ಮಂಗಳೂರು, ಜ.14 : ನಗರದ ಟೋಕ್ಯೋ ಮಾರ್ಕೆಟ್ನಲ್ಲಿರುವ ದರ ಕಡಿತ ಬಟ್ಟೆ ಅಂಗಡಿಯಿಂದ ಕಳೆದ ಮೂರು ವರ್ಷಗಳಿಂದ ರೂ. 40 ಲಕ್ಷ ಬೆಲೆಬಾಳುವ ಬಟ್ಟೆಬರೆಯನ್ನು ಕಳವುಗೈದು, ಇತರ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂದರು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಟೋಕ್ಯೋ ಮಾರುಕಟ್ಟೆಯಲ್ಲಿರುವ ಸಾಗರ್ ಡ್ರೆಸ್ಸರ್ಸ್ ಎಂಬ ದರ ಕಡಿತದ ಅಂಗಡಿ ಯಲ್ಲಿ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ಕೆಲಸಕ್ಕೆ ಸೇರಿದ್ದ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಆದಿಲ್ (21) ಕಳವು ಪ್ರಕರಣದ ಸೂತ್ರದಾರನಾಗಿದ್ದಾನೆ. ಈತ ಕಳವುಗೈದ ಮಾಲನ್ನು ಪಡೆದುಕೊಂಡು ಇತರೆ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಮೆರೀನಾ ಫ್ಯಾಷನ್ ಅಂಗಡಿ ಮಾಲೀಕ ನವಾಝ್ ಕುದ್ರೋಳಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಸಫ್ವಾನ್ ಎಂಬಾತ ನಾಪತ್ತೆಯಾಗಿದ್ದಾನೆ.
ಸಾಗರ್ ಡ್ರೆಸ್ಸರ್ಸ್ ಅಂಗಡಿಯಲ್ಲಿ ಮೂರು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ್ದ ಆದಿಲ್ ಅಂಗಡಿಯ ಹಿಂಬದಿ ಬಾಗಿಲಿನ ಶಟರಿನ ನಕಲಿ ಕೀಯನ್ನು ತಯಾರಿಸಿದ್ದ. ಬೆಳಿಗ್ಗೆ ಕೆಲಸಕ್ಕೆ ಬೇಗನೇ ಬಂದು ಹಿಂಬದಿ ಶಟರನ್ನು ನಕಲಿ ಕೀ ಬಳಸಿ ತೆಗೆದು ಒಳಗಿದ್ದ ಬಟ್ಟೆಗಳ ಕಟ್ಟನ್ನು ಕಳವುಗೈದು ಕೆಳಗಿನ ಅಂಗಡಿಯಾತ ನವಾಝ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದ. ಆತ ಮತ್ತು ಸಫ್ವಾನ್ ಸೇರಿಕೊಂಡು ಅದನ್ನು ಜಿಲ್ಲೆಯ ವಿವಿಧ ಅಂಗಡಿಗಳಿಗೆ ಲೈನ್ ಸೇಲ್ ಮೂಲಕ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಆದಿಲ್ ತಾನು ಕಳವುಗೈದ ಕಟ್ಟನ್ನು ಕಟ್ಟಡದ ಜನರೇಟರ್ ಬಳಿ ಇರಿಸಿದ್ದ. ಇದನ್ನು ಕಂಡು ಕಟ್ಟಡದ ವಾಚ್ಮೆನ್ ಕಟ್ಟಿನ ಮೇಲೆ ಅಂಗಡಿ ಹೆಸರು ಇರುವುದನ್ನು ಕಂಡು ಸಾಗರ್ ಡ್ರೆಸ್ಸರ್ಸ್ ಮಾಲೀಕರಿಗೆ ವಿಷಯ ತಿಳಿಸಿದ್ದರು.
ಅವರು ಅಂಗಡಿಯಲ್ಲಿನ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ಆದಿಲ್ ವಿದೇಶಕ್ಕೆ ಪರಾರಿಯಾಗಿದ್ದರೆ, ಸಫ್ವಾನ್ ಜಿಲ್ಲೆಯಿಂದ ನಾಪತ್ತೆಯಾಗಿದ್ದಾನೆ. ನವಾಜ್ ಕುದ್ರೋಳಿಯನ್ನು ಬಂಧಿಸಿದ ಪೊಲೀಸರು ಆತನ ಅಂಗಡಿಯಲ್ಲಿದ್ದ ರೂ. 1 ಲಕ್ಷದ ಮಾಲನ್ನು ವಶಪಡಿಸಿ ಕೊಂಡಿದ್ದರೆ, ಸಫ್ವಾನ್ ಮನೆಯಲ್ಲಿದ್ದ ರೂ. 50,000 ಮಾಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಅಂಗಡಿ ಮಾಲೀಕ ಖಮರುದ್ದೀನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
