ಕನ್ನಡ ವಾರ್ತೆಗಳು

ಫೆಬ್ರವರಿ ಅಂತ್ಯದೊಳಗೆ ಜನತಾ ಪರಿವಾರದಿಂದ ಒಂದೇ ವೇದಿಕೆ ನಿರ್ಮಾಣ ; ಮಂಗಳೂರಿನಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ

Pinterest LinkedIn Tumblr

devegauda_prees_meet_1

ಮಂಗಳೂರು, ಡಿ.27: ದೇಶದ ಜನತೆಯ ಹಿತದೃಷ್ಟಿಯಿಂದ ಜನತಾ ಪರಿವಾರ ಮುಂದಿನ ಫೆಬ್ರವರಿ ಅಂತ್ಯದೊಳಗೆ ಒಂದು ಹೆಸರು ಹಾಗೂ ಒಂದು ಚಿಹ್ನೆಯೊಂದಿಗೆ ಸಂಘಟಿತವಾಗುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಸಕ್ತ ಯಾವುದೇ ಅಧಿಕೃತ ವಿರೋಧ ಪಕ್ಷ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಜನತಾ ಪರಿವಾರವೂ ಪ್ರಬಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಾಗದ ಪ್ರತಿಕೂಲ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸಬೇಕಾದ ಅಗತ್ಯವಿದೆ. ಈ ಕಾರಣದಿಂದ ಜನತಾ ಪರಿವಾರದ ಮುಖಂಡರ ಜೊತೆ ಸಭೆ ನಡೆಸಿ ಜನತಾ
ಪರಿವಾರವನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು.

devegauda_prees_meet_3 devegauda_prees_meet_4

ನವೀನ್ ಪಟ್ನಾಯಕ್ ಜನತಾ ಪರಿವಾರದ ಜೊತೆ ಸೇರ್ಪಡೆಯಾದರೆ ಜನತಾ ಪರಿವಾರದ ಶಕ್ತಿ ಇನ್ನಷ್ಟು ಹೆಚ್ಚಲಿದೆ ಎಡ ಪಕ್ಷಗಳ ಜೊತೆಯೂ ಈ ಬಗ್ಗೆ ಚರ್ಚಿಸಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಂಡರೆ ಸಂಸತ್ತಿನಲ್ಲೂ ಪಕ್ಷದ ಸದಸ್ಯರ ಸಂಖ್ಯಾ ಬಲದೊಂದಿಗೆ ರಚನಾತ್ಮಕ ಹೋರಾಟ ನಡೆಸಲು ಸಾಧ್ಯ ಎಂದು ದೇವೇಗೌಡ ತಿಳಿಸಿದರು.

ದೇಶದ ಆಡಳಿತದಲ್ಲಿ ಬದಲಾವಣೆಯಾಗಿಲ್ಲ:-ಪ್ರಸಕ್ತ ದೇಶದ ಆಡಳಿತದಲ್ಲಿ ಬದಲಾವಣೆಯಾಗಿಲ್ಲ. ಹಿಂದಿನ ಸರಕಾರದ ರೀತಿಯಲ್ಲಿಯೇ ಮೋದಿ ಸರಕಾರದ ಆಡಳಿತ ನಡೆಯುತ್ತಿದೆ. ಯಾವುದೇ ಚರ್ಚೆಗೆ ಅವಕಾಶ ನೀಡದೆ ಸಂಸತ್ತಿನಲ್ಲಿ ಬಿಲ್ ಪಾಸ್ ಮಾಡಲಾಗುತ್ತಿದೆ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಆದರೆ ಆ ಸಂದರ್ಭದಲ್ಲಿ ವಿರೋಧ ಪಕ್ಷಗಳಾದರೂ ಇತ್ತು.ಜನತಾ ಪರಿವಾರದ ಪರಿಸ್ಥಿತಿಯೂ ಸ್ವಲ್ಪ ಚೆನ್ನಾಗಿತ್ತು.ಪ್ರಸಕ್ತ ದೇಶದಲ್ಲಿ ಆ ಪರಿಸ್ಥಿತಿಯಿಲ್ಲ. ಪ್ರಸಕ್ತ ನಾವು ಸಂಸತ್ತಿನಲ್ಲಿ ಇದ್ದರೂ ಸರಕಾರ ನೀಡಿದ ಭರವಸೆಯನ್ನು ಈಡೇರಿಸದಿದ್ದರೂ ಸಮರ್ಥವಾಗಿ ವಿರೋಧಿಸಲು ಜನತಾ ಪರಿವಾರ ಒಟ್ಟಾಗಿ ಪ್ರಯತ್ನಿಸಿದೆ. ಲೋಕಸಭೆಯಲ್ಲಿ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ನಮಗೆ ಅವಕಾಶಗಳು ಕಡಿಮೆ ಇದೆ ಎಂದು ದೇವೇಗೌಡ ಹೇಳಿದರು.

ದೇಶದಲ್ಲಿ ಮತಾಂತರ ನಿಷೇಧ ಕಾಯಿದೆ,ಮರು ಮತಾಂತರದ ಮೊದಲಾದ ಘಟನೆಗಳ ಮೂಲಕ ಬಿಜೆಪಿಯೇ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.ಇದರ ಪರಣಾಮವಾಗಿ 5ದಿನ ರಾಜ್ಯಸಭೆ ಎರಡು ದಿನ ಲೋಕ ಸಭೆಯ ಕಲಾಪಗಳು ನಡೆದಿಲ್ಲ.ಪ್ರಧಾನ ಮಂತ್ರಿಯೂ ಈ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೇವೇಗೌಡ ಟೀಕಿಸಿದರು.

devegauda_prees_meet_5

ಮತಾಂತರದ ಬಗ್ಗೆ ಪ್ರಧಾನಿ ಮೌನ ಮುರಿಯದಿದ್ದರೆ ದೇಶದ ಅಭಿವೃದ್ಧಿಗೆ ತೊಡಕು:

ಮತಾಂತರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ಸರಿಯಲ್ಲ. ಇದರಿಂದ ಅವರಿಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರಧಾನಿ ಈ ಬಗ್ಗೆ ಹೇಳಿಕೆ ನೀಡಬೇಕು ಎಂದು ಮಾಜಿ ದೇವೇಗೌಡ ಅವರು ಹೇಳಿದರು.

ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬ್ರಿಟಿಷರ ಕಾಲದಲ್ಲೊ, ಇನ್ಯಾವತ್ತೋ ಆಗಿರುವುದಕ್ಕೆ ಈಗ ಮರುಮತಾಂತರ ಸರಿಯಲ್ಲ ಎಂದರು. ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಒಳಗೆ ನಡೆಯುತ್ತಿರುವ ಈ ಬೆಳವಣಿಗೆಯ ಬಗ್ಗೆ ವೌನವಾಗಿದ್ದರೆ. ಪ್ರಧಾನಿಯವರು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಈ ಹಂತದಲ್ಲಿ ನಾನು ಹೇಳಲಾರೆ. ಆದರೆ ಅವರ ವೌನದಿಂದ ಅವರೇ ಹೇಳುತ್ತಿರುವ ಅಭಿವೃದ್ಧಿಯ ಗುರಿ ಸಮಸ್ಯೆಗೆ ಸಿಲುಕುವುದು ಎಂದರು.

ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಲಿ:

ದೇಶದ ಅಭಿವೃದ್ಧಿಯ ಬಗ್ಗೆ ಮತನಾಡು ತ್ತಿರುವ ಮೋದಿ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಲಿ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಿ. ಈ ಹಿಂದೆ ತಾನು ಪ್ರಧಾನಿಯಾಗಿದ್ದಾಗಲೂ ಆ ಮಸೂದೆಯನ್ನು ಸಂಸತ್ತಿನ ಮುಂದೆ ಮಂಡಿಸಿ ದ್ದೇನೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ಕಾಲದಲ್ಲಿಯೂ ಈ ಮಸೂದೆಯ ಜಾರಿಗೆ ಪ್ರಯತ್ನ ನಡೆದಿದೆ. ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಈ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿತ್ತು. ಕರ್ನಾಟಕದಲ್ಲಿಯೂ ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಸೋತಿದೆ ಎಂದು ದೇವೇಗೌಡ ಟೀಕಿಸಿದರು.

ಭಾರತ ರತ್ನಕ್ಕೆ ಅಯ್ಕೆ : ವಾಜಪೇಯಿಗೆ ಅಭಿನಂದನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇಂದ್ರ ಸರಕಾರ ‘ಭಾರತ ರತ್ನ’ ನೀಡಿ ಗೌರವಿಸುವುದನ್ನು ಸ್ವಾಗತಿಸಿದ ದೇವೇಗೌಡ, ಪ್ರಧಾನಿಯಾಗಿ ಆರು ವರ್ಷ ಅವರು ನೀಡಿದ ಉತ್ತಮ ಆಡಳಿತ, ನೆರೆರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸಲು ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತೇನೆ. ವಿರೋಧ ಪಕ್ಷದಲ್ಲಿದ್ದು ಅವರು ನಡೆಸಿದ ಹೋರಾಟ ಸಹ ಗಮನಾರ್ಹ. ಅವರ ಆರೋಗ್ಯ ಸುಧಾರಿಸಲಿ ಎಂದು ನಾನು ಹಾರೈಸುತ್ತೇನೆ ಎಂದು ದೇವೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುಹಮ್ಮದ್ ಕುಂಞಿ ಹಾಗೂ ಪಕ್ಷದ ಇತರ ಪಧಾಧಿಕಾರಿಗಳು  ಉಸ್ಥಿತರಿದ್ದರು.

Write A Comment