ಬೀಜಿಂಗ್,ಜ.26: ಪುಟ್ಟ ಮಕ್ಕಳು, ಮಹಿಳೆಯರ ಮಾರಾಟ ಚೀನಾದಲ್ಲಿ ಇತ್ತೀಚೆಗೆ ಒಂದು ಲಾಭದಾಯಕ ಉದ್ದಿಮೆಯಾಗಿ ಬೆಳೆಯುತ್ತಿದೆ ಎಂಬ ವರದಿಗೆ ಪೂರಕವಾಗಿ ಇಂದು ಮಹಿಳೆಯೊಬ್ಬಳು ತನ್ನ ಪುಟ್ಟ ಗಂಡು ಮಗುವನ್ನು 7 ಸಾವಿರ ಡಾಲರ್‌ಗೆ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾಳೆ. ಚೀನಾದಲ್ಲಿ ಪುಟ್ಟ ಮಕ್ಕಳು ಹಾಗೂ ಮಹಿಳೆಯರ ಮಾರಾಟ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಮಕ್ಕಳ ಮಾರಾಟಕ್ಕೆ ಪ್ರಮುಖ ಒಂದೇ ಮಗು ಇರಲಿ ಎಂಬ ನೀತಿ ಕಾರಣ ಎನ್ನಲಾಗಿದೆ. ಮಧ್ಯಚೀನಾದ ಹೆನನ್ ಪ್ರಾಂತ್ಯದಲ್ಲಿ ಹುವಾಂಗ್ ಎಂಬ ಮಹಿಳೆ ತನ್ನ ಮಗುವನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂತು. ಈ ಮಹಿಳೆ ತನ್ನ ಮಾಜಿ ಗಂಡನಿಂದ ಒಂದು ಮಗು ಪಡೆದಿದ್ದಳು. ಆದರೆ ಹಾಲಿ ಗಂಡ ಈ ಕುರಿತಂತೆ ಸದಾ ಜಗಳವಾಡುತ್ತಿದ್ದ. ಇದರಿಂದ ತಾನು ಮಗು ಮಾರಾಟ ಮಾಡಿದೆ ಎಂದು ಮಹಿಳೆ ಹೇಳಿದ್ದಾಳೆ.
ಈ ಮಗುವಿನಿಂದ ತನ್ನ ಹೊಸ ವೈವಾಹಿಕ ಬದುಕು ಹಾಳಾಗಬಹುದು ಎಂಬ ಭಯದಿಂದ ಹೀಗೆ ಮಾರಾಟ ಮಾಡಿದ್ದಾಳೆ ಎನ್ನಲಾಗಿದೆ. ಚೀನಾದಲ್ಲಿ ಮಕ್ಕಳ ಮಾರಾಟ ಒಂದು ಲಾಭದಾಯಕ ವ್ಯವಹಾರವಾಗಿದೆ. ಕಳೆದ ವರ್ಷ ಇಂಥ ಪ್ರಕರಣಗಳಲ್ಲಿ 37 ಮಕ್ಕಳನ್ನು ರಕ್ಷಿಸಿ 100 ಮಂದಿಯನ್ನು ಬಂಧಿಸಿದ್ದರು. 2013ರಲ್ಲಿ 92 ಮಕ್ಕಳನ್ನು ರಕ್ಷಿಸಿ 301 ಜನರನ್ನು ಬಂಧಿಸಲಾಗಿತ್ತು. ಚೀನಾದಲ್ಲಿ ಇತ್ತೀಚೆಗೆ ಮಕ್ಕಳು , ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ದಂಧೆ ನಡೆದಿದೆ.
