ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಸಲಾಪುರ ಗ್ರಾಮದಲ್ಲಿ ಮಂಗಳವಾರ ಅಕ್ಷರಶಃ ಗಜಕಾಳಗ ನಡೆ ಯಿತು! ಅದು ಅಂಥಿಂಥ ಕಾಳಗವಲ್ಲ; ತೊಡೆ ತಟ್ಟಿ ನಿಂತ ಸಾಕಾನೆ– ಕಾಡಾನೆ ಮಧ್ಯೆ ನಡೆದ ಕಾಳಗ. ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಈ ಕಾಳಗವನ್ನು ಪ್ರತ್ಯಕ್ಷವಾಗಿ ಕಂಡರು…!
ಹೌದು. ಪಿರಿಯಾಪಟ್ಟಣ ತಾಲ್ಲೂ ಕಿನ ವಿವಿಧ ಗ್ರಾಮಗಳಿಗೆ ದಾಳಿಯಿಟ್ಟ ಒಂಟಿ ಸಲಗವನ್ನು ಮರಳಿ ಕಾಡಿಗಟ್ಟಲು ನಡೆಸಿದ ಕಾರ್ಯಾಚರಣೆ ಗಜಕಾಳಗಕ್ಕೆ ಸಾಕ್ಷಿಯಾಯಿತು. ಮಾತ್ರವಲ್ಲ; ಈ ಕಾರ್ಯಾಚರಣೆ ನೋಡಲು ಸೇರಿದ ಸಾವಿರಾರು ಜನರಿಗೆ ಬೆದರಿದ ಆನೆಗಳು ಇನ್ನಿಲ್ಲದಂತೆ ಪೇಚಾಡಿದವು. ಮನಸೋ ಇಚ್ಛೆ ಓಡಾಡಿದವು. ಕೊನೆಗೂ ಆನೆಚೌಕೂರು ಶಿಬಿರದಿಂದ ಬಂದ ಬಲರಾಮ (ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಆನೆ)ನ ನೇತೃತ್ವದ ನಾಲ್ಕು ಸಾಕಾನೆಗಳ ತಂಡ ಒಂಟಿಸಲಗವನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಯಿತು.
ಇವರೆಲ್ಲರ ಮಧ್ಯೆ ನಲುಗಿಹೋಗಿದ್ದು ಮಾತ್ರ ಬಡ ರೈತರು. ಘಟನೆಯಲ್ಲಿ ಒಬ್ಬ ಮಾವುತ ಹಾಗೂ ಪತ್ರಿಕಾ ಛಾಯಾಗ್ರಾಹಕ ಕೂಡ ಕೂದಲೆ ಳೆಯಲ್ಲೇ ಅಪಾಯದಿಂದ ಪಾರಾದರು.
ಘಟನೆ ವಿವರ: ಪಿರಿಯಾಪಟ್ಟಣ ತಾಲ್ಲೂಕಿನ ಅನೇಚೌಕೂರು ಅರಣ್ಯ ಪ್ರದೇಶದಿಂದ ಬಂದ ಗಂಡಾನೆ ಸುಂಡವಾಳು ಗ್ರಾಮಕ್ಕೆ ನುಗ್ಗಿತು. ಬೆಳಿಗ್ಗೆ 6.20ರ ಸುಮಾರಿಗೆ ಚೌಕೂರು, ಹುಣಸೇಕುಪ್ಪೆ, ತಾತನಹಳ್ಳಿ ಮಾರ್ಗ ವಾಗಿ ಹೊಲಗಳ ಮಧ್ಯೆ ಹಾದು ಪಟ್ಟಣದ ಸರಹದ್ದಿಗೆ ಬಂದಿತು. ಆನೆ ನೋಡಲು ಅಪಾರ ಜನ ಸೇರಿದ್ದರಿಂದ ದಿನವಿಡೀ ಆತಂಕದಲ್ಲೇ ಕಳೆಯಿತು.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ ಬಸಲಾಪುರ ಗ್ರಾಮದ ಗೋವಿಂದೇಗೌಡ ಎಂಬು ವವರ ಹೊಲಕ್ಕೆ ನುಗ್ಗಿದ ಆನೆ ಜೋಳದ ಬೆಳೆ ಮಧ್ಯೆ ಸಂಜೆ 5ರವರೆಗೂ ಬೀಡುಬಿಟ್ಟಿತು. ಸಂಜೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಬಲರಾಮ ಮತ್ತು ಇತರ ಮೂರು ಆನೆಗಳನ್ನು ಕರೆಸಲಾಯಿತು.
ಸಾಕಾನೆಗಳು ಬಂದಿದ್ದನ್ನು ಕಂಡ ಒಂಟಿಸಲಗ ಏಕಾಏಕಿ ಗದ್ದೆಯಿಂದ ಹೊರನುಗ್ಗಿತು. ನೇರವಾಗಿ ಬಲರಾ ಮನ ಎದುರಿಗೆ ಬಂದು ಕಾಳಗಕ್ಕೆ ಕರೆಯಿತು. ಬಲರಾಮನ ಹಿಂದೆ ಇದ್ದ ಇತರ ಆನೆಗಳೂ ಒಂಟಿಸಲಗದ ವಿರುದ್ಧ ನಿಂತವು. ಕೊನೆಗೆ ಮಾವುತನ ಅನತಿ ಯಂತೆ ‘ಬಲರಾಮ’ ವೇಗವಾಗಿ ಬಂದು ಒಂಟಿಸಲಗವನ್ನು ಗುದ್ದಿ ಕೆಡವಿ ಹಾಕಿದ. ನೆಲಕ್ಕುರುಳಿದ ಕಾಡಾನೆ ಕೆಲ ಸಮಯದ ನಂತರ ಆರ್ಭಟ ನಿಲ್ಲಿಸಿತು. ರಾತ್ರಿ 8ರ ಸುಮಾರಿಗೆ ಅದನ್ನು ಕಾಡಿಗೆ ಅಟ್ಟಲಾಯಿತು.
ಪ್ರಾಣಾಪಾಯದಿಂದ ಪಾರು: ಕಾರ್ಯಾಚರಣೆಗಾಗಿ ಕರೆತರಲಾದ ನಾಲ್ಕು ಆನೆಗಳ ಪೈಕಿ ಒಂದು ಆನೆ ಅರ್ಧದಲ್ಲೇ ತಂಟೆ ತೆಗೆಯಿತು. ಆನೆಗಳ ನೂಕಾಟ– ತಳ್ಳಾಟದಲ್ಲಿ ಮಾವುತ ನೊಬ್ಬ ಕೆಳಗೆ ಬಿದ್ದು ಗಾಯಗೊಂಡ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾ ಯದಿಂದ ಪಾರಾದ. ಇದರಿಂದ ಮೂರು ಆನೆಗಳನ್ನು ಮಾತ್ರ ಕಾರ್ಯಾ ಚರಣೆಗೆ ಬಳಸಲಾಯಿತು.
ಛಾಯಾಗ್ರಾಹಕನಿಗೆ ಮರುಹುಟ್ಟು: ಮತ್ತೊಂದೆಡೆ ಗದ್ದೆಗೆ ನುಗ್ಗಿದ ಆನೆಯ ಫೋಟೋ ತೆಗೆಯಲು ಹೋದ ಪತ್ರಿಕಾ ಛಾಯಾಗ್ರಾಹಕ ಮರುಹುಟ್ಟು ಪಡೆದ!
ಫೋಟೋ ತೆಗೆಯಲು ಹತ್ತಿರ ಹೋದ ಛಾಯಾಗ್ರಾಹಕನನ್ನು ಸಲಗ ಅಟ್ಟಿಸಿಕೊಂಡು ಬಂತು. ತಪ್ಪಿಸಿಕೊಳ್ಳುವ ಧಾವಂತದಲ್ಲಿ ಛಾಯಾಗ್ರಾಹಕ ಕಂದ ಕವೊಂದರಲ್ಲಿ ಬಿದ್ದ. ಅಲ್ಲಿಗೇ ನುಗ್ಗಿದ ಆನೆ ನಿಯಂತ್ರಣ ತಾಳದೇ ಉರುಳಿ ಬಿತ್ತು. ಆಗ ಆಶ್ಚರ್ಯಕರ ರೀತಿಯಲ್ಲಿ ಛಾಯಾಗ್ರಾಹಕ ತಪ್ಪಿಸಿಕೊಂಡು ಮರುಹುಟ್ಟು ಪಡೆದ!
ಎಸಿಎಫ್ ಪ್ರಸನ್ನಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಗಿರೀಶಕುಮಾರ್, ನಂಜಯ್ಯ, ಸಿಪಿಐ ಪ್ರಸನ್ನಕುಮಾರ್, ಎಸ್‌ಐ ಚಿಕ್ಕಸ್ವಾಮಿ, ತಹಶೀಲ್ದಾರ್ ಬಿ.ಎಫ್. ತಳವಾರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಆನೆ ನೋಡುವುದಕ್ಕೆ ಸಾವಿರಾರು ಜನ ಸೇರಿದ್ದರಿಂದ ಕಾರ್ಯಾಚರಣೆಗೆ ತೊಡಕಾಯಿತು. ಆನೆ ಓಡಿಸುವ ಬದಲು ಜನರನ್ನು ಚೆದುರಿಸುವುದೇ ಪೊಲೀಸರಿಗೆ ತಲೆನೋವಾಯಿತು.
