ಬೆಂಗಳೂರು: ಅಂತರರಾಷ್ಟ್ರೀಯ ಸಿನಿಮೋತ್ಸವಗಳು ಯಾರಿಗಾಗಿ ಮತ್ತು ಏಕೆ? ಹೀಗೊಂದು ಪ್ರಶ್ನೆಯನ್ನು ಕೇಳಿದರೆ ‘ಸ್ಥಳೀಯ ಚಿತ್ರರಂಗದ ಬೆಳವಣಿಗೆಗೆ ಪೂರಕ’ ಎನ್ನುವ ಸಿದ್ಧ ಉತ್ತರಗಳು ದೊರೆಯುತ್ತವೆ. ಈ ಉತ್ತರ ಸರಿಯಾಗಿಯೂ ಇದೆ. ಆದರೆ ನಮ್ಮ ಚಿತ್ರೋತ್ಸವಗಳಲ್ಲಿ ಕನ್ನಡದ ನಟ–ನಟಿಯರು ಯಾವ ಮಟ್ಟದಲ್ಲಿ ತೊಡಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ನಿರಾಶೆ ಮೂಡಿಸುತ್ತದೆ.
ಮೇಲ್ನೋಟಕ್ಕೆ ಕಾಣುವ ಅಂಶ ಎಂದರೆ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವವರಲ್ಲಿ ಬಹು ಮಂದಿ ಛಾಯಾಗ್ರಹಣ, ಸಂಕಲನ, ನಿರ್ದೇಶನ ಇತ್ಯಾದಿ ತೆರೆಯ ಹಿಂದೆ ಕೆಲಸ ಮಾಡುತ್ತಿರುವ ಉತ್ಸಾಹಿಗಳು. ಚಲನಚಿತ್ರ ಅಕಾಡೆಮಿಯು ಸಿನಿಮಾ ವಲಯದವರಿಗೆ ನೀಡಲು 500 ಪಾಸುಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೊಟ್ಟಿದೆ. ಆದರೆ, ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಬಹುತೇಕ ನಟ–ನಟಿಯರು ಚಿತ್ರಮಂದಿರಗಳಿಂದ ದೂರವೇ ಉಳಿದಿದ್ದಾರೆ.
ಈ ಮುನ್ನವೇ ನಿಗದಿಯಾದ ಚಿತ್ರೀಕರಣ, ಅಭಿಮಾನಿಗಳ ಮುತ್ತಿಗೆ ಸಿನಿಮೋತ್ಸವದಿಂದ ನಟರು ದೂರವಿರಲು ಕಾರಣ ಎನ್ನುವುದು ಚಿತ್ರರಂಗದವರ ಮಾತು. ಆದರೆ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರಗಳ ಗೆಲುವು ಮರೀಚಿಕೆಯಾಗುತ್ತಿದೆ, ವಿಭಿನ್ನ ತರಹದ ಕಥೆ ಕಟ್ಟುವಲ್ಲಿ ಹಿನ್ನಡೆಯಾಗುತ್ತಿದೆ, ಸಿದ್ಧಸೂತ್ರಗಳ ಮತ್ತು ರೀಮೇಕ್ ಕಥನಗಳು ಹೆಚ್ಚುತ್ತಿದೆ ಎನ್ನುವ ಆರೋಪದ ಈ ಹೊತ್ತಿನಲ್ಲಿ ನಟರ ಪಾಲ್ಗೊಳ್ಳುವಿಕೆಯೂ ಮುಖ್ಯವಾಗುತ್ತದೆ.
‘ಇಲ್ಲಿ ಮಾತ್ರ ಎಂದಲ್ಲ. ಎಲ್ಲ ಸಿನಿಮೋತ್ಸವಗಳಲ್ಲೂ ನಟರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಹಾಜರಾದರೂ ತಮ್ಮ ಪಾಲಿನ ಕಾರ್ಯಕ್ರಮ ಮುಗಿಸಿ ಹೊರಟುಹೋಗುತ್ತಾರೆ. ಕಮಲ್ ಹಾಸನ್, ಸುಹಾಸಿನಿ ಮತ್ತಿತರ ಕೆಲವೇ ಮಂದಿ ಮಾತ್ರ ಗೋವಾ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಬಹುಪಾಲು ನಟರು ಸಿನಿಮೋತ್ಸವವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇವರು ಸಿನಿಮೋತ್ಸವಗಳಲ್ಲಿ ಪಾಲ್ಗೊಂಡರೆ ಚಿತ್ರರಂಗದ ಬೆಳವಣಿಗೆಗೆ ಅನುಕೂಲವಾಗುತ್ತದೆ. ಜಾಗತಿಕ ಸಿನಿಮಾಗಳಲ್ಲಿನ ಪಾತ್ರ ಸೃಷ್ಟಿ, ಕಥೆಯ ನಿರ್ವಹಣೆ, ನಟರ ಸ್ಪಂದನದ ಅರಿವಾಗುತ್ತದೆ’ ಎನ್ನುತ್ತಾರೆ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಪಿ.ಎಚ್.ವಿಶ್ವನಾಥ್.
‘ನಮ್ಮಲ್ಲಿ ಸ್ಟಾರ್ ಎಂದರೆ ಇದೇ ರೀತಿಯ ಕಥೆ ಇರಬೇಕು ಎನ್ನುವ ಭಾವನೆ ಇದೆ. ಈ ದೃಷ್ಟಿಕೋನ ಬದಲಾವಣೆಯಾಗಬೇಕು ಎಂದರೆ ಬೇರೆ ದೇಶಗಳ ಸಿನಿಮಾಗಳನ್ನು ನಮ್ಮ ನಟರು ನೋಡಬೇಕು. ಇದರಿಂದ ಸ್ಥಳೀಯವಾಗಿ ಪ್ರಯೋಗಾತ್ಮಕ ಚಿತ್ರಗಳು ಮೂಡಿಬರಲಿವೆ. ಖಂಡಿತವಾಗಿಯೂ ಜನರು ಅದನ್ನು ಒಪ್ಪಿಕೊಳ್ಳುತ್ತಾರೆ’ ಎಂದು ವಿಶ್ವನಾಥ್ ಅವರು ಅಭಿಪ್ರಾಯಪಡುತ್ತಾರೆ.
‘ಜಾಗತಿಕವಾಗಿ ನೋಡುವುದಾದರೂ ಸಿನಿಮೋತ್ಸವಗಳಲ್ಲಿ ನಟರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಚಿತ್ರೀಕರಣದ ದಿನಾಂಕ ಇತ್ಯಾದಿ ಕಾರಣಕ್ಕೆ ಅವರು ಪಾಲ್ಗೊಳ್ಳದೇ ಇರಬಹುದು. ಆದರೆ ಭಾಗವಹಿಸಿದರೆ ಅವರಿಗೆ ಮಾನಸಿಕ ಮತ್ತು ಬೌದ್ಧಿಕವಾಗಿ ಚೈತನ್ಯ ಬರುತ್ತದೆ’ ಎನ್ನುವ ನುಡಿ ನಿರ್ದೇಶಕ ಬಿ. ಸುರೇಶ್ ಅವರದ್ದು.
‘ಹಳೆಯ, ನನ್ನ ತಲೆಮಾರಿನ ಮತ್ತು ಯುವ ಛಾಯಾಗ್ರಾಹಕರು, ಸಂಕಲನಕಾರರು, ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಫೂರ್ತಿ ಪಡೆಯುತ್ತಿದ್ದಾರೆ. ಗೋವಾ ಚಿತ್ರೋತ್ಸವದಲ್ಲಿ ಕಮಲಹಾಸನ್ ಜತೆ ಚಿತ್ರ ನೋಡಿ, ಚರ್ಚಿಸಿದ್ದೇನೆ. ಅವರು ಹೇಳಿದ ನಂತರವೇ ಕೆಲವು ನಿರ್ದೇಶಕರ ಚಿತ್ರಗಳನ್ನು ನಾನು ನೋಡಿದ್ದು. ಸೆಲೆಬ್ರಿಟಿಗಳಿಗಿಂತ ತಂತ್ರಜ್ಞರ ಪಾಲ್ಗೊಳ್ಳುವಿಕೆ ಮುಖ್ಯ’ ಎಂದು ಸುರೇಶ್ ಅಭಿಪ್ರಾಯ ಪಡುತ್ತಾರೆ.
‘ಖುದ್ದು ಆಹ್ವಾನಿಸಿದ್ದೆ’
ಕಲಾವಿದರು ಏಕೆ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ನನಗೆ ತಿಳಿಯುತ್ತಿಲ್ಲ. ಚಿತ್ರರಂಗದ ಪಾಲ್ಗೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನಾನು ಅಕಾಡೆಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳಲ್ಲಿ ಈ ಉತ್ಸವ ಬಂದಿತು. ನಾನೇ ವೈಯಕ್ತಿಕವಾಗಿ ನಟರನ್ನು ಭೇಟಿ ಮಾಡಿ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದೆ. ಈ ಮುಂಚೆಯೇ ಅವರು ಕೆಲಸಗಳನ್ನು ಒಪ್ಪಿಕೊಂಡಿರುತ್ತಾರೆ ಎನ್ನುವುದು ನಿಜ. ಹಾಗಿದ್ದರೆ ಅವರನ್ನು ಕರೆತರಲು ಯಾವ ಬಗೆಯ ಪ್ರಯತ್ನ ಮಾಡಬೇಕು ಎನ್ನುವ ಬಗ್ಗೆ ಯೋಚಿಸಲಾಗುತ್ತಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ನಟರಿಗೆ ಈ ಸಂಬಂಧ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂದು ಮುಂದಿನ ವರ್ಷದ ಚಿತ್ರೋತ್ಸವ ಸಂದರ್ಭದಲ್ಲಿ ಚರ್ಚಿಸಲಾಗುವುದು. ಸಿನಿಮೋತ್ಸವ ಪೂರ್ಣಗೊಂಡ ನಂತರ ಈ ಬಗ್ಗೆ ವಿಮರ್ಶೆ ಮಾಡಿಕೊಳ್ಳಲು ಸಭೆ ಕರೆಯುತ್ತೇನೆ.
–ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ
