ಕರ್ನಾಟಕ

ಹುಲಿ ಹತ್ಯೆ: ಅರಣ್ಯ ಇಲಾಖೆಯಿಂದ ಲೋಪ; ಎನ್‌ಟಿಸಿಎ ಪ್ರಾಥಮಿಕ ತನಿಖೆಯಿಂದ ಬಹಿರಂಗ

Pinterest LinkedIn Tumblr

tiger

ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮುಡುಗೈ ಗ್ರಾಮದಲ್ಲಿ ಡಿ. 17ರಂದು ಮಹಿಳೆಯನ್ನು ಬಲಿ ಪಡೆದ ನರಭಕ್ಷಕ ಹುಲಿ ಸೆರೆಗೆ ಅರಣ್ಯ ಇಲಾಖೆಯು ನಡೆಸಿದ ‘ಆಪರೇಶನ್‌ ಟೈಗರ್‌’ ಕಾರ್ಯಾ­ಚರಣೆಯಲ್ಲಿ ಹಲವಾರು ಲೋಪಗಳು ಘಟಿಸಿವೆ ಎನ್ನುವ ಅಂಶ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

‘ಅರಣ್ಯ ಇಲಾಖೆಯು ಕಾರ್ಯಾಚರಣೆಯ ವಿಸ್ತೃತ ವರದಿಯನ್ನು ನಮಗೆ ಕಳುಹಿಸಬೇಕಿದೆ. ನಾವು ಈಗಾ­ಗಲೇ ಹುಲಿ ಕಾರ್ಯಾಚರಣೆಗೆ ಸಂಬಂಧಪಟ್ಟ ಪ್ರಾಥ­ಮಿಕ ವರದಿಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿ­ವಾ­ಲಯಕ್ಕೆ ಸಲ್ಲಿಸಿದ್ದೇವೆ. ಈ ವರದಿಯಲ್ಲಿ ಕಾರ್ಯಾ­ಚರಣೆ­ಯಲ್ಲಿ ಭಾಗವಹಿಸಿದ ಎನ್‌ಜಿಒ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ನಡೆದ ಹುಲಿಗಳನ್ನು ನಿಭಾಯಿ­ಸ­ಬೇಕಾದ ಸ್ವಾಭಾವಿಕ ವಿಧಿವಿಧಾನಗಳ ಉಲ್ಲಂಘನೆ ಸೇರಿದಂತೆ ಅನೇಕ ಪ್ರಮಾದಗಳ ಉಲ್ಲೇಖವಿದೆ. ಇದು ಸಚಿವಾಲಯದ ಹಿರಿಯ ಅಧಿಕಾರಿಗಳ ಹುಬ್ಬೇರಿ­ಸು­ವಂತೆ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.

‘ಚಿಕ್ಕಮಗಳೂರಿನಲ್ಲಿದ್ದ ಹುಲಿಯನ್ನು ಸೆರೆಹಿಡಿದು ಅದಕ್ಕೆ ತಕ್ಕ ಬೇಟೆ ಸಾಂದ್ರತೆ ಇರುವ ಅರಣ್ಯಕ್ಕೆ ಅದನ್ನು ಸ್ಥಳಾಂತರಿಸುವಂತೆ ನಾವು ಕರ್ನಾಟಕ ಮುಖ್ಯ ವನ್ಯಜೀವಿ ಸಂರಕ್ಷರಿಗೆ ನಿರ್ದೇಶನ ನೀಡಿದ್ದೆವು. ಆ ಹುಲಿಯನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ಅರಣ್ಯಕ್ಕೆ ಸ್ಥಳಾಂತರಿಸಿ ಎಂದು ಸಲಹೆ ನೀಡಿರಲಿಲ್ಲ’ ಎಂದು ಎನ್‌ಟಿಸಿಎ ಅಧಿಕಾರಿಯೊಬ್ಬರು ತಿಳಿಸಿದರು.

‘‘ಆಪರೇಶನ್‌ ಟೈಗರ್‌’ನ ಇಡೀ ಘಟನಾವಳಿಯಲ್ಲಿ ರಾಜಕೀಯ ಮತ್ತು ಎನ್‌ಜಿಒ ಪ್ರಭಾವಗಳನ್ನು ನಾವು ಗಮನಿಸಿದ್ದೇವೆ. ಚಿಕ್ಕಮಗಳೂರು ಮತ್ತು ಖಾನಾ­ಪು­ರದಲ್ಲಿ ನಡೆದ ಹುಲಿ ಸೆರೆಯ ಕಾರ್ಯಾಚರಣೆಗಳಲ್ಲಿ ಕೇಂದ್ರ ಸಚಿವಾಲಯದ ನಿಯಮಾವಳಿಗಳನ್ನು ಉಲ್ಲಂ­ಘಿಸಿ ಸ್ಥಳೀಯ ಜನರು ಭಾಗವಹಿಸಿರುವ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

‘ಯಾವುದೇ ಪ್ರಾಣಿಯ ಕೊರಳಿಗೆ ರೇಡಿಯೊ ಕಾಲರ್‌ ಅಳವಡಿಸುವುದಕ್ಕೂ ಪೂರ್ವದಲ್ಲಿ ಅದಕ್ಕೆ ಕೇಂದ್ರ ದೂರಸಂಪರ್ಕ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ. ರೇಡಿಯೊ ತರಂಗಾಂತರ­ಗಳು ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ ಮತ್ತು ಎನ್‌ಟಿಸಿಎ ಹಂಚಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಇದನ್ನು ಪಾಲಿಸಲಾಗಿಲ್ಲ’ ಎಂದು ಅವರು ತಿಳಿಸಿದರು.

ಮಾಹಿತಿ ಕೋರಿದ ಎನ್‌ಟಿಸಿಎ

‘ಹುಲಿಯನ್ನು ಸ್ಥಳೀಯ ಗ್ರಾಮಸ್ಥನೊಬ್ಬ ಹತ್ಯೆ ಮಾಡಿದ್ದಾನೆ ಎನ್ನುವ ಅಂಶ ವರದಿಯಲ್ಲಿ ಕಾಣಿಸು­ತ್ತದೆ. ಆ ವ್ಯಕ್ತಿಯು ವನ ಪಾಲಕನೆಂದು ಅರಣ್ಯ ಇಲಾಖೆ ಹೇಳಿದೆ. ಅಗತ್ಯವಾದ ಅನುಮತಿ ಪಡೆ­ಯದೇ ವನ್ಯಜೀವಿಗೆ ಗುಂಡಿಕ್ಕಬಾರದು ಎಂದು ನಿಯಮವಿದೆ’ ಎನ್ನುತ್ತಾರೆ ಎನ್‌ಟಿಸಿಎ ಅಧಿಕಾರಿ.

ಈ ಕುರಿತಂತೆ ಹುಲಿಯ ಹತ್ಯೆಯನ್ನು ಯಾರು ಮಾಡಿದರು ಮತ್ತು ಹತ್ಯೆಗೆ ಬಳಸಿದ ಆಯುಧ ಕುರಿತು ವಿವರವಾದ ವರದಿ ನೀಡುವಂತೆ ಎನ್‌ಟಿಸಿಎ ಅರಣ್ಯ ಇಲಾಖೆಯಿಂದ ಮಾಹಿತಿ ಬಯಸಿದೆ

Write A Comment