
ಕುವೈತ್: ಕುವೈತ್ ಕನ್ನಡ ಕೂಟದ ವರ್ಷಾಂತ್ಯದ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಶುವೈಕ್ನ ಮೂವ್ ಎಂಡ್ ಪಿಕ್ ಹೋಟೆಲ್ನಲ್ಲಿ ವಾರ್ಷಿಕ ಮಹಾಸಭೆಯು ಜರಗಿತು. ಜ್ಯೋತಿ ಬೆಳಗುವುದರ ಮೂಲಕ ಮಹಾಸಭೆಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರಿ ಮಹಾಮಹಿಮ ಶ್ರೀಯುತ ಸುನೀಲ್ ಜೈನ್ ದಂಪತಿಗಳು ಆಗಮಿಸಿದ್ದರು. ಅತಿಥಿಯಾಗಿ ಆರೋಗ್ಯ ಸಚಿವ ಯು.ಟಿ.ಖಾದರ್ ಭಾಗವಹಿಸಿ ಶುಭ ಹಾರೈಸಿದರು. ಸಂಧ್ಯಾ ಅರುಣ್ ಕುಮಾರ್ ತಂಡದಿಂದ ಪ್ರಾರ್ಥನೆ ನೆರವೇರಿತು. ವಿವಿಧ ಸಮಿತಿಯ ಸಂಚಾಲಕರು, ಉಪ ಸಂಚಾಲಕರು ಹಾಗೂ ಸಮಿತಿ ಸದಸ್ಯರನ್ನು, ನೃತ್ಯ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು. ಪ್ರಸಕ್ತ ವರ್ಷದಲ್ಲಿ ನೆಡೆದ ವಿವಿಧ ಆಟೋಟ, ಸ್ಪರ್ಧೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದು ವಿಜೇತವಾದ ತಂಡದವರು ಪಾರಿತೋಷಕವನ್ನು ಪಡೆದು ಗೆಲುವಿನ ಸಂಭ್ರಮವನ್ನು ಆಚರಿಸಿದರು.









ಕರ್ನಾಟಕ ಸರಕಾರದಿಂದ ’ಕರ್ನಾಟಕ ಕಲಾ ಶ್ರೀ’ ಬಿರುದು ಪಡೆದ ಕೂಟದ ಸದಸ್ಯೆ, ನೃತ್ಯಗುರು ರಂಗಶ್ರೀ ಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮರಳಮಲ್ಲಿಗೆ ಸಂಚಿಕೆಯನ್ನು ರಾಯಭಾರಿಗಳು ಬಿಡುಗಡೆಗೊಳಿಸಿದರು. ರಾಯಭಾರಿಯವರಿಗೆ ಕುವೈತ್ ಕನ್ನಡ ಕೂಟದ ವತಿಯಿಂದ ’ಪ್ರಧಾನ ಮಂತ್ರಿ ಪರಿಹಾರ ನಿಧಿ’ ಗೆ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ರಾಯಭಾರಿಯವರಿಗೆ ಹಾಗೂ ಸಚಿವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ನಿರ್ಗಮನ ಅಧ್ಯಕ್ಷ ಡಾ|ದಿವಾಕರ್ ರವರು ಸದಸ್ಯರ ಸಹಕಾರಕ್ಕೆ ಸಂತಸ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು. ಕ್ರಿಸ್ಮಸ್ ಹಾಗೂ ಹೊಸವರ್ಷ ಆಚರಣೆಯ ಅಂಗವಾಗಿ ಮಕ್ಕಳಿಂದ ನೃತ್ಯ ಹಾಗೂ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ನಡೆಯಿತು. ಸಾಂತಾಕ್ಲಾಸ್ ನ ಆಗಮನದೊಂದಿಗೆ ಸದಸ್ಯರಾದಿಯಾಗಿ ಮಕ್ಕಳು, ಚಿಣ್ಣರು ಚಾಕೋಲೆಟ್ ಪಡೆದು ಕುಣಿದು ಸಂಭ್ರಮಿಸಿದರು.
ಕೋಶಾಧಿಕಾರಿ ರಾಜೇಶ್ ವಿಠ್ಠಲ್ ರವರು ವರ್ಷದ ಅಯ-ವ್ಯಯ ಪಟ್ಟಿಯನ್ನು ಮಂಡಿಸಿ, ಅನುಮೋದನೆ ಪಡೆದರು. ತದನಂತರ 2015ರ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾದ ಸುಧೀರ್ ಶೆಣೈಯವರು ಸರ್ವಸದಸ್ಯರ ಸಹಕಾರ, ಬೆಂಬಲ ಕೋರಿದರು.
ಕಾರ್ಯಕ್ರಮದ ಅಂಗವಾಗಿ ನೆಡೆದ ’ಗಾನೋತ್ಸವ’ ಕಾರ್ಯಕ್ರಮದಲ್ಲಿ, ಕನ್ನಡದ ಖ್ಯಾತ ಹಿನ್ನೆಲೆಗಾಯಕ ಚಿನ್ಮಯ್ ಅತ್ರೇಯಾಸ್ರವರ ಸಂಗೀತ ರಸಸಂಜೆಯನ್ನು ಗಾನಪ್ರಿಯರು ಆಸ್ವಾದಿಸಿದರು. ಸಹಗಾಯಕಿಯಾಗಿ ಸ್ಥಳೀಯ ಪ್ರತಿಭೆ ’ಗಲ್ಫ್ ವಾಯ್ಸ್ ಆಫ್ ಮಂಗಳೂರು’ ಖ್ಯಾತಿಯ ಶ್ರೀಮತಿ ಘ್ಲಾಡಿಸ್ ಲೋರೆನಾ ಜೊತೆಯಾದರು. ಸದಸ್ಯ ಗಾಯಕರು ಕೂಡ ’ಗಾನ ಸಂಜೆ’ ಗೆ ತಮ್ಮ ದನಿಗೂಡಿಸಿದರು. ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಯಾ ವಿ. ಕಾರ್ಕಳ ಬಹಳ ಸುಂದರವಾಗಿ ಕಾರ್ಯಕ್ರಮ ನಿರೂಪಣೆಗೈದರು. ಇವರಿಗೆ ಸಂಗೀತ ಮಂಗಳಗಿ ಕೂಡ ಜೊತೆಯಾದರು. ಕಾರ್ಯದರ್ಶಿ ಅನಂತ್ ಮಂಗಳಗಿಯವರ ಧನ್ಯವಾದ ಸಮರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನದೊಂದಿಗೆ ಹೊಸವರ್ಷದ ಆಚರಣೆಯನ್ನು ನೆಡೆಸಲಾಯಿತು.
ಚಿತ್ರ-ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ.