ಕರ್ನಾಟಕ

ರಾಜ್ಯದಲ್ಲಿ ಕೋಮು ಸೌಹಾರ್ದಕ್ಕಾಗಿ 12ರಿಂದ ನಡಿಗೆ: ಮಾನವ ಏಕತಾ ಮಿಷನ್ನಿನ ಸಂಸ್ಥಾಪಕ ಶ್ರೀ ‘ಎಂ’

Pinterest LinkedIn Tumblr

sing

ಮಾನವ ಏಕತಾ ಮಿಷನ್ನಿನ ಸಂಸ್ಥಾಪಕ ಶ್ರೀ ‘ಎಂ’ ಅವರು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ನಿವೃತ್ತ ಐಎಎಸ್‌ ಅಧಿಕಾರಿ ಜಿರಂಜೀವಿ ಸಿಂಗ್‌ ಹಾಜರಿದ್ದರು –ಪ್ರಜಾವಾಣಿ ಚಿತ್ರ

ಬೆಂಗಳೂರು: ದೇಶದಲ್ಲಿ ಕೋಮು ಸೌಹಾರ್ದ ಹಾಗೂ ಶಾಂತಿಯ ವಾತಾವರಣ ನಿರ್ಮಾಣ ಮಾಡುವ ಆಶಯ­ದೊಂದಿಗೆ ಮಾನವ ಏಕತಾ ಮಿಷನ್ನಿನ ಸಂಸ್ಥಾಪಕ ಶ್ರೀ ‘ಎಂ’ ಅವರು ಜ. 12ರಂದು ಕನ್ಯಾಕುಮಾರಿಯಿಂದ ಕಾಶ್ಮೀರ­ದವರೆಗೆ ಪಾದಯಾತ್ರೆ ಆರಂಭಿಸಲಿದ್ದಾರೆ. ಕೊಡಗು ಜಿಲ್ಲೆಯ ಮೂಲಕ ಈ ಯಾತ್ರೆ ಮಾರ್ಚ್‌ 7ರಂದು ರಾಜ್ಯವನ್ನು ಪ್ರವೇಶಿಸಲಿದೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಸ್ವತಃ ಶ್ರೀ ‘ಎಂ’ ಅವರು, ಪಾದಯಾತ್ರೆಗೆ ಸಂಬಂಧಿಸಿದ ವಿವರ ನೀಡಿದರು. ‘ಭರವಸೆ ನಡಿಗೆ’ (ವಾಕ್‌ ಆಫ್‌ ಹೋಪ್‌) ಹೆಸರಿನ ಈ ಯಾತ್ರೆ ಒಂದೂ­ವರೆ ವರ್ಷದಲ್ಲಿ ಒಟ್ಟು 6,500 ಕಿ.ಮೀ. ದೂರವನ್ನು ಕ್ರಮಿಸಲಿದ್ದು, ಸುಮಾರು ಒಂದು ಕೋಟಿ ಜನರನ್ನು ತಲುಪುವ ಆಶಯ ಹೊಂದಿದೆ’ ಎಂದು ಹೇಳಿದರು.

‘ದಯಯೇ ಧರ್ಮದ ಮೂಲ­ವಾಗಿದ್ದು, ಕೊಲ್ಲುವ ಧರ್ಮ ನಮಗೆ ಬೇಡ ಎನ್ನುವುದನ್ನು ದೇಶದ ಜನರಿಗೆಲ್ಲ ಸಾರಬೇಕಿದೆ. ಹಳ್ಳಿಗಳ ವಸ್ತುಸ್ಥಿತಿ ಅರಿತುಕೊಳ್ಳುವುದು ಈ ಯಾತ್ರೆಯ ಉದ್ದೇಶವಾಗಿದ್ದು, ಅಲ್ಲಿನ ಸಮಸ್ಯೆಗಳಿಗೆ ಸಾಧ್ಯವಾದರೆ ಪರಿಹಾರವನ್ನೂ ಒದಗಿಸಲಾ­ಗುತ್ತದೆ’ ಎಂದು ತಿಳಿಸಿದರು.

‘ಯಾರು ಬೇಕಾದರೂ ಯಾತ್ರೆ­ಯಲ್ಲಿ ಬಂದು ಸೇರಿಕೊಳ್ಳ­ಬಹುದು. ಸಾಕು ಎನಿಸಿದಾಗ ಮರಳಿ ಹೋಗ­ಬಹುದು. ಬೆಳಿಗ್ಗೆ 6ರಿಂದ 12ರವರೆಗೆ ನಡಿಗೆ, ಬಳಿಕ ಊಟ–ವಿಶ್ರಾಂತಿ. ಸಂಜೆ ಚರ್ಚೆ, ಸರ್ವಧರ್ಮ ಪ್ರಾರ್ಥನೆ. ಇದು ಪಾದಯಾತ್ರೆಯ ದಿನಚರಿಯಾಗಿದೆ’ ಎಂದು ಮಾಹಿತಿ ನೀಡಿದರು.

‘ಯಾತ್ರೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌–ಏಮ್ಸ್‌), ಸುಲಭ್‌ ಶೌಚಾಲಯ ಸಂಸ್ಥೆ ಸೇರಿದಂತೆ ಹಲವು ಕಡೆಗಳಿಂದ ಬೆಂಬಲ ಸಿಕ್ಕಿದ್ದು, ಹಳ್ಳಿಗಳಲ್ಲಿ ಆರೋಗ್ಯ ಹಾಗೂ ಸ್ವಚ್ಛತಾ ಜಾಗೃತಿ ಮೂಡಿಸಲು ಆ ಸಂಸ್ಥೆಗಳು ಸಹಕರಿಸಲಿವೆ’ ಎಂದು ಹೇಳಿದರು. ‘ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಹಳ್ಳಿಗರನ್ನು ತಲುಪುವುದು ನಮ್ಮ ಗುರಿಯಾಗಿದೆ’ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾ­ಚಲಯ್ಯ, ‘ಧರ್ಮದ ತಪ್ಪು ವ್ಯಾಖ್ಯಾನ­ದಿಂದ ಗೊಂದಲ ಸೃಷ್ಟಿಯಾಗಿದ್ದು, ನಂದನವನದಂತೆ ಇದ್ದ ದೇಶವನ್ನು ನಾವೇ ಮರುಭೂಮಿ­ಯಂತೆ ಮಾಡಿ­ದ್ದೇವೆ. ಶ್ರೀ ‘ಎಂ’ ಅವರು ಈ ಮರು­ಭೂಮಿ­­ಯಲ್ಲಿ ಓಯಸಿಸ್‌ನಂತೆ ಸಿಕ್ಕಿ­ದ್ದಾರೆ’ ಎಂದು ತಿಳಿಸಿದರು. ‘ದೊಡ್ಡ ಸಾಹಸಕ್ಕೆ ಕೈಹಾಕಿರುವ ಈ ನೈಜ ಸಂತನ ಗುರಿ ಈಡೇರಬೇಕು’ ಎಂದು ಹಾರೈಸಿದರು.

ಏಮ್ಸ್‌ನ ಸಮುದಾಯ ಔಷಧಿ ಕೇಂದ್ರದ ಮುಖ್ಯಸ್ಥ ಡಾ. ಚಂದ್ರಶೇಖರ್‌ ಪಾಂಡವ್‌, ‘ನಡಿಗೆ ಮಹತ್ವ, ಮದ್ಯಪಾನ, ತಂಬಾಕು ಸೇವನೆ ಮತ್ತು ಪ್ಲಾಸ್ಟಿಕ್‌ ಬಳಕೆ ದುಷ್ಪರಿಣಾಮ, ಪರಿಶುದ್ಧ ನೀರಿನ ಬಳಕೆ ಹಾಗೂ ಸಸ್ಯಾಹಾರದ ಮಹತ್ವವನ್ನು ಯಾತ್ರೆ­ಯಲ್ಲಿ ಜನತೆಗೆ ತಿಳಿಸಲಾಗುವುದು’ ಎಂದು ವಿವರಿಸಿದರು.

ಸೂಜಿ ಹಿಡಿದ ಸಂತ

ದೇಶದ 127 ಕೋಟಿ ಹೃದಯ­ಗಳನ್ನು ತಲುಪಲು ಹೊರಟಿರುವ ಶ್ರೀ ‘ಎಂ’ ಕೋಮು ಸೌಹಾರ್ದದ ಕುರಿತು ಜನತೆಗೆ ಅರಿವು ಮೂಡಿಸುವ ಗುರಿ ಹೊಂದಿದ್ದಾರೆ. ಇದು ಬಹಿರಂಗದ ನಡಿಗೆ­ ಜತೆಗೆ ಅಂತರಂಗದ ಪಯಣವೂ ಆಗಿರಲಿದೆ. ಬೇರೆ ಮಾಡುವ ಕತ್ತರಿ ಮತ್ತು ಒಂದು­ಗೂಡಿಸುವ ಸೂಜಿ­ಗಳಲ್ಲಿ ಅವರು ಸಮಾಜವನ್ನು ಒಂದು­ಗೂಡಿ­ಸಲು ಸೂಜಿಯನ್ನೇ ಹಿಡಿದಿದ್ದಾರೆ.
–ಜಿರಂಜೀವಿ ಸಿಂಗ್‌

Write A Comment