ನೃತ್ಯ ನಿರ್ದೇಶಕ ಮೂಗೂರು ಸುಂದರಂ ಅವರ ಪುತ್ರ ಮತ್ತು ನಟ ಪ್ರಭುದೇವ್ ಸಹೋದರ ಎನ್ನುವ ವಿಶೇಷಣದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದ ನಾಗೇಂದ್ರ ಪ್ರಸಾದ್ ೬ ವರುಷಗಳ ನಂತರ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ‘ಮರೆಯುವ ಮುನ್ನ’ ಅವರ ಮರು ಪ್ರವೇಶದ ಚಿತ್ರ.
ಇತ್ತೀಚೆಗೆ ನಡೆದ ಚಿತ್ರದ ಹಾಡುಗಳ ಧ್ವನಿಮುದ್ರಣ ಸಂದರ್ಭದಲ್ಲಿ ಹಾಜರಿದ್ದ ಅವರಲ್ಲಿ, ‘ಮರೆಯುವ ಮುನ್ನ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಸ್ಮೃತಿಯಲ್ಲಿ ಉಳಿದುಕೊಳ್ಳುವೆ ಎನ್ನುವ ವಿಶ್ವಾಸವಿತ್ತು. ‘ಆರು ವರ್ಷಗಳ ನಂತರ ಒಳ್ಳೆಯ ಚಿತ್ರಕಥೆಯೊಂದಿಗೆ ನಿಮ್ಮ ಎದುರು ಬಂದಿದ್ದೇನೆ. ಸಿನಿಮಾದ ಮೊದಲ ಹೀರೊ ಚಿತ್ರಕಥೆ. ಎರಡನೇ ನಾಯಕ ನಾನು. ನಾಲ್ಕು ವರ್ಷಗಳ ಕಾಲ ಲಂಡನ್ನಿನಲ್ಲಿ ಸಿನಿಮಾ–ನಿರ್ದೇಶನ ಇತ್ಯಾದಿ ವಿಷಯಗಳ ಬಗ್ಗೆ ಕೆಲಸ ಕಲಿತು ಬಂದಿದ್ದೇನೆ’ ಎಂದರು ನಾಗೇಂದ್ರ ಪ್ರಸಾದ್.
‘ಮರೆಯುವ ಮುನ್ನ’ ಚಿತ್ರದ ಬಗ್ಗೆ ಅವರಲ್ಲಿ ಭರವಸೆಗಳು ಕಾಣುತ್ತಿರುವುದು ಅವರ ಮಾತಿನಲ್ಲಿ ಇಣುಕುತ್ತಿತ್ತು. ‘ಅಕ್ಕ, ಅಪ್ಪ, ಅಣ್ಣ, ತಮ್ಮ, ತಂಗಿ… ಈ ಸುತ್ತಲೇ ನಾವು ಸುತ್ತುತ್ತೇವೆ. ಈ ವಿಷಯಗಳು ಚಿತ್ರದಲ್ಲಿ ಇರಲಿವೆ’ ಎಂದರು. ಸುಪ್ರೀತ್ ಶಂಕರ್‌ರತ್ನ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದು ಅವರ ಮೊದಲ ಪ್ರಯತ್ನ. ಪ್ರೇಮ್ ಸೇರಿದಂತೆ ಕೆಲವು ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಅವರದ್ದು. ಮಾರ್ಚ್‌ನಿಂದ ಚಿತ್ರೀಕರಣ ಆರಂಭ. ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
‘ಇದೊಂದು ಲವ್ ಸಬ್ಚೆಕ್ಟ್. ನಾಯಕಿ ಶಿವಾನಿ ಸಿಂಗ್ ಮತ್ತು ನಾಯಕ ನಾಗೇಂದ್ರ ಪ್ರಸಾದ್ ಅವರು ಖ್ಯಾತ ನೃತ್ಯ ನಿರ್ದೇಶಕರಾಗಿದ್ದು ಅವರ ನೃತ್ಯವನ್ನು ಇಲ್ಲಿ ಶೇ 100ರಷ್ಟು ಬಳಸಿಕೊಳ್ಳಲಾಗುತ್ತದೆ. ಐದು ಹಾಡುಗಳ ಜತೆ ಮೂರು ಬಿಟ್‌ಗಳನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದರು ನಿರ್ದೇಶಕ ಶಂಕರ್‌ರತ್ನ.
ಮೈಸೂರು, ಬೆಂಗಳೂರು, ಹೈದರಾಬಾದ್, ಚೆನ್ನೈನಲ್ಲಿ ಒಟ್ಟು 80 ದಿನಗಳ ಚಿತ್ರೀಕರಣದ ಯೋಜನೆ ಇದೆಯಂತೆ. ರಂಗಾಯಣ ರಘು, ಸಾಧುಕೋಕಿಲಾ ಇತರರು ತಾರಾಗಣದಲ್ಲಿ ಇದ್ದಾರೆ. 20 ವರ್ಷಗಳ ಕಾಲ ಸೌಂಡ್ ಎಂಜಿನಿಯರ್ ಆಗಿದ್ದ ಪಳನಿ ಡಿ. ಸೇನಾಪತಿ ‘ಮರೆಯುವ ಮುನ್ನ’ದ ಮೂಲಕ ಮೊದಲ ಬಾರಿಗೆ ಸಂಗೀತ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.
‘ಹಾರೋ ಸಾಂಗ್’ 3ಡಿ ಹಾಡನ್ನು ಈ ಚಿತ್ರದಲ್ಲಿ ಪರಿಚಯಿಸುತ್ತಾರಂತೆ. ನವದೆಹಲಿಯ ರೂಪದರ್ಶಿ ಮತ್ತು ನೃತ್ಯ ನಿರ್ದೇಶಕಿ ಶಿವಾನಿ ಸಿಂಗ್ ಚಿತ್ರದ ನಾಯಕಿ. ನಿರ್ಮಾಪಕ ಕುಮಾರ್ ಭದ್ರಾವತಿ, ‘ಲಹರಿ’ ವೇಲು, ಹಿರಿಯ ನಿರ್ದೇಶಕ ಕೆ.ಎಸ್. ಭಗವಾನ್ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
