ಕನ್ನಡ ವಾರ್ತೆಗಳು

ಎ.11-30: ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಸಮೀಕ್ಷೆ ಸಿದ್ಧರಾಗಲು ಅಧಿಕಾರಿಗಳಿಗೆ ಸಚಿವ ರೈ ಸೂಚನೆ

Pinterest LinkedIn Tumblr

RAMANATA-RAI-NEW__

ಮಂಗಳೂರು,ಜ.29 : ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಏ.11ರಿಂದ 30ರ ವರೆಗೆ ನಡೆಯುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಸಮೀಕ್ಷೆಯಲ್ಲಿ ಅಧಿಕಾರಿಗಳು ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ನೀಡುವ ಮಾಹಿತಿ ಆಧಾರದಲ್ಲಿ ಸರಕಾರ ಪರಿಣಾಮಕಾರಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದರಿಂದ ಶೇ.100 ಪರಿಪೂರ್ಣ ಮಾಹಿತಿ ಸಂಗ್ರಹ ಅಗತ್ಯ ಎಂದು ಅವರು ತಿಳಿಸಿದರು.

ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ರಾಜ್ಯ ಶಿಕ್ಷಕರ ಸಂಘದವರು ಸಮೀಕ್ಷೆಯಲ್ಲಿ ಭಾಗವಹಿಸಲು ಒಪ್ಪಿದ್ದು, ಶೇ.50ರಷ್ಟು ಸಂಭಾವನೆ ಮುಂಗಡವಾಗಿ ನೀಡಲಾಗುವುದು ಎಂದರು. ಗಣತಿದಾರರು ಆಯಾಯ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ ಅಂದಾಜು 45 ನಿಮಿಷಗಳ ಕಾಲಾವಧಿಯಲ್ಲಿ ಮಾಹಿತಿಯನ್ನು ಕಲೆ ಹಾಕಬೇಕಾಗಿದೆ ಎಂದು ಅವರು ತಿಳಿಸಿದರು. ಗಣತಿ ಸಮೀಕ್ಷಾ ಕಾರ್ಯದ ಎಣಿಕೆದಾರರ ನೇಮಕಕ್ಕೆ ಎಸ್‌ಎಸ್‌ಎಲ್‌ಸಿ ಶಿಕ್ಷಕರನ್ನು ಹೊರತುಪಡಿಸಿ ಇತರೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಸಾಮಾಜಿಕ ಹಾಗೂ ಹಿಂದುಳಿದ ವರ್ಗ ಇಲಾಖೆಯ ಅಧಿಕಾರಿ ಸಂತೊಷ್ ಕುಮಾರ್ ಮಾತನಾಡಿ, ತಲಾ 50 ಗಣತಿದಾರರು, 8 ಮೇಲ್ವಿಚಾರಕರ ಎರಡು ತಂಡ ರಚಿಸಿ 2 ಸುತ್ತಿನಲ್ಲಿ ಸಮೀಕ್ಷೆ ಕುರಿತು ತರಬೇತಿ ನೀಡಲಾಗುವುದು ಎಂದರು.

ಜಿಲ್ಲಾ ಅಂಕಿ ಅಂಶ ಅಧಿಕಾರಿ ಪ್ರದೀಪ್ ಡಿಸೋಜ ಮಾತನಾಡಿ, ಗಣತಿದಾರರು ಕುಟುಂಬದ ಮಾಹಿತಿಯನ್ನು ಮಾಹಿತಿದಾರರ ಮುಂದೆ ಓದಿ ಹೇಳಿ ಸಹಿ ಪಡೆಯುವುದು ಕಡ್ಡಾಯವಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ನೀಡಬೇಕಾದ ಮಾಹಿತಿ:  ಹೆಸರು, ಲಿಂಗ, ವಯಸ್ಸು, ಧರ್ಮ, ಜಾತಿ, ಉಪಜಾತಿ, ಆಧಾರ್ ಸಂಖ್ಯೆ, ಇತ್ಯಾದಿ. *ಶೈಕ್ಷಣಿಕ ಸಂಬಂಧಿತ ಇತರೆ ಮಾಹಿತಿ. *ಔದ್ಯೋಗಿಕ ಸಂಬಂಧಿತ ವಿಷಯ.*ಆರ್ಥಿಕ, ವಾರ್ಷಿಕ ಆದಾಯ ಮಾಹಿತಿ. *ರಾಜಕೀಯ ಸದಸ್ಯತ್ವ ಕುರಿತು ಮಾಹಿತಿ *ಭೂ ಒಡೆತನ, ನೀರಾವರಿ ಬೆಳೆಗಳು, ಚರಾಸ್ತಿ, ಸ್ಥಿರಾಸ್ತಿ, ಬ್ಯಾಂಕ್ ಲೋನ್, ಶೌಚಾಲಯ, ನೀರಾವರಿ ಇತ್ಯಾದಿ *ಒಟ್ಟು 55 ಕಲಂಗಳಿಗೆ ಕುಟುಂಬದ ಸದಸ್ಯರು ಮಾಹಿತಿ ನೀಡಬೇಕಾಗಿದೆ.

Write A Comment