ಮಂಗಳೂರು, ಜ.24 : ಉಪ್ಪಿನಂಗಡಿ ಸಮೀಪದ ಕರಾಯ ಮಸೀದಿಗೆ ಸಂಘ ಪರಿವಾರದ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದ ದುಷ್ಕೃತ್ಯವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಹಿಂದೂ ಹೃದಯ ಸಂಗಮದಲ್ಲಿ ಪಾಲ್ಗೊಂಡು ಪ್ರಚೋದನಕಾರಿ ಭಾಷಣ ಮಾಡಿದ ಸಂಘಪರಿವಾರದ ಪ್ರವೀಣ್ ತೊಗಾಡಿಯಾ, ಕಲ್ಲಡ್ಕ ಪ್ರಭಾಕರ್ ಭಟ್‌ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ವಿಫಲರಾದ ಜಿಲ್ಲಾ ಪೊಲೀಸ್ ಇಲಾಖೆಯ ಕ್ರಮವನ್ನು ಪ್ರತಿಭಟನಕಾರರು ಖಂಡಿಸಿದರಲ್ಲದೆ, ತಕ್ಷಣ ರಾಜ್ಯ ಸರಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
‘ಕೋಮುವಾದಿಗಳನ್ನು ತೊಲಗಿಸಿ-ಕರಾವಳಿಯನ್ನು ಉಳಿಸಿ’ ಎಂಬ ಘೋಷಣೆ ಸಹಿತ ಸಾಮರಸ್ಯಕ್ಕಾಗಿ ನಡೆಸಿದ ಜನಾಂದೋಲನದಲ್ಲಿ ಪಾಲ್ಗೊಂಡ ಪಿಎಫ್‌ಐ ಕಾರ್ಯಕರ್ತರು ‘ಕೋಮುದ್ವೇಷ ಭಾಷಣ ಮಾಡಿದ, ಬ್ಯಾರಿ-ಮುಸ್ಲಿಮರನ್ನು ಅಪಹಾಸ್ಯ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸ ಬೇಕು, ಉಪ್ಪಿನಂಗಡಿ ಪರಿಸರದ ಮಸೀದಿ- ಮದ್ರಸದ ಮೇಲೆ ದಾಳಿ ನಡೆಸಿದ ಫ್ಯಾಶಿಸ್ಟ್ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರಗಿಸಬೇಕು, ಕೋಮುಗಲಭೆಗೆ ಕಾರಣಕರ್ತರಾದ ಸಂಘಪರಿವಾರದ ಮುಖಂಡರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಬೇಕು, ಪ್ರವೀಣ್ ತೊಗಾಡಿಯಾ, ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತ ಸಹಿತ ಮತೀಯ ದ್ವೇಷ ಭಾಷಣ ಮಾಡುವವರನ್ನು ಜಿಲ್ಲೆಗೆ ಬಾರದಂತೆ ನಿರ್ಬಂಧಿಸಬೇಕು, ದಾಳಿಯಲ್ಲಿ ಗಾಯ- ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಬೇಕು, ಜಿಲ್ಲೆಯ ಶಾಂತಿ ಕದಡುವ ಸಂಘಪರಿವಾರದ ಸಂಘಟನೆಗಳನ್ನು ನಿಷೇಧಿಸಬೇಕು, ಘಟನೆಗೆ ಸಂಬಂಧಿಸಿ ಬಂಧನಕ್ಕೊಳಗಾದ ಅಮಾ ಯಕರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಹೃದಯ ಸಂಗಮದಲ್ಲಿ ಪಾಲ್ಗೊಂಡ ಕಾರ್ಯಕರ್ತರು 35 ನಿಮಿಷಗಳ ಕಾಲ ಕರಾಯ ಮಸೀದಿಯಲ್ಲಿ ದಾಂಧಲೆ ನಡೆಸಿದ್ದಾರೆ. ಆದರೆ ಪೊಲೀಸರು ಸಕಾಲಕ್ಕೆ ಆಗಮಿಸಿಲ್ಲ. ಘಟನೆ ನಡೆದ ಎರಡು ದಿನದ ಬಳಿಕ ಜ.18ರಂದು ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸಂಸದ ನಳಿನ್ ಕುಮಾರ್ ಭೇಟಿ ನೀಡಿದ ಬಳಿಕ ಕೆಲವು ಅಮಾಯಕ ಮುಸ್ಲಿಮರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರೆ, ಜ.19ರಂದು ಮಸೀದಿಯಲ್ಲಿ ದಾಂಧಲೆ ನಡೆಸಿದವರ ಮೇಲೆ ಕೇಸು ದಾಖಲಿಸಲಾಗಿದೆ.
ವೇದಿಕೆಯಲ್ಲಿ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ನಂದರಬೆಟ್ಟು, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಕೂಸಪ್ಪ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಕರಾಯ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಅಶ್ರಫ್ ಕಲ್ಲೇಗ ಉಪಸ್ಥಿತರಿದ್ದರು. ಪಿಎಫ್‌ಐ ಬೆಳ್ತಂಗಡಿ ವಲಯಾಧ್ಯಕ್ಷ ಹೈದರ್ ನೀರ್‌ಸಾಲ್ ವಂದಿಸಿದರು. ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ರವೂಫ್ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.








