ಕರ್ನಾಟಕ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಾಂಸ್ಕೃತಿಕ ಕಲರವ

Pinterest LinkedIn Tumblr

Manik-Sha-2

ಬೆಂಗಳೂರು,ಜ.26: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೊತ್ಸವದಲ್ಲಿ ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರದ ಇತಿಹಾಸವನ್ನು ನೆನಪಿಸಿತು. ಎಲ್ಲೆಲ್ಲೂ ಮಕ್ಕಳ ಕಲರವ, ಸಂಗೀತ ನೃತ್ಯಗಳ ಪ್ರದರ್ಶನದಿಂದ ನೋಡುಗರ ಕಣ್ಮನ ಸೆಳೆಯಿತು. ಜವಹಾರ್‌ಲಾಲ್ ಶಾಲೆಯ ಮಕ್ಕಳು ನಡೆಸಿಕೊಟ್ಟ ರಾಷ್ಟ್ರಗೀತೆ ಕಾರ್ಯಕ್ರಮ ನಡೆಸಿಕೊಟ್ಟರೆ, ಕವಾಯತು, ಪಥಸಂಚಲನವನ್ನು ಸ್ಕೌಟ್ಸ್ , ಗೈಡ್ಸ್ , ಎನ್‌ಸಿಸಿ ವಿದ್ಯಾರ್ಥಿಗಳು ನಡೆಸಿಕೊಟ್ಟರು.

ನಾಡಗೀತೆ, ರೈತಗೀತೆಗಳನ್ನು ವಿವಿಧ ಶಾಲಾ ಮಕ್ಕಳು ಹಾಡಿದರೆ, ಸುಮಾರು 750 ಮಕ್ಕಳು ಯೋಗಾಸನ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂಬಿಕಾ ಪ್ರೌಢಶಾಲೆ, ವಿದ್ಯುದಯ, ಬಸವೇಶ್ವರ ಶಾಲೆಗಳು ಪಾಲ್ಗೊಂಡಿದ್ದವು.

ಹಲಗಲಿ ಬೇಡರು ಎಂಬ ರೂಪಕವನ್ನು ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಹಲಗಲಿಯಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆ, ಸಾಹಸ, ಬಲಿದಾನಗಳನ್ನು ನೆನಪಿಸುವ ರೂಪಕದಿಂದ ಸ್ವಾತಂತ್ರ್ಯಕ್ಕಾಗಿ ಅಳಿದುಹೋದವರ ನೆನಪಿಸಿತು.

Manik-Sha-1

Manik-Sha-01

Manik-Sha-3

ನವಭಾರತ, ಎನ್‌ಬಿಎನ್ ವಿದ್ಯಾಮಂದಿರದ 700 ಮಕ್ಕಳು ಐಕ್ಯತೆ, ಸಮಾನತೆ ಕುರಿತ ನೃತ್ಯ ಪ್ರದರ್ಶಿಸಿದರೆ ಸರ್ದಾರ್ ವಲ್ಲಭಬಾಯಿ ಪಟೇಲ್ ದೇಶದ ನಾನಾ ರಾಜ್ಯಗಳನ್ನು ಒಗ್ಗೂಡಿಸಿದ ವಿಷಯವನ್ನು ಪ್ರತಿಬಿಂಬಿಸಿದ ನೃತ್ಯವನ್ನು ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕೇರಳದ ಸಮರ ಕಲೆ ಕನರಿ ಪೈಯಟ್ಟು ಪ್ರದರ್ಶನ ಈ ಬಾರಿಯ ವಿಶೇಷವಾಗಿತ್ತು. ಇದರಲ್ಲಿ ಶತ್ರುಗಳನ್ನು ಸದೆ ಬಡಿಯಲು ಈಟಿ, ಕತ್ತಿ, ಚಾಟಿ, ಭರ್ಜಿಗಳಿಂದ ನಡೆಸಿದ ಸಾಹಸ ಪ್ರದರ್ಶನ ಎಲ್ಲರ ಕಣ್ಮನಸೆಳೆಯಿತು. ಆಯ್ಕೆಯಾದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಧಾರ್ ಕುರಿತಂತೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪಥ ಸಂಚಲನದಲ್ಲಿ ಆಯ್ಕೆಯಾದವರಿಗೆ ಬಹುಮಾನ ವಿತರಿಸಲಾಯಿತು. ಆಧಾರ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವಿಷಯದ ಎರಡು ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಿತು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಆಗಮಿಸಿದ ರಾಜ್ಯಪಾಲ ವಾಜುಭಾಯಿ ರೂಡಾಭಾಯಿ ವಾಲಾ ರಾಷ್ಟ್ರಧ್ವಜಾರೋಹಣ ಮಾಡಿ ಧ್ವಜಕ್ಕೆ ನಮನ ಸಲ್ಲಿಸಿದರು. ವೇದಿಕೆಗೆ ಬಂದ ರಾಜ್ಯಪಾಲರನ್ನು ಭಾರತೀಯ ರಕ್ಷಣಾ ಸೇನೆ ಮೂವರು ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು. ರಾಜ್ಯಪಾಲರು ಧ್ವಜಾರೋಹಣ ನೇರವೇರಿಸುತ್ತಿದ್ದಂತೆ ವಾಯುಪಡೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಇದೇ ವೇಳೆ ರಾಜ್ಯಪಾಲರು ಗೌರವ ರಕ್ಷೆ ಸ್ವೀಕರಿಸಿದರು. ನಂತರ ರಾಜ್ಯಪಾಲರು ತೆರೆದ ಜೀಪ್‌ನಲ್ಲಿ ತೆರಳಿ ಪೆರೇಡ್ ವೀಕ್ಷಣೆ ಮಾಡಿದರು.

Write A Comment