ಕರ್ನಾಟಕ

ಬ್ಯಾಂಕ್‌ನ ಗೋಡೆ ಕೊರೆದು ಕನ್ನ : 5 ಕೋಟಿ ನಗದು, ಚಿನ್ನಾಭರಣ ಲೂಟಿ

Pinterest LinkedIn Tumblr

splogger-content-theft

ಹಿರಿಸಾವೆ,ಜ.26: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಕೆನರಾ ಗ್ರಾಮೀಣ ಬ್ಯಾಂಕ್‌ನ ಹಿಂಬದಿಯ ಗೋಡೆ ಕೊರೆದು ಒಳನುಗ್ಗಿದ ಚೋರರು ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ನಡೆದಿದೆ. ಜನಸಂದಣಿ ಹೆಚ್ಚಾಗಿರುವ ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲೇ ರಾತ್ರಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಶನಿವಾರ ಎಂದಿನಂತೆ ವಹಿವಾಟು ನಡೆಸಿ ಬ್ಯಾಂಕ್‌ಗೆ ಬೀಗ ಹಾಕಲಾಗಿತ್ತು. ನಿನ್ನೆ ಭಾನುವಾರ ರಜೆ ಇದ್ದ ಕಾರಣ ಇತ್ತ ಯಾರೂ ಸುಳಿದಿಲ್ಲ. ಇಂದೂ ಸಹ ಗಣರಾಜ್ಯೋತ್ಸವದ ನಿಮಿತ್ತ ಸರ್ಕಾರಿ ರಜೆಯಿದ್ದು ಧ್ವಜಾರೋಹಣ ನೆರವೇರಿಸುವ ನಿಮಿತ್ತ ಬ್ಯಾಂಕ್ ನೌಕರರು ಆವರಣಕ್ಕೆ ಬಂದಾಗ ಗೋಡೆ ಕೊರೆದಿರುವುದು ಗಮನಿಸಿ ತಕ್ಷಣ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.

ಬ್ಯಾಂಕ್‌ನ ಬಾಗಿಲು ತೆಗೆಸಿ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಒಳಹೋಗಿ ನೋಡಿದಾಗ ಬ್ಯಾಂಕ್‌ನ ಹಿಂಬದಿಯ ಗೋಡೆ ಕೊರೆದು ಕಳ್ಳರು ಒಳನುಗ್ಗಿ ಕೃತ್ಯ ನಡೆಸಿರುವುದು ಕಂಡುಬಂದಿದೆ. ಬ್ಯಾಂಕ್‌ನ ಹಣವಿದ್ದ ಲಾಕರ್ ಹೊಡೆದು 14 ಲಕ್ಷ ಹಣ, 5 ಕೋಟಿ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ. ಚಾಲಾಕಿ ಕಳ್ಳರು ಯಾವುದೇ ಸುಳಿವು ಸಿಗಬಾರದೆಂದು ಸ್ಟ್ರಾಂಗ್ ರೂಮ್‌ನಲ್ಲಿದ್ದ ವೈರ್ ಕತ್ತರಿಸಿರುವುದಲ್ಲದೆ ಸಿಸಿಟಿವಿಯನ್ನು ಧ್ವಂಸಗೊಳಿಸಿ, ಕಂಪ್ಯೂಟರ್, ಮಾನಿಟರ್‌ನ್ನು ಹೊಡೆದುಹಾಕಿದ್ದಾರೆ.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಈ ಸುದ್ದಿ ಗಾಳಿಯಂತೆ ಹರಡಿದ್ದರಿಂದ ಗ್ರಾಮಸ್ಥರೆಲ್ಲರೂ ಬ್ಯಾಂಕ್‌ನತ್ತ ಧಾವಿಸಿದ್ದರು. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment