ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಆವರಣದಲ್ಲಿ ಸೋಮವಾರ ಪ್ರತ್ಯಕ್ಷವಾಗಿದ್ದ ಹುಲಿಯು ಮಂಗಳವಾರ ಅಲ್ಲಿಂದ ಅರಣ್ಯದತ್ತ ಹೋಗಿರುವ ಸಾಧ್ಯತೆಗಳಿದ್ದು ಸುತ್ತಮುತ್ತಲಿನ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ.
ಸೋಮವಾರ ಸಂಜೆ ವಿಟಿಯು ಆವರಣದಲ್ಲಿ ಪೊದೆಯಿಂದ ಹೊರಗೆ ಬಂದಿದ್ದ ಹುಲಿ, ರಾತ್ರಿ 10.30ಕ್ಕೆ ಕಾಂಪೌಂಡ್‌ನಿಂದ ಜಿಗಿದು ಅರಣ್ಯದತ್ತ ತೆರಳಿದೆ ಎನ್ನಲಾಗಿದೆ. ಆದರೆ ಕತ್ತಲು ಇದ್ದ ಕಾರಣ ಹುಲಿ ಯಾವ ಕಡೆಗೆ ತೆರಳಿತು ಎಂಬುದು ಗೊತ್ತಾಗಲಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವನ್ಯಜೀವಿ ತಜ್ಞ ಡಾ. ಎಚ್.ಎಸ್. ಪ್ರಯಾಗ್ ಹಾಗೂ ಡಾ. ಸನತ್ ವಿಟಿಯು ಕಾಂಪೌಂಡ್‌ನ ತಂತಿ ಬೇಲಿಯಲ್ಲಿ ಸಿಕ್ಕಿಕೊಂಡಿದ್ದ ಹುಲಿಯ ಕೂದಲುಗಳ ಮಾದರಿ ಸಂಗ್ರಹಿಸಿದರು. ವನ್ಯಜೀವಿ ತಜ್ಞ ಸಚ್ಚಿನ್ ಪಾಟೀಲ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಹುಲಿಯ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದರು.
ಹುಲಿ ಹೆಜ್ಜೆ ಗುರುತುಗಳನ್ನು ಬೆನ್ನು ಹತ್ತಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಂತಿಬಸ್ತವಾಡ ಗ್ರಾಮದ ಅರಣ್ಯ ಪ್ರದೇಶದವರೆಗೆ ತಪಾಸಣೆ ನಡೆಸಿದರು. ಸಂತಿಬಸ್ತವಾಡದ ಮೂಲಕ ಹುಲಿ ಕಾಡಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದರು.
ಆದರೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ವಿಟಿಯು ಆವರಣ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ರಾತ್ರಿ ಹೊತ್ತು ಹೊರಗೆ ಬರಬಾರದು ಎಂದು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ.
