ಬಹಳ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ನಂತರ ಪತಿಪತ್ನಿಯರಿಬ್ಬರೂ ಒಟ್ಟಾಗಿ ಈ ಕಲಾವಂತಿಕೆಯನ್ನು ಜನಮಾನಸದಲ್ಲಿ ವಿಸ್ತರಿಸಿದರು. ತಮಗೆ ಎಷ್ಟೇ ಕಷ್ಟ ಕಾರ್ಪಣ್ಯಗಳು ಎದುರಾದರೂ, ಈ ಕಲೆಯನ್ನು ದೂರದೇ, ಅದನ್ನೇ ನೆಚ್ಚಿಕೊಂಡು ಬೇರೆಯಾವುದಕ್ಕೂ ಜಾರದೇ ಮುಂದುವರಿಸಿಕೊಂಡು ಬಂದ ಶ್ರದ್ಧಾಳುಗಳಾಗಿದ್ದರು. ರಾಜಮ್ಮನವರೇ: ನನ್ನ ತಲೆಯಲ್ಲಿ ಅದೆಷ್ಟು ಕೂದಲಿದೆಯೋ ಅಷ್ಟೂ ಕಷ್ಟಗಳನ್ನು ನಾನು ಅನುಭವಿಸಿದ್ದೇನೆ.

ಆದರೆ, ಈ ಕಲೆ ನನ್ನ ಕೈ ಬಿಡಲಿಲ್ಲ ಎಂದು ಹೇಳುತ್ತಿದ್ದರು. ಮೈಸೂರು, ಪಿರಿಯಾಪಟ್ಟಣ, ಚನ್ನಪಟ್ಟಣ, ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಮಳವಳ್ಳಿ, ಕಪಡಿ, ಚಿಕ್ಕಲ್ಲೂರು ಹಾಗೂ ಇತರ ಅನೇಕ ಸುತ್ತಮುತ್ತಲ ಊರುಗಳಲ್ಲಿ ತಿರುಗಾಡುತ್ತಾ ಜಾನಪದ ಸಾಹಿತ್ಯ ಮತ್ತು ಸಂಗೀತವನ್ನು ಪಸರಿಸಿದವರು. ರಾಜಮ್ಮ ಸಾಯುವ ಕೊನೆಗಾಲದವರೆಗೂ ಕಲೆಯನ್ನೇ ನಂಬಿಕೊಂಡು ಬಡತನವನ್ನೇ ಬದುಕಿ ಸರಿದು ಹೋದ ಶ್ರೀಮಂತ ಜನಪದ ಕಲಾವಿದೆ.

ರಾಜಮ್ಮನವರು ಮೌಖಿಕ ಪರಂಪರೆಯ ಮಹಾಕಾವ್ಯಗಳನ್ನು ದಿನಗಟ್ಟಲೆ ಹಾಡುವ ಅದ್ಭುತ ಗಾಯಕಿಯಾಗಿದ್ದರು. ತತ್ವಪದ, ಮೈಲಾರಲಿಂಗ ಕಾವ್ಯ, ಮಂಟೇಸ್ವಾಮಿ ಮಹಾಕಾವ್ಯ, ಧರೆಗೆದೊಡ್ಡವರ ಕಥೆ, ರಾಚಪ್ಪಾಜಿ ಕಥೆ, ಪಾರ್ವತಿ ಪವಾಡ, ನಿಂಗರಾಜಮ್ಮನ ಕಥೆ, ಅರ್ಜುನಜೋಗಿ ಹಾಡು, ಗಂಗೆಗೌರಿ ಕಥೆ, ದೊಡ್ಡಮ್ಮತಾಯಿ ಕಥೆ, ಸಿದ್ಧಪ್ಪಾಜಿ ಕಥೆ, ಅಸಂಖ್ಯಾತ ಜನಪದ ಗೀತೆ, ಲಾವಣಿ, ಸೋಬಾನೆ ಪದ, ಹಾಸ್ಯ ಪದ ಮುಂತಾದ ಗೀತೆಗಳನ್ನು ತಮ್ಮ ಅತ್ಯದ್ಭುತವಾದ ಕಂಠಸಿರಿಯಿಂದ ಹಾಡುತ್ತಾ ನಾಡಿನ ಜಾನಪದವನ್ನು ಶ್ರೀಮಂತಗೊಳಿಸಿದ ಕೀರ್ತಿ ಇವರದಾಗಿತ್ತು.

ಜಾನಪದ ಅಕಾಡೆಮಿ ಪುರಸ್ಕಾರವನ್ನು ಒಳಗೊಂಡಂತೆ ರಾಜ್ಯಮಟ್ಟದ ಹಲವು ಮಹತ್ವದ ಪ್ರಶಸ್ತಿಗಳು, ಪುರಸ್ಕಾರಗಳು ಮತ್ತು ಸನ್ಮಾನಗಳಿಗೆ ಅವರು ಭಾಜನರಾಗಿದ್ದರು. ರಾಜಮ್ಮನವರ ಮರಣದೊಂದಿಗೆ (ಜ. 21) ಕನ್ನಡ ಮೌಖಿಕ ಪರಂಪರೆಯ ವಿಶಿಷ್ಟ ಕೊಂಡಿಯೊಂದು ಕಣ್ಮರೆಯಾದಂತಾಗಿದೆ.

Write A Comment