ಕನ್ನಡ ವಾರ್ತೆಗಳು

ಕಾರ್ಕಳ ಗೊಮ್ಮಟನಿಗೆ 108 ಕಲಶಗಳ ಮಹಾಮಜ್ಜನ :ವೈವಿಧ್ಯಮಯ ಬಣ್ಣಗಳಲ್ಲಿ ಕಂಗೊಳಿಸಿದ ಗೊಮ್ಮಟ

Pinterest LinkedIn Tumblr

Karkala_maha_mastka_6

ಕಾರ್ಕಳ, ಜ.22: ಕಳೆದ 583 ವರ್ಷಗಳಿಂದ ಗೊಮ್ಮಟ ಬೆಟ್ಟದ ತುದಿಯಲ್ಲಿ ಬಿಸಿಲು-ಗಾಳಿ-ಮಳೆಗೆ ಮೈಯೊಡ್ಡಿ ನಿಂತಿರುವ ಬಾಹುಬಲಿ ಮೂರ್ತಿಗೆ ಇಂದು ರಾತ್ರಿ ನಡೆದಾಗ ನಿಜವಾದ ಅರ್ಥದಲ್ಲಿ ಆತ ಗೊಮ್ಮಟ (ಸುಂದರ, ಮನ್ಮಥ, ಚೆಲುವ ಎಂದರ್ಥ)ನಾಗಿ ನೆರೆದ ಸಾವಿರಾರು ಮಂದಿ ಭಾವುಕ ಭಕ್ತರಿಗೆ, ಸಾಮಾನ್ಯ ವೀಕ್ಷಕರಿಗೆ ಕಂಡುಬಂದ.

Karkala_maha_mastka_7

42 ಅಡಿ ಎತ್ತರದ ಏಕಶಿಲಾ ಮೂರ್ತಿಯಾದ ಕಾರ್ಕಳದ ಬಾಹುಬಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಹಲವು ರೂಪಗಳಲ್ಲಿ, ಹಲವು ಬಣ್ಣಗಳಲ್ಲಿ ಕಂಗೊಳಿಸಿದ. ರಾತ್ರಿಯ ಬೆಳಕಿನಲ್ಲಿ ಒಮ್ಮೆ ಹಿಮಗಿರಿಯ ಶಿಖರದಂತೆ, ಬೆಳ್ಳಿ ಬೆಟ್ಟದಂತೆ, ಸ್ಫಟಿಕದ ಮೂರ್ತಿಯಂತೆ ಕಂಡುಬಂದರೆ, ಇನ್ನೊಮ್ಮೆ ಚಂದನದ ಮೂರ್ತಿಯಂತೆ ಕಣ್ಮನ ಸೂರೆಗೊಂಡ.

Karkala_maha_mastka_8

ಒಮ್ಮಮ್ಮೆ ಆತನ ಸಮಚಿತ್ತ ಭಾವದ ಮುಖಾರವಿಂದದಲ್ಲಿ ಮಂದಸ್ಮಿತವೊಂದು ತೆಳುವಾಗಿ ಕಾಣಿಸಿಕೊಂಡರೆ, ಮತ್ತೊಮ್ಮೆ ಗಂಭೀರ ಮುಖಮದ್ರೆಯನ್ನು ಹೊತ್ತು ನಿಂತ ದೃಶ್ಯ ಕಂಡುಬಂತು. ಒಮ್ಮೆ ಆತನನ್ನು ಕಾವಿಯಲ್ಲಿ ಅದ್ದಿ ತೆಗೆದಂತೆ ಭಾಸವಾದರೆ, ಇನ್ನೊಮ್ಮೆ ರಕ್ತ ಕೆಂಪು ಬಣ್ಣದಲ್ಲಿ ಕಾಳಿ, ದುರ್ಗೆಯರ ಅವತಾರದ ನೆನಪು ಮೂಡಿಸಿದ.

ಲೌಕಿಕ ಜೀವನದ ಬದುಕನ್ನು ತೊರೆದು ದಿಗಂಬರನಾಗಿ, ತ್ಯಾಗ, ಅಹಿಂಸೆ, ಶಾಂತಿಯ ಮಂತ್ರವನ್ನು ಜಗತ್ತಿಗೆ ಬೋಧಿಸಿದ ಬಾಹುಬಲಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ವಿವಿಧ ವಸ್ತುಗಳಿಂದ ಮಹಾ ಅಭಿಷೇಕವನ್ನು ಮಾಡಲಾಗುತ್ತಿದೆ. ಇಂದಿನಿಂದ ಕಾರ್ಕಳದ ಗೊಮ್ಮಟನ ಮಹಾಮಜ್ಜನ ಜ.30ರವರೆಗೆ ನಡೆಯಲಿದೆ.

Karkala_maha_mastka_9

ಶ್ರವಣಬೆಳಗೊಳದಲ್ಲಿ ಹಗಲಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಅವಿಭಜಿತ ದ.ಕ.ಜಿಲ್ಲೆಯಲ್ಲಿರುವ ಮೂರು ಕಡೆಗಳಲ್ಲಿ ರಾತ್ರಿಯ ವೇಳೆಯೇ ನಡೆಯುತ್ತದೆ. ರಾತ್ರಿಯ ಗಂಭೀರತೆ, ಪ್ರಶಾಂತ ವಾತಾವರಣ, ಶುಭ್ರ ಆಕಾಶ ಗೊಮ್ಮಟನ ಬಹುವರ್ಣ ಮಾರ್ಪಾಡಿಗೆ ಸೂಕ್ತ ಹಿನ್ನೆಲೆಯಾಗಿ ಗೋಚರಿಸುತ್ತದೆ.

ಈ ಸಮಾರಂಭದಲ್ಲಿ ಇದೇ ಮೊದಲ ಬಾರಿ ಕಬ್ಬಿಣದ ಐದು ಅಂತಸ್ತಿನ ಅಟ್ಟಳಿಗೆಯನ್ನು ನಿರ್ಮಿಸಲಾಗಿದ್ದು, ಇವುಗಳನ್ನು ಏರಿದ ಮೊದಲ ದಿನದ ಮಹಾಮಸ್ತಕಾಭಿಷೇಕದ ಸೇವಾಕರ್ತೃ ಕುಟುಂಬ ಗೊಮ್ಮಟನ ತಲೆಯ ಮೇಲೆ ಎರೆದ ನೀರು, ಎಳೆನೀರು, ಹಾಲು, ಅರಸಿನ, ಅಕ್ಕಿನ ಹಿಟ್ಟು, ಕಬ್ಬಿನ ಹಾಲು, ಚಂದನ, ಅಷ್ಟಗಂಧ, ಶ್ರೀಗಂಧಗಳು ಸಮುದ್ರದ ಅಲೆಅಲೆಯಂತೆ ನಿಧಾನವಾಗಿ ತಲೆಯಿಂದ ಆರಂಭಿಸಿದ ಕಾಲಿನ ಪಾದದ ತುದಿಯವರೆಗೆ ಇಳಿಯುವ ದೃಶ್ಯ ನಯನ ಮನೋಹರ. ಪ್ರತಿ 12 ವರ್ಷಗಳಿಗೊಮ್ಮೆ ಮಾತ್ರ ನೋಡಲು ಸಿಗುವ ಅಪರೂಪದ ದೃಶ್ಯಕಾವ್ಯವಿದು.

Karkala_maha_mastka_10d

ಮೊದಲ ದಿನವಾದ  ಬುಧವಾರ ಕೆರ್ವಾಶೆ ಹೋಬಳಿ ಪಡಂಗಡಿಗುತ್ತು ನೇಮಿರಾಜ ಪಡಿವಾಳ್, ಹೋಬಳಿ ಗುರಿಕಾರ ದಿ.ಶಿರ್ತಾಡಿ ಧರ್ಮಸಾಮ್ರಾಜ್ಯರ ನೆನಪಿಗಾಗಿ ಅವರ ಕುಟುಂಬ 108 ಕಲಶಗಳ ಮಹಾಮಸ್ತಕಾಭಿಷೇಕ ನೆರವೇರಿಸಿತು.

ಕಾರ್ಕಳದ ಜೈನಮಠದಿಂದ ಪಲ್ಲಕ್ಕಿಯಲ್ಲಿರಿಸಿದ ಅಗ್ರೋದಕಗಳನ್ನು ಮೆರವಣಿಗೆಯಲ್ಲಿ ಬಾಹುಬಲಿ ಬೆಟ್ಟಕ್ಕೆ ತರುವುದರೊಂದಿಗೆ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಾಯಿತು. ಕತ್ತಲು ಕವಿಯುತ್ತಿದ್ದಂತೆ ಬೆಟ್ಟದತ್ತ ಕಾಲ್ನಡಿಗೆ ಮೂಲಕ, ವಾಹನಗಳಲ್ಲಿ ಧಾವಿಸಿ ಬಂದ ಭಕ್ತ ಜನ ಸಮೂಹ, ಭಾವಪರವಶರಾಗಿ ಭಕ್ತಿಭಾವಗಳಿಂದ ನೋಡುತ್ತಿದ್ದಂತೆ ಮಂತ್ರಪಠಣ, ಭಕ್ತಿಗೀತೆ, ಘೋಷಣೆಗಳ ಝೇಂಕಾರದ ನಡುವೆ ಅಭಿಷೇಕ ಪ್ರಕ್ರಿಯೆ ಆರಂಭಗೊಂಡಿತು.

ಜೈನಮಠದ ಶ್ರೀಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ನಿರ್ದೇಶನದಂತೆ ಸಂಸ್ಥಾನ ಪುರೋಹಿತ ನಾಗಕುಮಾರ ಇಂದ್ರ ಹಾಗೂ ಕ್ಷೇತ್ರ ಪುರೋಹಿತ ವರ್ಧಮಾನ ಇಂದ್ರ ಅವರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕದ ಎಲ್ಲಾ ಪ್ರಕ್ರಿಯೆಗಳು ನಡೆದವು.

ಭಗವಾನ್ ಶ್ರೀಬಾಹುಬಲಿ ಮಂತ್ರಗಳು, ಭಜನೆ, ಭಕ್ತಿ ಹಾಡುಗಳು ಹಾಗೂ ಭಕ್ತಿಪರವಶ ಭಕ್ತರ ನೃತ್ಯಗಳಿಂದ ಇಡೀ ವಾತಾವರಣದಲ್ಲಿ ಭಕ್ತಿಭಾವಗಳ ರಸಗಂಗೆ ಎಲ್ಲೆಲ್ಲೂ ತುಂಬಿತುಳುಕುವಂತೆ ಕಂಡುಬಂತು. ಇದರೊಂದಿಗೆ ಶಿಲೆಯಲ್ಲಿ ಮೂಡಿರುವ ಗೊಮ್ಮಟನ ವಿವಿಧ ವರ್ಣಗಳನ್ನು ಧರಿಸಿ ಭಕ್ತ ಜನರ ಹರ್ಷೋದ್ಗಾರಕ್ಕೆ ಕಾರಣವಾದನು. ಮೊದಲು 108 ಕಲಶಗಳ ಪವಿತ್ರ ಜಲಾಭಿಷೇಕ, ಬಳಿಕ ನಾರಿಕೇಳ ಅಭಿಷೇಕ. ಮುಂದಿನ ಸರದಿ ಕಬ್ಬಿನ ಹಾಲು ಅಥವಾ ಇಕ್ಷು ರಸ ಅಭಿಷೇಕ. ಅದು ಅಲೆಅಲೆಯಾಗಿ ಇಳಿದು ಬರುವ ದೃಶ್ಯ ವರ್ಣನಾತೀತ.

ನಂತರದ ಸರದಿ ಹಾಲಿನದು ಕ್ಷೀರಾಭಿಷೇಕ. ಆಗ ಮೂರ್ತಿ ಅಮೃತಶಿಲೆಯಲ್ಲಿ ಕಡೆದಿರಿಸಿದಂತೆ ಕಂಡುಬಂತು. ಕಲ್ಕಾಚೂರ್ಣ ಅಭಿಷೇಕದ ವೇಳೆ ಗೊಮ್ಮಟ ಮುಖದಲ್ಲಿ ವಿಶೇಷ ಕಳೆಮೂಡಿದರೆ, ಅರಸಿನ ಅಭಿಷೇಕ, ಕಷಾಯ, ಗಂಧ-ಚಂದನಾಭಿಷೇಕದಿಂದ ಆತ ಕಾವಿ ಬಣ್ಣಕ್ಕೆ ತಿರುಗಿದ. ಬಳಿಕ ಅಷ್ಟಗಂಧ. ಅನಂತರ ಪುಷ್ಪವೃಷ್ಟ ನಡೆಯಿತು. ಅನಂತರ ಗೊಮ್ಮಟನಿಗೆ ಅವನಷ್ಟೇ ಎತ್ತರದ ಪಂಚವರ್ಣದಿಂದ ತಯಾರಿಸಿದ 60 ಅಡಿಯ ಬೃಹತ್ ಹೂವಿನ ಹಾರ ಅರ್ಪಿಸಲಾಯಿತು.

ಕೊನೆಯಲ್ಲಿ ಆತನಿಗೆ ಮಹಾಮಂಗಳಾರತಿ ಮಾಡಲಾಯಿತು. ಮಂಗಳಾರತಿಯನ್ನು ಹಗ್ಗದ ನೆರವಿನಿಂದ ಪಾದದಿಂದ ಆರಂಭಿಸಿ ನಿಧಾನವಾಗಿ ಮೇಲಕ್ಕೆ ಒಯ್ದು ಮುಖಕ್ಕೆ ಮೂರು ಬಾರಿ ಬೆಳಗಿಸಲಾಯಿತು. ಗೊಮ್ಮಟ ಬೆಟ್ಟದ ಆಸುಪಾಸಿನಲ್ಲಿ ಇರಿಸಲಾದ ಕ್ಲೋಸ್ಟ್ ಸರ್ಕ್ಯೂಟ್ ಟಿವಿಗಳಲ್ಲಿ ಇದನ್ನು ನೇರವಾಗಿ ಪ್ರಸಾರ ಮಾಡಲಾಯಿತು.

Write A Comment