ಬೆಂಗಳೂರು: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ದೇಶಕ್ಕೆ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ಎಡ ಪಕ್ಷಗಳ ಸದಸ್ಯರು ನಗರದ ಪುರಭವನದ ಎದುರು ಶನಿವಾರ ಪ್ರತಿಭಟನೆ ಮಾಡಿದರು.
ದೇಶದ ಸ್ವಾತಂತ್ರ್ಯ ಚಳವಳಿ ಸಾಮ್ರಾಜ್ಯಶಾಹಿಯ ವಿರುದ್ಧ ನಡೆಯಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಒಬಾಮ ಅವರಂತಹ ಸಾಮ್ರಾಜ್ಯಶಾಹಿ ಪ್ರತಿನಿಧಿಯನ್ನು ದೇಶಕ್ಕೆ ಆಹ್ವಾನಿಸುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
‘ಅಮೆರಿಕ, ಭಯೋತ್ಪಾದನೆ ನಿಗ್ರಹದ ಸೋಗಿನಲ್ಲಿ ಇತರೆ ರಾಷ್ಟ್ರಗಳನ್ನು ತನ್ನ ಕೈಗೊಂಬೆ ಮಾಡಿಕೊಳ್ಳಲು ಹೊರಟಿದೆ. ಒಬಾಮ ಅವರು ದೇಶದ ಸಾರ್ವಜನಿಕ ಆಸ್ತಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒತ್ತೆ ಇಡಲು ಭಾರತಕ್ಕೆ ಬರುತ್ತಿದ್ದಾರೆ’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ಚುನಾವಣೆಗೂ ಮುನ್ನ ಶ್ರೀರಾಮ ನಾಮ ಜಪಿಸುತ್ತಿದ್ದ ಬಿಜೆಪಿ, ಈಗ ಅಧಿಕಾರ ಉಳಿಸಿಕೊಳ್ಳಲು ಒಬಾಮ ಹೆಸರು ಜಪಿಸುತ್ತಿದೆ. ಒಬಾಮ ಭೇಟಿಯಿಂದ ದೇಶದ ಸ್ವಾವಲಂಬನೆಗೆ ಧಕ್ಕೆಯಾಗಲಿದೆ ಎಂದರು.
ಪ್ರತಿಭಟನಾಕಾರರು ‘ಒಬಾಮ ಗೋ ಬ್ಯಾಕ್’ ಎಂಬ ಸಂದೇಶವುಳ್ಳ ಆಕಾಶ ಬುಟ್ಟಿಯನ್ನು ಹಾರಿ ಬಿಟ್ಟು ಮತ್ತು ಬೀದಿ ನಾಟಕ ಪ್ರದರ್ಶಿಸಿ, ಒಬಾಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಎಂ, ಎಸ್ಯುಸಿಐ, ಸಿಪಿಐ ಹಾಗೂ ಎಐಎಫ್ಬಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
