ಕನ್ನಡ ವಾರ್ತೆಗಳು

ಮನೆಯಾಚೆ ಮನೆಯೂಟ

Pinterest LinkedIn Tumblr

psmec24food5_0

ನಿತ್ಯ ಜಂಕ್‌ ಫುಡ್‌, ಫಾಸ್ಟ್‌ ಫುಡ್‌ ಹಾಗೂ ಹೋಟೆಲ್‌ ಊಟ ಮಾಡಿ ಬೇಸರವಾಗಿದೆಯೇ? ಹಾಗಿದ್ದರೆ ಆರೋಗ್ಯಕರ ಮನೆಯೂಟ ನಿಮಗಾಗಿಯೇ ಇಲ್ಲಿ ಕಾಯುತ್ತಿದೆ. ಸಜ್ಜೆ, ನವಣೆ, ಪಾಲಿಶ್‌ ಮಾಡದ ಕೆಂಪಕ್ಕಿ ಅನ್ನ, ರಾಗಿ, ಗೋಧಿ, ಸೋಯಾ ಹಿಟ್ಟಿನಿಂದ ತಯಾರಿಸಲಾದ ಪಿಜ್ಜಾ, ಬರ್ಗರ್ನಂತಹ ಕಾಂಟಿನೆಂಟಲ್, ಚೈನೀಸ್‌, ಥಾಯ್‌ ಮತ್ತು ಇಂಡಿಯನ್‌ ಫುಡ್‌ ಸಹ ಈಗ ನಗರದಲ್ಲಿ ಲಭ್ಯ…

ಬೆಂಗಳೂರಿನ ಬ್ಯುಸಿ ಲೈಫ್‌ನಲ್ಲಿ ಕೆಲಸ ಮಾಡಿಕೊಂಡು ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಾಗದವರಿಗಾಗಿ ಹಾಗೂ ಅನಾರೋಗ್ಯದಿಂದ ಪಥ್ಯದ ಊಟ ಮಾಡುತ್ತಿರುವವರಿಗಾಗಿಯೇ ಆರೋಗ್ಯಕರ ಅಡುಗೆಯನ್ನು ಉಣಬಡಿಸಲು ಇಲ್ಲೊಂದು ಸಂಸ್ಥೆ ತಯಾರಾಗಿದೆ.

ನಗರದ ಬೊಮ್ಮನಹಳ್ಳಿಯಲ್ಲಿ ಎಂಟು ತಿಂಗಳ ಹಿಂದೆ ಪ್ರಾರಂಭವಾಗಿರುವ ‘ಜಿಯೊ ನ್ಯಾಚುರಲ್‌’ ಸಂಸ್ಥೆ ಐಟಿ ಉದ್ಯೋಗಿ, ಕಾರ್ಪೋರೇಟ್‌ ಸಂಸ್ಥೆಗಳ ಉದ್ಯೋಗಿಗಳು ಹಾಗೂ ನಾನಾ ಕಾಯಿಲೆಗಳಿಂದ ಬಳಲುತ್ತಿರುವವರಿಗಾಗಿ ಆರೋಗ್ಯಕರ  ಮನೆಯೂಟವನ್ನು ತಯಾರಿಸಿ ಉಣಬಡಿಸುತ್ತಿದೆ.

ತಾಜಾ ತರಕಾರಿ, ಉತ್ತಮ ಗುಣಮಟ್ಟದ ಧಾನ್ಯಗಳನ್ನು ಬಳಸಿ ಆರೋಗ್ಯಕರ ಅಡುಗೆ ಮಾಡಲಾಗುತ್ತದೆ. ಸಜ್ಜೆ, ನವಣೆ, ರಾಗಿ, ಜೋಳ, ಗೋಧಿಹಿಟ್ಟನ್ನು ಬಳಸಿ ನಾನಾ ರೀತಿಯ ಸಿಹಿ ಹಾಗೂ ಖಾರದ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಇಲ್ಲಿ ಸಿಹಿ ಖಾದ್ಯಗಳಿಗೆ ಸಕ್ಕರೆಯನ್ನು ಬಳಸುವುದೇ ಇಲ್ಲ. ಸಕ್ಕರೆ ಬದಲು ಬೆಲ್ಲ, ಮೈದಾ ಹಿಟ್ಟಿನ ಬದಲಾಗಿ ಫೈಬರ್‌ ಅಂಶ ಇರುವ ಗೋಧಿಹಿಟ್ಟು, ಪಾಲಿಶ್ ಮಾಡದ ಕೆಂಪು ಅಕ್ಕಿ ಹೀಗೆ ಆರೋಗ್ಯಕ್ಕೆ ಅನುಕೂಲಕರವಾದ ಪದಾರ್ಥಗಳನ್ನು ಬಳಸಿ ರುಚಿಕರ ಅಡುಗೆ ಮಾಡಲಾಗುತ್ತದೆ.

ಸಜ್ಜೆ, ನವಣೆ ಬಳಸಿ ಪಾಯಸ, ಆರೋಗ್ಯಕರ ಕೇಕ್‌ ಹಾಗೂ ಕುಕ್ಕೀಸ್‌ ತಯಾರಿಸುತ್ತಾರೆ. ಅಷ್ಟೇ ಅಲ್ಲದೆ ಗೋಧಿ ಹಿಟ್ಟಿನ ಪಿಜ್ಜಾ, ಬರ್ಗರ್‌, ರಾಗಿ ಶಾವಿಗೆಯಿಂದ ಚೈನೀಸ್‌ ನೂಡಲ್ಸ್‌, ಕೆಂಪಕ್ಕಿ ಫ್ರೈಡ್‌ ರೈಸ್‌ ಅನ್ನು ತಯಾರಿಸಲಾಗುತ್ತದೆ.

ಸಂಸ್ಥೆ ತಯಾರಿಸುವ ಮಧ್ಯಾಹ್ನದ ಊಟದಲ್ಲಿ ನಿತ್ಯ ಎರಡು ರೀತಿಯ ಪಲ್ಯ, ಸಲಾಡ್‌, ರೈಸ್‌ ಐಟಂ (ಪುಲಾವ್‌, ಫ್ರೈಡ್‌ರೈಸ್‌), ಮಲ್ಟಿಗ್ರೇನ್ಸ್ನಿಂದ ತಯಾರಿಸಿದ ಚಪಾತಿ ಅಥವಾ ಪರೋಟಾ, ಒಂದು ಸಿಹಿ ತಿಂಡಿ, ದಾಲ್‌ ಅಥವಾ ಸಾಂಬಾರ್‌ ಹೀಗೆ ಎಂಟು ಬಗೆಯ ತಿನಿಸುಗಳು ಇರುತ್ತವೆ. ದಕ್ಷಿಣ ಭಾರತ, ಉತ್ತರ ಭಾರತ, ಪಿಜ್ಜಾ, ಬರ್ಗರ್‌, ಥಾಯ್‌, ಚೈನೀಸ್‌ ಹೀಗೆ ಒಂದೊಂದು ದಿನ ಒಂದೊಂದು ರೀತಿಯ ಊಟವನ್ನು ಕಳುಹಿಸಿಕೊಡುತ್ತಾರೆ. ಇದರಿಂದ ಗ್ರಾಹಕರಿಗೆ ಒಂದೇ ರೀತಿಯ ಊಟವನ್ನು ನಿತ್ಯ ಮಾಡುವ ಏಕತಾನತೆ ತಪ್ಪಿದಂತಾಗುತ್ತದೆ.

‘ತರಕಾರಿಗಳನ್ನು ನೀರಿನಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪೌಷ್ಟಿಕಾಂಶ ಹಾಳಾಗುತ್ತದೆ. ಅದಕ್ಕಾಗಿ ಇಲ್ಲಿ ತರಕಾರಿಯನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಇದರಿಂದ ಆಹಾರದಲ್ಲಿನ ಪೌಷ್ಟಿಕಾಂಶ ಹಾಗೆಯೇ ಉಳಿಯುತ್ತದೆ. ಅಲ್ಲದೆ ಕಾಳು, ಬೇಳೆ ಹಾಗೂ ತರಕಾರಿಯನ್ನು ಅಡುಗೆಗೆ ಬಳಸುವ ಮುನ್ನ ಮೂರು ಹಂತದಲ್ಲಿ ವಿನೆಗರ್‌ ಹಾಗೂ ಉಪ್ಪು ಬಳಸಿ ಸ್ವಚ್ಛಗೊಳಿಸಿ, ಅವುಗಳಲ್ಲಿ ಕ್ರಿಮಿನಾಶಕಗಳ ಅಂಶವನ್ನು ತೆಗೆಯುತ್ತೇವೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಡಾ.ಸುನಂದಿನಿ.

‘ಸದ್ಯಕ್ಕೆ ನಮ್ಮಲ್ಲಿ ಮಧ್ಯಾಹ್ನದ ಊಟವನ್ನು ಮಾತ್ರ ಮಾಡುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ರಾತ್ರಿ ಊಟ ಒದಗಿಸುವ ಸೇವೆಯನ್ನೂ ಪ್ರಾರಂಭಿಸಲಿದ್ದೇವೆ. ಒಂದು ಊಟಕ್ಕೆ ₨119 ದರ ನಿಗದಿ ಮಾಡಲಾಗಿದೆ. ಸದ್ಯಕ್ಕೆ ಬೊಮ್ಮನಹಳ್ಳಿ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ ಗ್ರಾಹಕರಿಗೆ ಆಹಾರ ಪೂರೈಸುತ್ತಿದ್ದೇವೆ. ಅದನ್ನು ವಿಸ್ತರಿಸುವ ಆಲೋಚನೆಯೂ ಇದೆ’ ಎಂದು ವಿವರಿಸುತ್ತಾರೆ ಅವರು.

‘ಮೂಲತಃ ಕೇರಳದವರಾದ ಜಯಸ್‌ ದಾಮೋದರನ್‌ ಐಟಿ ಉದ್ಯೋಗಿ. ಎಂಬಿಎ ಪದವಿ ಮುಗಿಸಿದ ಜಯಸ್ ಒಮ್ಮೆ ಅನಾರೋಗ್ಯದ ಕಾರಣ ಆರೋಗ್ಯ ಧಾಮವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಸೇವಿಸಿದ ಆಹಾರದಿಂದ ಪ್ರೇರಣೆಗೊಂಡು ಈ ಉದ್ಯಮ ಪ್ರಾರಂಭಿಸಿದರು. ಒತ್ತಡದ ಜೀವನದಲ್ಲಿ ಉತ್ತಮ ಆಹಾರ ದೊರೆಯದ ಜನರಿಗಾಗಿ ಏಕೆ ಆರೋಗ್ಯಕರ ಆಹಾರ ನೀಡಬಾರದೆಂದು ಈ ‘ಜಿಯೊ ನ್ಯಾಚುರಲ್‌’ ಸಂಸ್ಥೆ ಪ್ರಾರಂಭಿಸಿದರು. ಸದ್ಯಕ್ಕೆ ಸಂಸ್ಥೆಯಲ್ಲಿ ನುರಿತ ಬಾಣಸಿಗರು, ನ್ಯೂಟ್ರಿಷನಿಸ್ಟ್‌, ಡಯಟೀಷಿಯನ್‌, ಪ್ರಾಕೃತಿಕ ಚಿಕಿತ್ಸಾ ತಜ್ಞರ ತಂಡ ಕೆಲಸ ಮಾಡುತ್ತಿದೆ’ ಎನ್ನುತ್ತಾರೆ ಅವರು.

ಮೊಬೈಲ್‌ ಆ್ಯಪ್‌
ಐಟಿ ಹಾಗೂ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳ ಪ್ಯಾಕೇಜ್‌ ರೂಪದಲ್ಲಿ ಊಟ ಪೂರೈಸುತ್ತೇವೆ. ಅದರಲ್ಲೂ ಒಂದು ತಿಂಗಳ ಅವಧಿಯ ಊಟಕ್ಕಾಗಿ ಸದಸ್ಯತ್ವ ಪಡೆದವರಿಗೆ ಒಂದು ಮೊಬೈಲ್‌ ಆ್ಯಪ್‌ ತಯಾರಿಸಲಾಗಿದ್ದು, ಅದರಲ್ಲಿ ನಿತ್ಯ ಬೆಳಿಗ್ಗೆ ಒಂದು ಸಂದೇಶ ಕಳುಹಿಸಲಾಗುತ್ತದೆ. ಅದರಲ್ಲಿ  ಮಧ್ಯಾಹ್ನ ಕಳುಹಿಸುವ ಆಹಾರ, ಅದರಲ್ಲಿರುವ ಪೌಷ್ಟಿಕಾಂಶಗಳ ವಿವರ, ಪ್ರಮಾಣ ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಊಟವನ್ನು ನಿತ್ಯ ಆಟೋಗಳಲ್ಲಿ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.
ಮಾಹಿತಿಗೆ: 080–41474347
ವೆಬ್‌ ವಿಳಾಸ: www.jiyonatural.com

ಆರೋಗ್ಯ ಈ ಊಟ
‘ಜಿಯೊ ನ್ಯಾಚುರಲ್‌’ನಲ್ಲಿ ಸಾಮಾನ್ಯ ಜನರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಡುಗೆ ತಯಾರಿಸುವುದಿಲ್ಲ. ಮುಂದೆ ಬರಬಹುದಾದ ಸಕ್ಕರೆ, ರಕ್ತದೊತ್ತಡ ಕಾಯಿಲೆಗಳ ಬಗ್ಗೆಯೂ ಗಮನವಹಿಸಿ ಅಡುಗೆಯನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಈಗಾಗಲೇ ಸಕ್ಕರೆ ಕಾಯಿಲೆ ಹಾಗೂ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರಿಗೂ ಆಹಾರ ತಯಾರಿಸಿ ಕಳುಹಿಸುತ್ತೇವೆ. ಈ ರೀತಿ ಸಮಸ್ಯೆ ಎದುರಿಸುತ್ತಿರುವವರ ವೈದ್ಯಕೀಯ ವರದಿ, ವಿವರ ತರಿಸಿಕೊಂಡು ಮೊದಲು ಪರಿಶೀಲಿಸುತ್ತೇವೆ. ನಂತರ ಅವರವರ ಅಗತ್ಯಗಳಿಗೆ ತಕ್ಕಂತೆ ಅಡುಗೆ ತಯಾರಿಸುತ್ತವೆ.
– ಡಾ.ಸುನಂದಿನಿ

Write A Comment