ಹೊಸದಿಲ್ಲಿ, ಡಿ.24: ಇಲ್ಲಿನ ಕರ್ನೈಲ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಹಾಲಿ ಚಾಂಪಿಯನ್ ಕರ್ನಾಟಕ ತಂಡ 136 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಇದರೊಂದಿಗೆ ಟೂರ್ನಿಯಲ್ಲಿ ಸತತ ಮೂರನೆ ಗೆಲುವು ದಾಖಲಿಸಿದೆ.
ಪಂದ್ಯದ ನಾಲ್ಕನೆ ಹಾಗೂ ಅಂತಿಮ ದಿನವಾಗಿರುವ ಬುಧವಾರ ಕರ್ನಾಟಕ ವಿಧಿಸಿದ 351 ರನ್‌ಗಳ ಗೆಲುವಿನ ಸವಾಲನ್ನು ಬೆನ್ನಟ್ಟಿದ ರೈಲ್ವೇಸ್ ತಂಡ ಎರಡನೆ ಇನಿಂಗ್ಸ್‌ನಲ್ಲಿ 114 ರನ್‌ಗಳಿಗೆ ಆಲೌಟಾಗಿದೆ. ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್(5-31), ನಾಯಕ ಆರ್ ವಿನಯ ಕುಮಾರ್(2-37), ಎಸ್.ಅರವಿಂದ್ (1-8), ಸ್ಟುವರ್ಟ್ ಬಿನ್ನ್ನಿ(1-32) ಮತ್ತು ಎಸ್.ಗೋಪಾಲ್(1-1) ದಾಳಿಗೆ ತತ್ತರಿಸಿದ ರೈಲ್ವೇಸ್ 183 ನಿಮಿಷಗಳಲ್ಲಿ ಎರಡನೆ ಇನಿಂಗ್ಸ್ಸನ್ನು ಮುಗಿಸಿತು.
ರೈಲ್ವೇಸ್ ಪರ ಅನುಸ್ತಪ್ ಮಜುಂದಾರ್ (ಔಟಾಗದೆ 26), ಆರಂಭಿಕ ದಾಂಡಿಗ ರೋಹನ್ ಭೋಸ್ಲೆೆ (23) ಮತ್ತು ಕೃಷ್ಣಕಾಂತ್ ಉಪಾಧ್ಯಾಯ(21) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು. ತಂಡದ 8 ಮಂದಿ ಆಟಗಾರರಿಗೆ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ.
ಕರ್ನಾಟಕ 174/5: ಮಂಗಳವಾರ ಆಟ ನಿಂತಾಗ ಎರಡನೆ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿದ್ದ ಕರ್ನಾಟಕ ತಂಡ ಈ ಮೊತ್ತಕ್ಕೆ 40 ರನ್ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
70 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ಆರಂಭಿಕ ದಾಂಡಿ ಗ ರಾಬಿನ್ ಉತ್ತಪ್ಪ ಮತ್ತು 61 ರನ್ ಗಳಿಸಿದ್ದ ಕರುಣ್ ನಾಯರ್ ಬ್ಯಾಟಿಂಗ್ ಮುಂದುವರಿಸಿ ತಂಡದ ಸ್ಕೋರನ್ನು 134ಕ್ಕೆ ತಲುಪಿಸಿದರು.
ನಾಯರ್ (63) ಮಂಗಳವಾರದ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ ಅನುರೀತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ರಾಬಿನ್ ಉತ್ತಪ್ಪ ಶತಕದಂಚಿನಲ್ಲಿ ಎಡವಿದರು.ಅವರು 97 ರನ್ (193ನಿ, 125ಎ, 13ಬೌ, 1ಸಿ) ಗಳಿಸಿ ಉಪಾಧ್ಯಾಯ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳುವ ಮೂಲಕ 3 ರನ್‌ನಿಂದ ಶತಕ ವಂಚಿತಗೊಂಡರು. ಸ್ಟುವರ್ಟ್ ಬಿನ್ನಿ (0) ಖಾತೆ ತೆರೆಯಲಿಲ್ಲ. 42ನೆ ಓವರ್‌ನ ಅಂತಿಮ ಎಸೆತದಲ್ಲಿ ಮನೀಷ್ ಪಾಂಡೆ (12) ಅವರನ್ನು ಅನುರೀತ್ ಸಿಂಗ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ಬಳಿಕ ಕರ್ನಾಟಕ ತಂಡದ ನಾಯಕ ಆರ್.ವಿನಯ ಕುಮಾರ್ ಗೆಲುವಿನ ಲೆಕ್ಕಾಚಾರದೊಂದಿಗೆ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು. ಅವರ ಯೋಜನೆ ಫಲ ನೀಡಿತು. ರೈಲ್ವೇಸ್ ತಂಡ ಬೇಗನೆ ಇನಿಂಗ್ಸ್ ಮುಗಿಸಿ ಕರ್ನಾಟಕ ತಂಡಕ್ಕೆ ತಲೆ ಬಾಗಿತು. ಅಭಿಮನ್ಯು ಮಿಥುನ್ ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್ ಪಡೆದಿದ್ದಾರೆ. ಎಸ್.ಅರವಿಂದ್ ಎರಡನೆ ಇನಿಂಗ್ಸ್‌ನಲ್ಲಿ 1 ವಿಕೆಟ್ ಉಡಾಯಿಸಿದ್ದರೂ, ಮೊದಲ ಇನಿಂಗ್ಸ್‌ನಲ್ಲಿ 43ಕ್ಕೆ 4 ವಿಕೆಟ್ ಎಗರಿಸಿದ್ದರು.
ಕರ್ನಾಟಕ ಈ ಗೆಲುವಿನೊಂದಿಗೆ 3 ಪಂದ್ಯಗಳಲ್ಲಿ 18 ಅಂಕ ದಾಖಲಿಸಿ, ಅಂಕಪಟ್ಟಿಯಲ್ಲಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಮೊದಲು ಕರ್ನಾಟಕ ತಂಡ ತಮಿಳುನಾಡು ಮತ್ತು ಬಂಗಾಳ ವಿರುದ್ಧ ಜಯ ಗಳಿಸಿತ್ತು. ರೈಲ್ವೇಸ್ ಮೊದಲ ಸೋಲು ಅನುಭವಿಸಿದೆ. ಆಡಿರುವ ಮೂರು ಪಂದ್ಯಗಳ ಪೈಕಿ ಮೊದಲೆರಡು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿತ್ತು. ಅದು 6 ಅಂಕಗಳನ್ನು ಗಳಿಸಿದೆ.
ಸಂಕ್ಷಿಪ್ತ ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 247, ರೈಲ್ವೇಸ್ 171, ಕರ್ನಾಟಕ ಎರಡನೆ ಇನಿಂಗ್ಸ್ 42 ಓವರ್‌ಗಳಲ್ಲಿ 174/5
(ಉತ್ತಪ್ಪ 97, ನಾಯರ್ 63; ಅನುರೀತ್ ಸಿಂಗ್ 3-67, ಉಪಾಧ್ಯಾಯ 2-61).
ರೈಲ್ವೇಸ್ ಎರಡನೆ ಇನಿಂಗ್ಸ್ 43 ಓವರ್‌ಗಳಲ್ಲಿ ಆಲೌಟ್ 114 ( ಮಜುಂದಾರ್ 26,ಭೋಸಲೆ 23, ಉಪಾಧ್ಯಾಯ 21; ಅಭಿಮನ್ಯು ಮಿಥುನ್ 5-31, ವಿನಯ್ ಕುಮಾರ್ 2-37).
