ಕರ್ನಾಟಕ

ಕೈಗಾರಿಕೆಗೆ ತುಂಗಭದ್ರಾ ನೀರು ಅಕ್ರಮ ಪೂರೈಕೆ: ನದಿ ಪಾತ್ರದ 60 ಹಳ್ಳಿಗಳಿಗೆ ಕುಡಿಯುವ ನೀರಿನ ಅಭಾವ

Pinterest LinkedIn Tumblr

tunga

ದಾವಣಗೆರೆ: ಗ್ರಾಸಿಂ ಸಂಸ್ಥೆಯಡಿ ಬರುವ ಹರಿಹರದ ‘ಹರಿಹರ ಪಾಲಿಫೈಬರ್ಸ್ ಕೈಗಾರಿಕೆ’ಗೆ ಅದರ ಆಡಳಿತ ಮಂಡಳಿ ತುಂಗಭದ್ರಾ ನದಿ ನೀರನ್ನು ಅಕ್ರಮವಾಗಿ ಪೂರೈಕೆ ಮಾಡಿಕೊಳ್ಳುತ್ತಿದೆ. ಇದನ್ನು ಖಂಡಿಸಿ ಜಿಲ್ಲೆಯ 23 ರೈತರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕೈಗಾರಿಕಾ ಉದ್ದೇಶದ ಬಳಕೆಗಾಗಿ ತುಂಗಭದ್ರಾ ನದಿ ನೀರನ್ನು ಬಳಸಿಕೊಳ್ಳಲು ಗ್ರಾಸಿಂ ಸಂಸ್ಥೆ  2008ರ ಏಪ್ರಿಲ್ 24ರಂದು ಸರ್ಕಾರ ನೀಡಿದ ಪರವಾನಗಿಯನ್ನು ನವೀಕರಿಸಿ­ಕೊಂಡಿತ್ತು. ಇದರಂತೆ ಸರ್ಕಾರ ಗ್ರಾಸಿಂ ಸಂಸ್ಥೆಗೆ 2008ರ ಜುಲೈ 1 ರಿಂದ 2014ರ ಜೂನ್ 30ರವರೆಗೆ ಕಂಪೆನಿ ತುಂಗಭದ್ರಾ ನದಿಯಿಂದ ನೀರೆತ್ತಿ­ಕೊಳ್ಳಲು ಕರಾರಿನಲ್ಲಿ ಸೂಚಿಸಿತ್ತು. ಆದರೆ, ಕರಾರು ಮುಗಿದು ಈಗ ಆರು ತಿಂಗಳು ಕಳೆದರೂ, ಪಾಲಿಫೈಬರ್ಸ್ ಕೈಗಾರಿಕೆಯ ಆಡಳಿತ ಮಂಡಳಿ ಪರವಾನಗಿ ನವೀಕರಣ ಮಾಡಿಕೊಳ್ಳದೇ ನೀರನ್ನು ಪಡೆಯುತ್ತಿದೆ.

ಆರು ತಿಂಗಳಿಂದ ಈ ಕಾರ್ಖಾನೆ, ಪ್ರತಿದಿನ ಅಕ್ರಮವಾಗಿ 18ರಿಂದ 20 ಕ್ಯೂಸೆಕ್ ನೀರನ್ನು ಬಳಸಿಕೊಳ್ಳುತ್ತಿದೆ. ಕೈಗಾರಿಕೆಯ ಈ ಅಕ್ರಮದ ವಿರುದ್ಧ ರೈತರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರಾದ ಕರಬ­ಸಪ್ಪ ವಡ್ನಳ್ಳಿ, ಸಣ್ಣಗೌಡ ಕರೇಗೌಡ, ಶಿವನಗೌಡ, ಹನುಮಂತರಾಜು ದೂರುತ್ತಾರೆ.

ಆದರೆ, ಪರವಾನಗಿ ಪಡೆಯದೇ ನದಿಯಿಂದ ನೀರೆತ್ತುತ್ತಿರುವ ಗ್ರಾಸಿಂ ಆಡಳಿತ ಮಂಡಳಿಗೆ ಕರ್ನಾಟಕ ನೀರಾವರಿ ನಿಗಮ ನಂ.5 ಭದ್ರಾನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿ­ಯರ್ ಕಳೆದ ಆಗಸ್ಟ್‌ನಲ್ಲಿ ನೋಟಿಸ್‌ ನೀಡಿದ್ದಾರೆ. ಕಂಪೆನಿ ಅಕ್ರಮವಾಗಿ ನೀರು ಪೂರೈಕೆ ಮಾಡುವ ಮೂಲಕ 1965ರ ಕರ್ನಾಟಕ ಅಧಿನಿಯಮ ಉಲ್ಲಂಘಿಸಿದೆ. ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ಕೇಳಿದೆ. ಗ್ರಾಸಿಂ ಸಂಸ್ಥೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಅಕ್ರಮವಾಗಿ ನದಿ ನೀರು ಪೂರೈಕೆ ಮುಂದುವರಿಸಿದೆ.

ಪಾಲಿಫೈಬರ್ಸ್ ಕೈಗಾರಿಕೆ ನದಿ ನೀರನ್ನು ಅಕ್ರಮವಾಗಿ ಪೂರೈಕೆ ಮಾಡಿಕೊಳ್ಳುತ್ತಿರುವುದರಿಂದ ನದಿ­ಪಾತ್ರದ ಹಲುವಾಗಲು, ನದಿ ಹರಳಹಳ್ಳಿ, ದೀಟೂರು, ಸಾರಥಿ, ಚಿಕ್ಕ ಹರಳಹಳ್ಳಿ, ಹಿರೇಹರಳಹಳ್ಳಿ ಸೇರಿದಂತೆ 60ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಕೈಗಾರಿಕೆಯ ಈ ಕ್ರಮ ಖಂಡಿಸಿ ಸಣ್ಣಗೌಡ ಬಸನಗೌಡ ಕರೇಗೌಡರ್ ಸೇರಿದಂತೆ 23 ರೈತ ಮುಖಂಡರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ಆಗ ದಾವಣಗೆರೆ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಗ್ರಾಸಿಂ ಸಂಸ್ಥೆಯ ಪರವಾನಗಿ ನವೀಕರಣಗೊಳಿಸಬಾರದು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೇಲಿಯೇ ಎದ್ದು ಹೊಲ ಮೇಯುತ್ತಿದೆ…

ರೈತರು ಕೃಷಿ ಚಟುವಟಿಕೆಗೆ ನದಿ ನೀರು ಬಳಸಿಕೊಂಡರೆ ಸರ್ಕಾರ ಪರವಾನಗಿ ಕಡ್ಡಾಯ ಎನ್ನುತ್ತದೆ. ಒಂದು ವೇಳೆ ರೈತರು ಅಕ್ರಮವಾಗಿ ನೀರು ಬಳಸಿಕೊಂಡರೆ, ಅವರು ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದರೆ, ನಿತ್ಯ 20 ಕ್ಯೂಸೆಕ್‌ ನದಿ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುವ ಖಾಸಗಿ ಕೈಗಾರಿಕೆ ವಿರುದ್ಧ ಸರ್ಕಾರ ಮೌನ ವಹಿಸಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ…
-–ಬಿ.ಸಿ.ಹನುಮನಗೌಡ, ರೈತ ಮುಖಂಡ, ನದಿಹರಳಹಳ್ಳಿ ಗ್ರಾಮ, ರಾಣೇಬೆನ್ನೂರು ತಾಲ್ಲೂಕು.

Write A Comment