ಚಿಕ್ಕಮಗಳೂರು ಸಮೀಪದ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ದರ್ಗಾದಲ್ಲಿ ಗುರುವಾರ ಸಂಘ ಪರಿವಾರದ ನೇತೃತ್ವದಲ್ಲಿ ಅನುಸೂಯದೇವಿ ಜಯಂತಿ ಆಚರಿಸಿದ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದತ್ತಪಾದುಕೆಗಳ ದರ್ಶನ ಪಡೆದರು -–ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರು: ದತ್ತಮಾಲೆ ಅಭಿಯಾನ ಮತ್ತು ದತ್ತ ಜಯಂತಿ ಅಂಗವಾಗಿ ನಗರದಲ್ಲಿ ಗುರುವಾರ ಸಂಘ ಪರಿವಾರದ ನೇತೃತ್ವದಲ್ಲಿ ಮಹಿಳೆಯರು ಸಂಕೀರ್ತನಾ ಯಾತ್ರೆ ನಡೆಸಿದರು. ನಂತರ ಐ.ಡಿ. ಪೀಠಕ್ಕೆ ತೆರಳಿ ಪೊಲೀಸರ ಸರ್ಪಗಾವಲಿನ ನಡುವೆ ದತ್ತ ಪಾದುಕೆಗಳ ದರ್ಶನ ಪಡೆದರು.
ಬೋಳರಾಮೇಶ್ವರ ದೇವಾಲಯದ ಆವರಣದಿಂದ ಹೊರಟ ಯಾತ್ರೆ ಐ.ಜಿ.ರಸ್ತೆಯಲ್ಲಿ ಸಾಗಿ, ರತ್ನಗಿರಿ ರಸ್ತೆಯ ಪಾಲಿಟೆಕ್ನಿಕ್ ವೃತ್ತ ತಲುಪಿತು. ಕೈಯಲ್ಲಿ ಭಗವಾಧ್ವಜ ಹಿಡಿದ ಮಹಿಳೆಯರು ಮತ್ತು ಯುವತಿಯರು ದತ್ತಾತ್ರೇಯರ ನಾಮಸ್ಮರಣೆ ಮತ್ತು ಭಜನೆ ಮಾಡುತ್ತಾ ಹೆಜ್ಜೆ ಹಾಕಿದರು.
ದತ್ತಾತ್ರೇಯರ ವಿಗ್ರಹದೊಂದಿಗೆ ಪೂಜಿತ ದೇವರ ಅಡ್ಡೆಯನ್ನು ಹೊತ್ತ ದತ್ತ ಭಕ್ತರು ಮೆರವಣಿಗೆ ಮುಂಚೂಣಿಯಲ್ಲಿದ್ದರು. ದತ್ತಾತ್ರೇಯರು ಮತ್ತು ಅನಸೂಯ ದೇವಿಯರ ಜಯಘೋಷ ಮೊಳಗಿಸುತ್ತಿದ್ದ ಮಹಿಳೆಯರು ಭಜನೆ, ಭಕ್ತಿಯ ಹಾಡು ಹೇಳುತ್ತಾ ಸಂಕೀರ್ತನಾ ಯಾತ್ರೆ ನಡೆಸಿದರು.
ಕಾಲ್ನಡಿಗೆಯ ಯಾತ್ರೆ ಪೂರ್ಣಗೊಳಿಸಿ ಪಾಲಿಟೆಕ್ನಿಕ್ ವೃತ್ತದಿಂದ ವಾಹನಗಳಲ್ಲಿ ಬಾಬಾಬುಡನ್ ಗಿರಿಯತ್ತ ಹೊರಟ ಮಹಿಳೆಯರು, ದತ್ತ ಪೀಠದಲ್ಲಿ ಸರದಿ ಸಾಲಿನಲ್ಲಿ ನಿಂತು ಅನುಸೂಯದೇವಿ ಗದ್ದುಗೆ ಮತ್ತು ದತ್ತ ಪಾದುಕೆಗಳ ದರ್ಶನ ಪಡೆದರು. ಪೀಠದ ಹೊರಗೆ ನಿರ್ಮಿಸಿರುವ ತಾತ್ಕಾಲಿಕ ಸಭಾ ಮಂಟಪದಲ್ಲಿ ಅನಸೂಯ ಜಯಂತಿ ಆಚರಿಸಿ, ವಿವಿಧ ಹೋಮ, ಹವನಾದಿ ಧಾರ್ಮಿಕ ಆಚರಣೆ ನಡೆಸಿ, ದತ್ತ ಜಯಂತಿಗೆ ವಿಧ್ಯುಕ್ತ ಚಾಲನೆ ನೀಡಿದರು.
ದತ್ತಾತ್ರೇಯರ ತಾಯಿ ಅನಸೂಯದೇವಿಯ ಗದ್ದುಗೆಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ತಿಳಿಸಿದರು.
ಶಾಸಕ ಸಿ.ಟಿ.ರವಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮೋಹನ್, ನಗರ ಘಟಕ ಅಧ್ಯಕ್ಷೆ ವೀಣಾ ಆರ್.ಶೆಟ್ಟಿ, ಪುಷ್ಪಾ ಪ್ರಮುಖರಾದ ಮೋಹನ್, ಶಾರದಾ, ಚೈತ್ರಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ರಂಗನಾಥ್, ಉಪಾಧ್ಯಕ್ಷೆ ಶಶಿರೇಖಾ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಶಂಕರ್, ಖಜಾಂಚಿ ಯೋಗೀಶರಾಜ್ ಅರಸ್, ಬಜರಂಗ ದಳದ ಪ್ರೇಮಕಿರಣ್, ಸಂತೋಷ್ ಕೋಟ್ಯಾನ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.
