ಕನ್ನಡ ವಾರ್ತೆಗಳು

ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕುಟುಂಬದಿಂದ ೮ನೇದಿನದ ಮಹಾ ಮಸ್ತಕಾಭಿಷೇಕ : ಸಿ.ಎಂ ಸಿದ್ದರಾಮಯ್ಯ ಭೇಟಿ

Pinterest LinkedIn Tumblr

karkal_mahamasta_biseka

ಕಾರ್ಕಳ, ಜ.29 : ಮನುಷ್ಯ ಮನುಷ್ಯನ ನಡುವೆ ಸ್ವಾರ್ಥಕ್ಕಾಗಿ ಗೋಡೆ ಕಟ್ಟುವ ಕಾರ್ಯ ಇಂದು ನಡೆಯುತ್ತಿದೆ. ಒಂದೇ ತಾಯಿಯ ಮಕ್ಕಳಂತೆ ಬದುಕುವ ಸಮಾಜ ನಿರ್ಮಾಣ ಮಾಡುವುದು ಬಾಹುಬಲಿಗೆ ನಾವು ಸಲ್ಲಿಸುವ ಸೇವೆಯಾಗಿದೆ. ಬಾಹುಬಲಿ, ಬುದ್ಧ, ಬಸವಣ್ಣ, ಕನಕದಾಸ ಹೇಳಿದಂತೆ ನಾವಿಂದು ಮನುಷ್ಯರಾಗಿ ಬದುಕ ಬೇಕಾಗಿದೆ ಎಂದು ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾರ್ಕಳ ಭಗವಾನ್ ಶ್ರೀಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಎಂಟನೇ ದಿನವಾದ ಬುಧವಾರ ಸೇವಾ ಕರ್ತೃ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಕುಟುಂಬದ ವತಿಯಿಂದ ನಡೆದ ಮಹಾ ಮಸ್ತಕಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಅಹಿಂಸೆಯಿಂದಲೇ ಒಂದು ದೇಶ ಸ್ವತಂತ್ರವಾಗಿದ್ದರೆ ಅದು ಭಾರತ ಮಾತ್ರ. ಈ ಅಹಿಂಸೆ, ತ್ಯಾಗ, ಶಾಂತಿಯ ಮಂತ್ರವನ್ನು ನಮಗೆ ನೀಡಿದವರು ಭಗವಾನ್ ಶ್ರೀಬಾಹುಬಲಿ. ಇದರ ಪ್ರಸಾರ, ಪ್ರಚಾರ ಈ ಕಾರ್ಯಕ್ರಮದ ಮೂಲಕ ನಡೆಯುತ್ತಿರುವುದು ಸ್ತುತ್ಯಾರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಇಡೀ ವಿಶ್ವಕ್ಕೆ ಒಪ್ಪಿತವಾದ ಸಂದೇಶಗಳನ್ನು ನೀಡಿದವರು ಬಾಹುಬಲಿ. ಧರ್ಮ ಯಾವತ್ತು ಶಾಂತಿ, ಸಹಬಾಳ್ವೆಯನ್ನು ಬಯಸುತ್ತವೆ. ಇದಕ್ಕೆ ಶಾಂತಮೂರ್ತಿಯ ಸಂದೇಶಗಳು ದಾರಿಯನ್ನು ತೋರಿಸುತ್ತವೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಧರ್ಮ ಯಾವುದಾದರೂ ತತ್ವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ ಎಂದರು. ಸಹಕಾರ ಸಚಿವ ಮಹದೇವ ಪ್ರಸಾದ್, ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿದರು.

ಸಮಾರಂಭದಲ್ಲಿ ಎಂ.ಎನ್.ರಾಜೇಂದ್ರಕುಮಾರ್‌ರವರು ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಮೈಸೂರು ಪೇಟ ತೊಡಿಸಿ, ಬೆಳ್ಳಿಗದೆ ನೀಡಿ ಸನ್ಮಾನಿಸಿದರು. ಇದೇ ವೇಳೆ ಪದ್ಮವಿಭೂಷಣ ಪುರಸ್ಕೃತರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನೂ ಸನ್ಮಾನಿಸಲಾಯಿತು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಫೌಂಡೇಶನ್‌ನ ಡಾ.ಎಂ.ಮೋಹನ್ ಆಳ್ವ, ಆರೋಗ್ಯ ಸಚಿವ ಯು.ಟಿ. ಖಾದರ್, ಯುವಜನ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಅರಣ್ಯ ಸಚಿವ ಬಿ.ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ ಗೋಪಾಲ ಪೂಜಾರಿ, ಬಿ.ಎ. ಮೊಯ್ದಿನ್ ಬಾವ, ಐವನ್ ಡಿಸೋಜ, ಮಾಜಿ ಶಾಸಕ ಗೋಪಾಲ ಭಂಡಾರಿ, ಕೆ.ವಿಶ್ವನಾಥ ಶೆಟ್ಟಿ, ಅರುಣಾ ರಾಜೇಂದ್ರಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸೇವಾಕರ್ತೃ ಡಾ.ಎಂ.ಎನ್.ರಾಜೇಂದ್ರಕುಮಾರ್ ಸ್ವಾಗತಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು. ಮಹಾಮಸ್ತಕಾಭಿಷೇಕಕ್ಕೆ ಪೂರ್ವ ದಲ್ಲಿ ಬುಧವಾರ ಸಂಜೆ ವೈಭವದ ಅದ್ದೂರಿಯ ಪುರಮೆರವಣಿಗೆ ನಡೆಯಿತು.

Write A Comment