ಬೆಂಗಳೂರು: ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2009ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸುವ ಆದೇಶವನ್ನು ರದ್ದು ಮಾಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಪರಿಹಾರಾತ್ಮಕ ಅರ್ಜಿ ಮತ್ತು ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೂಡಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗಳನ್ನು ಎದುರಿಸುವುದಕ್ಕಾಗಿ ಈ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ತಮಿಳುನಾಡು ಸರ್ಕಾರವು ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವ ಮಾದರಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ‘ಕೇಂದ್ರ ಸರ್ಕಾರ ರೂಪಿಸಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2009ರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು 2009ರಲ್ಲಿ ರೂಪಿಸಿರುವ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದರಿಂದ ಐದನೆ ತರಗತಿವರೆಗೆ ಎಲ್ಲ ಮಕ್ಕಳಿಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು. ಇದಕ್ಕಾಗಿ ಕಾಯ್ದೆಗೆ ಕೆಲವು ಹೊಸ ಅಂಶಗಳನ್ನು ಸೇರಿಸಲಾಗುವುದು’ ಎಂದು ವಿವರ ನೀಡಿದರು.
ಪರಿಹಾರಾತ್ಮಕ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯದ ನಿಲುವನ್ನು ಸುಪ್ರೀಂಕೋರ್ಟ್ಗೆ ತಿಳಿಸಬೇಕಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಭಾಷಾ
ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪಾಲನೆ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳು ಹೂಡಿರುವ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರದಲ್ಲೂ ಕಾನೂನು ಬಲ ಅಗತ್ಯ. ಈ ಎರಡೂ ಉದ್ದೇಶದಿಂದ ನಿಯಮಗಳಿಗೆ ತಿದ್ದುಪಡಿ ತರುವ ನಿರ್ಧಾರವನ್ನು ಸಂಪುಟ ಕೈಗೊಂಡಿದೆ ಎಂದರು.
ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2012ರ ಸೆಕ್ಷನ್ 19 (9) ಹಾಗೂ 29 (2)ಕ್ಕೆ ತಿದ್ದುಪಡಿ ಮಾಡಲಾಗುವುದು. ಸೆಕ್ಷನ್ 29(2)(ಎಫ್)ನಲ್ಲಿ ‘ಮಗುವಿನ ಶಿಕ್ಷಣ ಮಾಧ್ಯಮವು ಮಾತೃ ಭಾಷೆಯಲ್ಲಿರಬೇಕು’ ಎಂಬ ಪದಗಳಿಗೆ ಬದಲಾಗಿ ‘ಕನ್ನಡ ಭಾಷೆಯಲ್ಲಿ ಇರಬೇಕು’ ಎಂಬ ಪದಗಳನ್ನು ಸೇರಿಸಲಾಗುವುದು. ಫೆಬ್ರುವರಿ 2ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.
ಮಕ್ಕಳ ಮಾತೃಭಾಷಾ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದೇ ರೀತಿಯ ಒತ್ತಡ ತರುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅವರು ಪತ್ರ ಬರೆದಿದ್ದಾರೆ. ಈಗ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಪೂರಕವಾಗಿ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಶಿಕ್ಷಕರ ತರಬೇತಿ ಯೋಜನೆ: ಕೇಂದ್ರ ಸರ್ಕಾರದ ಪುರಸ್ಕೃತ ಶಿಕ್ಷಕರ ಶಿಕ್ಷಣ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ₨ 115.61 ಕೋಟಿ ಮತ್ತು ರಾಜ್ಯ ಸರ್ಕಾರ ₨ 38.53 ಕೋಟಿ ಅನುದಾನ ಒದಗಿಸಲಿವೆ.
ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು, ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯಗಳ ಉನ್ನತೀಕರಣ, ಕಲಬುರ್ಗಿ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗವನ್ನು ಶೈಕ್ಷಣಿಕ ಉನ್ನತ ಅಧ್ಯಯನ ಕೇಂದ್ರಗಳನ್ನಾಗಿ ಪರಿವರ್ತಿಸುವ ಕಾರ್ಯಕ್ರಮಗಳು ಯೋಜನೆಯಲ್ಲಿ ಸೇರಿವೆ. ಶಿಕ್ಷಕರಿಗೆ ತರಬೇತಿ ನೀಡುವುದು ಯೋಜನೆಯ ಮೂಲ ಉದ್ದೇಶ ಎಂದು ಸಚಿವರು ತಿಳಿಸಿದರು.
2014–15ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲ ಶಾಲೆಗಳ ಒಂದರಿಂದ ಎಂಟನೆ ತರಗತಿವರೆಗಿನ ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಎರಡನೆ ಜೊತೆ ಸಮವಸ್ತ್ರ ವಿತರಿಸುವ ಪ್ರಸ್ತಾವಕ್ಕೂ ಒಪ್ಪಿಗೆ ದೊರೆತಿದೆ. ಇದಕ್ಕಾಗಿ ಸರ್ವ ಶಿಕ್ಷಣ ಅಭಿಯಾನದಿಂದ ₨ 16.35 ಕೋಟಿ ಅನುದಾನ ಒದಗಿಸಲಾಗುತ್ತದೆ ಎಂದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ₨ 166 ಕೋಟಿ ವೆಚ್ಚದಲ್ಲಿ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಸ್ಥಾಪಿಸುವ ಪ್ರಸ್ತಾವಕ್ಕೂ ಸಂಪುಟ ಅನುಮೋದನೆ ನೀಡಿದೆ.
ಪೌರ ಕಾರ್ಮಿಕರಿಗೆ ಗೃಹ ಭಾಗ್ಯ: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ 11,438 ಕಾಯಂ ಪೌರ ಕಾರ್ಮಿಕರಿಗೆ ವಸತಿ ಸೌಕರ್ಯ ಒದಗಿಸಲು ರೂಪಿಸಿರುವ ‘ಪೌರ ಕಾರ್ಮಿಕ ಗೃಹ ಭಾಗ್ಯ ಯೋಜನೆ’ಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ, ಹಂಚಿಕೆ ಮಾಡಲಾಗುತ್ತದೆ ಎಂದು ಜಯಚಂದ್ರ ತಿಳಿಸಿದರು.
ತಲಾ ₨ 7.5 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ₨ 1.5 ಲಕ್ಷವನ್ನು ಫಲಾನುಭವಿಗಳು ಭರಿಸಬೇಕು. ₨ 6 ಲಕ್ಷವನ್ನು ಶೇಕಡ 10ರ ಬಡ್ಡಿ ದರದಲ್ಲಿ ಸಾಲವಾಗಿ ನೀಡಲಾಗುತ್ತದೆ ಎಂದರು.
ಇತರ ನಿರ್ಣಯಗಳು
*ಕುಡಿಯುವ ನೀರಿನ ಯೋಜನೆಗಳಲ್ಲಿ ವಿದ್ಯುದ್ದೀಕರಣ ಕಾಮಗಾರಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯಡಿ ನೀಡಿದ್ದ ವಿನಾಯ್ತಿ ₨ 5 ಲಕ್ಷಕ್ಕೆ ಹೆಚ್ಚಳ.
*ದೆಹಲಿಯ ಕರ್ನಾಟಕ ಭವನಕ್ಕೆ ನೇರವಾಗಿ ಸಿಬ್ಬಂದಿ ನೇಮಕಾತಿಗೆ
ಅವಕಾಶ ಕಲ್ಪಿಸುವ ವೃಂದ ಮತ್ತು ನೇಮಕಾತಿ ನಿಯಮ ರಚಿಸುವ ಪ್ರಸ್ತಾವಕ್ಕೆ ಒಪ್ಪಿಗೆ.
*ವಿರಾಜಪೇಟೆ ತಾಲ್ಲೂಕಿನ ಹುಣಸೂರು– ತಲಕಾವೇರಿ ರಸ್ತೆ ಅಭಿವೃದ್ಧಿ ಕಾಮಗಾರಿಯ ₨ 27.66 ಕೋಟಿ ವೆಚ್ಚದ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.
*ಕೊಳ್ಳೇಗಾಲ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಮೆಲ್ಲಹಳ್ಳಿ ಗೇಟ್ (₨ 10.75 ಕೋಟಿ), ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಎಳೆಸಂದ್ರ (₨ 10.05 ಕೋಟಿ), ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಸುಟ್ಟಟ್ಟಿ (₨ 11.45 ಕೋಟಿ) ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ.
*ಬಾಗೇಪಲ್ಲಿ ತಾಲ್ಲೂಕು ವೆಂಕಟಾಪುರ ಗ್ರಾಮ (₨ 8.30 ಕೋಟಿ), ಮಧುಗಿರಿ ತಾಲ್ಲೂಕು ನಲ್ಲೇಕಾಮನಹಳ್ಳಿ– ಬೇಡತ್ತೂರು (₨ 9.22 ಕೋಟಿ), ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ (₨ 11.35 ಕೋಟಿ) ಮತ್ತು ಕೆ.ಆರ್.ಪೇಟೆ ತಾಲ್ಲೂಕಿನ ಮೊಳ್ಳೇನಹಳ್ಳಿ ಗ್ರಾಮದಲ್ಲಿ (₨ 10.75 ಕೋಟಿ) ವೆಚ್ಚದಲ್ಲಿ ಪರಿಶಿಷ್ಟ ಜಾತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಕಟ್ಟಡ ನಿರ್ಮಾಣ.
*ಮೈಸೂರು ವಿಶ್ವವಿದ್ಯಾಲಯದ ಚಾಮರಾಜನಗರ ಅಧ್ಯಯನ ಕೇಂದ್ರಕ್ಕೆ ₨ 9 ಕೋಟಿ ಅನುದಾನ
