ಬೆಂಗಳೂರು: ‘ಕಲಾತ್ಮಕ ಚಿತ್ರ ನಿರ್ಮಾಣ ಒಂದು ಕಾಲದಲ್ಲಿ ಹೆಮ್ಮೆ ವಿಷಯವಾಗಿತ್ತು. ಆದರೆ ಇಂದು ಅವು ಪ್ರಶಸ್ತಿಗಾಗಿ ಮಾಡುವ ಚಿತ್ರಗಳು ಎನ್ನುವಂತಾಗಿದೆ. ನಮ್ಮನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ 1950ರ ಬಳಿಕ ಹೊಸ ಬಗೆಯ ಚಿತ್ರಗಳು ಬಂದವು. ಕನ್ನಡದಲ್ಲಿ ಈ ಪ್ರಕ್ರಿಯೆ 70ರ ಆಸುಪಾಸಿನಲ್ಲಿ ಆರಂಭವಾಯಿತು. ಈಗಲೂ ಬರುತ್ತಿರುವ ಅಂಥ ಚಿತ್ರಗಳನ್ನು ಹೊಸ ಅಲೆಯ ಚಿತ್ರಗಳು ಎನ್ನಲಾಗುತ್ತಿದೆ…’ –ಹೀಗೆ ಬೇಸರದ ದನಿಯಲ್ಲಿ ಪ್ರತಿಕ್ರಿಯಿಸಿದ್ದು ನಿರ್ದೇಶಕ ಪಿ. ಶೇಷಾದ್ರಿ.
ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಿರ್ದೇಶಕರೊಂದಿಗಿನ ಸಂವಾದದಲ್ಲಿ ಅವರು ಸೋಮವಾರ ಮಾತನಾಡಿದರು. ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರ ಎನ್ನುವ ವರ್ಗೀಕರಣವೇ ಸಲ್ಲದು ಎನ್ನುವ ಆಕ್ಷೇಪ ಅವರ ಮಾತುಗಳಲ್ಲಿ ಕಾಣುತ್ತಿತ್ತು.
‘ಕಮರ್ಷಿಯಲ್ ಸಿನಿಮಾ ನೀವು ಮಾಡುವುದಿಲ್ಲವೇ ಎಂದು ಹಲವರು ಕೇಳುತ್ತಾರೆ. ಏಕೆ ಆ ಸಿನಿಮಾಗಳನ್ನು ಮಾಡಬೇಕು ಎಂದು ನಾನು ಪ್ರಶ್ನಿಸುತ್ತೇನೆ. ಸಮಸ್ಯೆ ಇರುವುದೇ ಈ ವರ್ಗೀಕರಣದಿಂದ. ಮುಂದಿನ ಚಿತ್ರ ಹೇಗಿರಬೇಕು ಎಂಬುದನ್ನು ನಾನು ಯೋಚಿಸಬೇಕಾಗಿದೆ. ಪ್ರತಿಯೊಬ್ಬ ನಿರ್ದೇಶಕನಿಗೂ ಆತನದೇ ಆದ ಅಭಿರುಚಿಗಳಿರುತ್ತವೆ ಅಲ್ಲವೇ’ ಎಂದು ಪ್ರಶ್ನಿಸಿದರು.
ಮರಾಠಿ ಮತ್ತು ಕನ್ನಡ ಚಿತ್ರರಂಗವನ್ನು ತುಲನೆ ಮಾಡಿದ ಅವರು, ‘ಮುನ್ನುಡಿ ಚಿತ್ರ ಮಾಡಿ 14 ವರ್ಷಗಳಾಗಿವೆ. ಆಗ ಸರ್ಕಾರ ₨10 ಲಕ್ಷ ಸಬ್ಸಿಡಿ ನೀಡುತ್ತಿತ್ತು. ಈಗಲೂ ಅಷ್ಟೇ ಹಣ ನೀಡುತ್ತಿದೆ. 2003ರಲ್ಲಿ ಮರಾಠಿ ಚಿತ್ರ ‘ಶ್ವಾಸ್’ ಆಸ್ಕರ್ ಅಂಗಳಕ್ಕೆ ಹೋದಾಗ ಅಲ್ಲಿನ ಸರ್ಕಾರ ಎಚ್ಚೆತ್ತು ಆ ಚಿತ್ರಕ್ಕೆ ₨50 ಲಕ್ಷ ಸಬ್ಸಿಡಿ ನೀಡಿತು. ಉಳಿದಂತೆ ಎ, ಬಿ ಎಂದು ವಿಭಾಗಿಸಿ ₨30, ₨40 ಲಕ್ಷ ಸಬ್ಸಿಡಿ ಜಾರಿ ಮಾಡಿತು. ಆದರೆ ನಮ್ಮಲ್ಲಿ ಇಂದಿಗೂ ಸಬ್ಸಿಡಿ ಮೊತ್ತ ಹೆಚ್ಚಾಗಿಲ್ಲ’ ಎಂದರು. ಕನ್ನಡ ಚಿತ್ರಗಳಿಗೆ ಸಂಬಂಧಿಸಿದಂತೆ ವಿಶೇಷ ಕಾನೂನನ್ನು ಏಕೆ ರೂಪಿಸಬಾರದು ಎಂಬ ಪ್ರಶ್ನೆ ಯನ್ನೂ ಶೇಷಾದ್ರಿ ಸರ್ಕಾರದ ಮುಂದಿಟ್ಟರು.
‘ಹರಿವು’ ಚಿತ್ರದ ನಿರ್ದೇಶಕ ಮಂಜುನಾಥ್ ಮಂಸೋರೆ ಮಾತನಾಡಿ, ‘ನಮ್ಮಂಥ ಯುವ ನಿರ್ದೇಶಕರಿಗೆ ಸಿನಿಮೋತ್ಸವಗಳು ನೆರವಾಗುತ್ತವೆ. ಆದರೆ, ಚಿತ್ರಗಳಿಗೆ ಹೂಡಿರುವ ಹಣ ಯಾವ ರೀತಿ ವಾಪಸು ತೆಗೆದು ಕೊಳ್ಳಬೇಕು ಎನ್ನುವುದು ತಿಳಿಯುತ್ತಿಲ್ಲ. ನನ್ನ ಚಿತ್ರದ ಟ್ರೇಲರ್ ಬಿಡುಗಡೆಯಾದ ಸಂದರ್ಭದಲ್ಲಿ ಇದು ಕಲಾತ್ಮಕವೇ ಅಥವಾ ಕಮರ್ಷಿಯಲ್ ಸಿನಿಮಾವೇ ಎನ್ನುವ ಪ್ರಶ್ನೆ ಇಟ್ಟಿದ್ದರು.
ಹಂಚಿಕೆದಾರರ ಬಳಿ ಹೋದರೆ ₨20 ಲಕ್ಷ ಕೊಟ್ಟರೆ ತೆರೆ ಕಾಣಿಸುವುದಾಗಿ ಹೇಳುತ್ತಾರೆ. ಅಷ್ಟು ಹಣ ಕೊಟ್ಟು ಸಿನಿಮಾ ತೆರೆಗೆ ತರಲು ಸಾಧ್ಯವೇ’ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಸಿನಿಮೋತ್ಸವದ ಕಲಾನಿರ್ದೇಶಕ ವಿದ್ಯಾಶಂಕರ್‌್, ಗಾಯಕಿ ಎಂ.ಡಿ.ಪಲ್ಲವಿ ಹಾಜರಿದ್ದರು.
