ಅಂತರಾಷ್ಟ್ರೀಯ

ಮಸೀದಿಯಲ್ಲಿ ಸ್ಫೋಟ: 61 ಸಾವು

Pinterest LinkedIn Tumblr

amir

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಶಿಯಾ ಪಂಗಡದವರನ್ನು ಗುರಿಯಾಗಿರಿಸಿಕೊಂಡು ಮಸೀದಿ­ಯೊಂ­ದರಲ್ಲಿ ಶಕ್ತಿಶಾಲಿ ಬಾಂಬ್‌ ಸ್ಫೋಟಿಸ­ಲಾಗಿದ್ದು, ಹಲವು ಮಕ್ಕಳು ಸೇರಿದಂತೆ ಕನಿಷ್ಠ 61 ಜನರು ಸಾವನ್ನಪ್ಪಿದ್ದಾರೆ. 55 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರ ಸ್ಥಿತಿ ಗಂಭೀರವಾಗಿದೆ.

ಕರಾಚಿಯಿಂದ ಸುಮಾರು 470 ಕಿ.ಮೀ. ದೂರದಲ್ಲಿನ ಶಿಕಾರ್‌ಪುರದ ಲಖಿದರ್ ಪ್ರದೇಶದಲ್ಲಿ ಇರುವ ಸೆಂಟ್ರಲ್‌ ಇಮಾಮ್‌ಬರ್ಗಾ ಮಸೀದಿ­ಯಲ್ಲಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ವೇಳೆ ಈ ದುರಂತ ಸಂಭವಿಸಿದೆ.  ಸ್ಫೋಟದ ತೀವ್ರತೆಗೆ ಮಸೀದಿಯ ಮೇಲ್ಛಾವಣಿ ಸಂಪೂರ್ಣ­ವಾಗಿ ಕುಸಿದಿದೆ. ಇದರಡಿ­ಯಲ್ಲಿ ಸಿಲುಕಿ ಹಲವರು ಅಸುನೀಗಿದ್ದಾರೆ.

ಜುಂದುಲ್ಲಾ ಉಗ್ರರ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತಿದ್ದು, ‘ಶಿಯಾಗಳು ನಮ್ಮ ಶತ್ರುಗಳು’ ಎಂದು ಹೇಳಿದೆ. ಮೊದಲು ತಾಲಿಬಾನ್‌­ಗಳೊಂದಿಗೆ ಗುರುತಿಸಿ­ಕೊಂಡಿದ್ದ ಈ ಗುಂಪು, ಈಗ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಜೊತೆಗಿದೆ.

‘ರಿಮೋಟ್‌ನಿಂದ ಬಾಂಬ್‌ ಸ್ಫೋಟಿ­ಸ­ಲಾಗಿದೆ. ತಾರಸಿಯ ಅವಶೇಷ­ದಡಿ­ಯಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಅಬ್ದುಲ್ಲಾ ಮೆಹರ್‌ ಅವರ ಹೇಳಿಕೆಯನ್ನು ‘ಜಿಯೊ’ ವಾಹಿನಿ ವರದಿ ಮಾಡಿದೆ.

ವಿಧ್ವಂಸಕರ ಈ ಕೃತ್ಯವನ್ನು ಪ್ರಧಾನಿ ನವಾಜ್‌ ಷರೀಫ್‌ ಅವರು ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಸಾವನ್ನಪ್ಪಿದವರ ಗೌರವಾರ್ಥ ಸಿಂಧ್‌ ಪ್ರಾಂತೀಯ ಸರ್ಕಾರ ಶುಕ್ರವಾರ  ಶೋಕಾಚರಣೆ ಘೋಷಿಸಿದೆ.

ಪಾಕ್: 20 ಲಕ್ಷ ಸಿಮ್ ನಿಷ್ಕ್ರಿಯ
ಇಸ್ಲಾಮಾಬಾದ್ (ಪಿಟಿಐ): ಭದ್ರತಾ ಕಾರಣಗಳಿಗಾಗಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ದೇಶದ ಸುಮಾರು 20 ಲಕ್ಷ ಮೊಬೈಲ್‌ ಸಿಮ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ದೇಶದಲ್ಲಿ 10.30 ಕೋಟಿ ಸಿಮ್‌ಗಳನ್ನು ಪರಿಶೀಲನೆ ನಡೆಸದೆ ಮಾರಾಟ ಮಾಡಲಾಗಿದೆ. ಈ ಬಗ್ಗೆ 91 ದಿನಗಳ ಒಳಗೆ ಪರಿಶೀಲನೆ ನಡೆಸುವಂತೆ ದೂರಸಂಪರ್ಕ ಪ್ರಾಧಿಕಾರಕ್ಕೆ ಸರ್ಕಾರ  ಕಾಲಾವಕಾಶವನ್ನು ನೀಡಿತ್ತು. ಪೆಶಾವರದ ಸೇನಾ ಶಾಲೆಯ ಮೇಲೆ ನಡೆದ ದಾಳಿ ನಂತರವಷ್ಟೇ ಸರ್ಕಾರ ಈ ಆದೇಶ ಹೊರಡಿಸಿತ್ತು ಎಂದು ‘ಡಾನ್’ ವರದಿ ಪತ್ರಿಕೆ ಮಾಡಿದೆ.

Write A Comment