ಕರ್ನಾಟಕ

ಕಬ್ಬು ಬಾಕಿ: ಸರ್ಕಾರದ ಉತ್ತರಕ್ಕೆ ಪ್ರತಿ ಪಕ್ಷಗಳ ತೀವ್ರ ಅಸಮಾಧಾನ; ವಿಧಾನಸಭೆಯಲ್ಲಿ ಧರಣಿ, ಪರಿಷತ್ತಿನಲ್ಲಿ ಸಭಾತ್ಯಾಗ

Pinterest LinkedIn Tumblr

pvec13-assembly-2

ಸುವರ್ಣಸೌಧ (ಬೆಳಗಾವಿ): ಕಳೆದ ವರ್ಷ ಘೋಷಿಸಿದಂತೆ ರೈತ ರಿಗೆ ಪ್ರತಿ ಟನ್ ಕಬ್ಬಿಗೆ ₨ 2,500 ದರ ಕೊಡಿಸಲು ಬದ್ಧ ಎಂದು ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್ ಶುಕ್ರವಾರ ಎರಡೂ ಸದನಗಳಲ್ಲಿ ಪುನರುಚ್ಚರಿಸಿದರು. ಆದರೆ, ಪೂರ್ಣ ಬಾಕಿ ಮೊತ್ತ ಪಾವತಿಗೆ ಕಾಲಮಿತಿ ವಿಧಿಸ ಬೇಕು ಮತ್ತು ಸರ್ಕಾರದಿಂದಲೇ ಬಾಕಿ ಪಾವತಿಸಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆ ಒಪ್ಪಲು ನಿರಾಕರಿಸಿದರು.

ಅವರ ಈ ನಿಲುವನ್ನು ಪ್ರತಿಭಟಿಸಿ ಬಿಜೆಪಿ, ಜೆಡಿಎಸ್, ಬಿಎಸ್ ಆರ್ ಕಾಂಗ್ರೆಸ್, ಸರ್ವೋದಯ ಕರ್ನಾಟಕ ಮತ್ತು ಪಕ್ಷೇತರ ಸದಸ್ಯರು ಶುಕ್ರವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಇದರ ನಡುವೆಯೇ ಮಸೂದೆ ಮತ್ತು ಕಾಗದ ಪತ್ರಗಳನ್ನು ಮಂಡಿಸಲಾಯಿತು. ಬಳಿಕ ಸ್ಪೀಕರ್ ಕಲಾಪವನ್ನು ಸೋಮ­ವಾರಕ್ಕೆ ಮುಂದೂಡಿದರು. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಸಚಿವರ ಉತ್ತರ: ನಿಯಮ 69ರಡಿ ನಡೆದ ಚರ್ಚೆಗೆ ಉಭಯ ಸದನಗಳಲ್ಲಿ ಉತ್ತರಿಸಿದ ಸಚಿವರು, ಕಳೆದ ಹಂಗಾಮಿನಲ್ಲಿ 60 ಸಕ್ಕರೆ ಕಾರ್ಖಾನೆಗಳು ರೈತರಿಗೆ ₨ 1,728 ಕೋಟಿ ಬಾಕಿ ಉಳಿಸಿ ಕೊಂಡಿವೆ. ಈ ಮೊತ್ತ ರೈತರ ಖಾತೆಗೆ ತಲುಪುವ ಬಗ್ಗೆ ಯಾವ ಸಂಶಯವೂ ಬೇಡ ಎಂದರು.

ಮಂಡಳಿಯಿಂದ ದರ ನಿಗದಿ: ಪ್ರತಿ ಟನ್ ಕಬ್ಬಿಗೆ ₨ 2,500 ದರ ನಿಗದಿ ಮಾಡಿರುವುದು ಸರ್ಕಾರವಲ್ಲ. ವಿರೋಧ ಪಕ್ಷಗಳು ಈ ದರ ನಿಗದಿಗೆ ಕಾರಣವಲ್ಲ. ಕಬ್ಬು ಸರಬರಾಜು ಮತ್ತು ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಬ್ಬು ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿತ್ತು.

ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ನವೆಂಬರ್‌ನಲ್ಲಿ ಇಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಪ್ರಕಟಿಸಿದ್ದರು ಎಂದು ನೆನಪಿಸಿದರು. ಎಫ್.ಆರ್‌.ಪಿ ನೀಡದ ಗೋಕಾಕದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ರಾಮದುರ್ಗದ ಶಿವಸಾಗರ ಸಕ್ಕರೆ ಕಾರ್ಖಾನೆ ಮತ್ತು ಬೀದರ್‌ನ ಭವಾನಿ ಸಕ್ಕರೆ ಕಾರ್ಖಾನೆ ಜಪ್ತಿಗೆ ಆದೇಶ ಹೊರಡಿಸಲಾಗಿತ್ತು.

ಶಿವಸಾಗರ ಸಕ್ಕರೆ ಕಾರ್ಖಾನೆಯ ಸಕ್ಕರೆ ವಶಕ್ಕೆ ಪಡೆದು ಎಫ್.ಆರ್‌.ಪಿ ಪಾವತಿಸಲಾಗಿದೆ. ಭವಾನಿ ಸಕ್ಕರೆ ಕಾರ್ಖಾನೆ ಇನ್ನೂ ₨ 81 ಲಕ್ಷ ಬಾಕಿ ಉಳಿಸಿಕೊಂಡಿದೆ. ಘಟ­ಪ್ರಭಾ ಕಾರ್ಖಾನೆಯ ಆಸ್ತಿ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಮೊದಲ ಹರಾಜಿನಲ್ಲಿ ಯಾವುದೇ ಖರೀದಿದಾರರು ಬಂದಿಲ್ಲ ಎಂದು ತಿಳಿಸಿದರು.

ಡಿಸೆಂಬರ್ ಅಂತ್ಯದೊಳಗೆ ಟನ್‌ಗೆ ₨2,300 ಮತ್ತು ಇನ್ನುಳಿದ ₨ 200ನ್ನು ಎರಡು ಕಂತುಗಳಲ್ಲಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಬಾಕಿ ಪಾವತಿಗೆ ಪೂರಕವಾಗಿ 3 ವರ್ಷಗಳ ಅವಧಿಗೆ ಸಕ್ಕರೆ ಕಾರ್ಖಾನೆಗಳಿಗೆ ಕೆಲವು ತೆರಿಗೆ ರಿಯಾಯ್ತಿಗಳನ್ನು ನೀಡಲಾಗಿದೆ ಎಂದರು.

‘ನಿರಾಣಿ ಕಾರ್ಖಾನೆಯಲ್ಲಿ ಮೋಸ’
‘ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಮೋಸ ನಡೆಯುತ್ತಿದೆ. ಹತ್ತು ಟನ್ ಕಬ್ಬು ಪೂರೈಸಿದರೆ ಏಳು ಟನ್‌ಗೆ ಮಾತ್ರ ರಸೀದಿ ನೀಡಲಾಗುತ್ತಿದೆ’ ಎಂಬ ಆರೋಪ ಸದನದಲ್ಲಿ ಕೇಳಿಬಂತು.

ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಖಾನೆಯ ಹೆಸರು ಹೇಳದೆ ಈ ವಿಷಯ ಪ್ರಸ್ತಾಪಿಸಿದರು. ಆಗ ಬಿಎಸ್ಆರ್ ಕಾಂಗ್ರೆಸ್ ಸದಸ್ಯ ಪಿ.ರಾಜೀವ ಅವರು, ‘ನಿರಾಣಿ ಕಾರ್ಖಾನೆಯಲ್ಲಿ ಈ ಮೋಸ ನಡೆಯುತ್ತಿದೆ. ನನ್ನ ಬಳಿ ದಾಖಲೆಗಳಿವೆ’ ಎಂದರು.

ಕೇಂದ್ರದ ಕಾಯ್ದೆ
ಉತ್ತರ ಕರ್ನಾಟಕದಲ್ಲೂ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ದರ ನೀಡುವ ಪದ್ಧತಿಯನ್ನು ಕೇಂದ್ರ ಸರ್ಕಾರದ ಕಾಯ್ದೆಯಂತೆ ಜಾರಿಗೆ ತರಲಾಗಿದೆ ಎಂದು ಮಹದೇವ ಪ್ರಸಾದ್ ತಿಳಿಸಿದರು.

‘ದಕ್ಷಿಣ ಕರ್ನಾಟಕದಲ್ಲಿ ಕಾರ್ಖಾನೆಗಳ ಬಾಗಿಲಿಗೆ ಪೂರೈಸುವ (ಎಕ್ಸ್ ಗೇಟ್) ಮತ್ತು ಉತ್ತರ ಕರ್ನಾಟಕದಲ್ಲಿ ಹೊಲದಲ್ಲಿ ಕಟಾವು ಮಾಡಿದ (ಎಕ್ಸ್ ಫೀಲ್ಡ್) ಕಬ್ಬಿಗೆ ದರ ನಿಗದಿ ಮಾಡುವ ಕ್ರಮ ಇತ್ತು. ಅದನ್ನೇ ಮುಂದುವರಿಸಬೇಕು’ ಎಂಬ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಬಿಜೆಪಿಯ ಗೋವಿಂದ ಕಾರಜೋಳ ಮತ್ತಿತರರ ಬಿಗಿಪಟ್ಟಿಗೆ  ಸಚಿವರು ಮಣಿಯಲಿಲ್ಲ.

ರಸ್ತೆ ಮೇಲೆ ಎತ್ತಿನ ಗಾಡಿ
‘ಮಂಡ್ಯದಲ್ಲಿ ಮೈಷುಗರ್ಸ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯು­ವುದು ಸ್ಥಗಿತವಾಗಿದ್ದು, ಕಬ್ಬು ತುಂಬಿದ ಮೂರು ಸಾವಿರಕ್ಕೂ ಹೆಚ್ಚು ಎತ್ತಿನ ಗಾಡಿಗಳು ರಸ್ತೆ ಮೇಲೆ ನಿಂತಿವೆ. ಕಬ್ಬು ಒಣಗುತ್ತಿದೆ. ಸರ್ಕಾರ ರೈತರಿಗೆ ನಷ್ಟ ತುಂಬಿ ಕೊಡಬೇಕು’ ಎಂದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಇಷ್ಟು ವರ್ಷ ಸರ್ಕಾರದ ನೆರವಿ­ನಿಂದಲೇ ಮೈಷುಗರ್ಸ್ ಕಬ್ಬು ಅರೆಯು­ವುದನ್ನು ಆರಂಭಿಸುತ್ತಿತ್ತು. ಈ ಬಾರಿ ಸರ್ಕಾರದ ಹಣ ಪಡೆ­ಯದೆ ಆರಂಭಿಸಿದೆ. ಕಾರ್ಖಾನೆಯ ಒಂದು ಘಟಕದ ನವೀಕರಣ ನಡೆಯುತ್ತಿದೆ. ಒಂದು ಘಟಕ ಮಾತ್ರ ಕೆಲಸ ಮಾಡುತ್ತಿದೆ. ಅಲ್ಲಿ ತಾಂತ್ರಿಕ ಸಮಸ್ಯೆಯಿಂದ ಕಬ್ಬು ಅರೆಯು­ವುದು ನಿಧಾನ­ವಾಗಿದೆ’ ಎಂದರು.

‘ಮೈಷುಗರ್ಸ್ ಸುಧಾರಣೆ ಸಾಧ್ಯವೇ ಇಲ್ಲ’ ಎಂದು ಕುಮಾರ­ಸ್ವಾಮಿ ಮತ್ತು ಬಿಜೆಪಿಯ ಉಮೇಶ ಕತ್ತಿ ವಾದಿಸಿದರು. ‘ಅಲ್ಲಿ ಕೆಲವು ನೆಂಟರಿದ್ದಾರೆ. ಅವರನ್ನು ಹೊರ­ಹಾಕಿ. ಆಗ ಎಲ್ಲವೂ ಸಾಧ್ಯ ಆಗುತ್ತದೆ’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.ಉತ್ತರ ಕರ್ನಾಟಕ­ದಲ್ಲೂ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ದರ ನೀಡುವ ಪದ್ಧತಿಯನ್ನು ಕೇಂದ್ರ ಸರ್ಕಾರದ ಕಾಯ್ದೆಯಂತೆ ಜಾರಿಗೆ ತರಲಾಗಿದೆ ಎಂದು ಮಹದೇವ ಪ್ರಸಾದ್ ತಿಳಿಸಿದರು.

‘ದಕ್ಷಿಣ ಕರ್ನಾಟಕದಲ್ಲಿ ಕಾರ್ಖಾನೆ­ಗಳ ಬಾಗಿಲಿಗೆ ಪೂರೈಸುವ (ಎಕ್ಸ್ ಗೇಟ್) ಮತ್ತು ಉತ್ತರ ಕರ್ನಾಟಕ­ದಲ್ಲಿ ಹೊಲದಲ್ಲಿ ಕಟಾವು ಮಾಡಿದ (ಎಕ್ಸ್ ಫೀಲ್ಡ್) ಕಬ್ಬಿಗೆ ದರ ನಿಗದಿ ಮಾಡುವ ಕ್ರಮ ಇತ್ತು. ಅದನ್ನೇ ಮುಂದುವರಿಸ­ಬೇಕು’ ಎಂಬ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಬಿಜೆಪಿಯ ಗೋವಿಂದ ಕಾರಜೋಳ ಮತ್ತಿತರರ ಬಿಗಿಪಟ್ಟಿಗೆ  ಸಚಿವರು ಮಣಿಯಲಿಲ್ಲ.

Write A Comment