ಸಿಡ್ನಿ, ನ.26: ಬ್ಯಾಟಿಂಗ್ ಮಾಡುತ್ತಿದ್ದಾಗ ಬೌನ್ಸರ್ ಚೆಂಡು ಬಡಿದು ಸಿಡ್ನಿಯ ಆಸ್ಪತ್ರೆಗೆ ದಾಖಲಾಗಿರುವ ಆಸ್ಟ್ರೇಲಿಯದ ಯುವ ಬ್ಯಾಟ್ಸ್ಮನ್ ಫಿಲಿಪ್ ಹ್ಯೂಸ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಹೋರಾಟದಲಿದ್ದಾರೆ.
ಸಿಡ್ನಿಯ ಸೈಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫಿಲಿಪ್ಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರ ತಂಡ ತಯಾರಿ ನಡೆಸುತ್ತಿದೆ.
ಹ್ಯೂಸ್ ತಲೆಗೆ ಆಗಿರುವ ಗಾಯದ ಸ್ವರೂಪವನ್ನು ಅರಿಯಲು ಮತ್ತೆ ಸ್ಕಾನ್ ನಡೆಸಲಾಗುವುದು ಎಂದು ವೈದ್ಯರಾದ ಪೀಟರ್ ಬ್ರೂಕ್ನೆರ್ ತಿಳಿಸಿದ್ದಾರೆ.
ಮಂಗಳವಾರ ಸಿಡ್ನಿ ಶಫೀಲ್ಡ್ ಶೀಲ್ಡ್ಗಾಗಿ ಆರಂಭಗೊಂಡ ಪ್ರಥಮ ದರ್ಜೆ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯ ತಂಡದ ಆಟಗಾರ ಹ್ಯೂಸ್ಗೆ ಎದುರಾಳಿ ತಂಡ ನ್ಯೂ ಸೌತ್ ವೇಲ್ಸ್ನ ಬೌಲರ್ ಸೇನ್ ಅಬಾಟ್ ಎಸೆದ ಬೌನ್ಸರ್ ಚೆಂಡು ತಲೆಗೆೆೆ ಬಡಿದು ಗಂಭೀರ ಗಾಯವಾಗಿತ್ತು.
ಈ ಘಟನೆ ನಡೆದ ಬಳಿಕ ಆಟವನ್ನು ಸ್ಥಗಿತಗೊಳಿಸಿ ಹ್ಯೂಸ್ಗೆ ತಂಡದ ವೈದ್ಯರು ಬೌಂಡರಿ ಲೈನ್ನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಇದರಿಂದ ಚೇತರಿಸಿಕೊಳ್ಳದ ಹ್ಯೂಸ್ನ್ನು ಹೆಲಿಕಾಪ್ಟರ್ ಆ್ಯಂಬುಲೆನ್ಸ್ನಲ್ಲಿ ಸೈಂಟ್ ವಿನ್ಸೆಂಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದರೂ, ಅವರ ಆರೋಗ್ಯದ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿಲ್ಲ.
ಹ್ಯೂಸ್ ಗಾಯಗೊಂಡ ಘಟನೆಯ ಬಳಿಕ ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್ನಲ್ಲಿ ನಿಗದಿಯಾಗಿರುವ ಎರಡು ಪಂದ್ಯಗಳನ್ನು ರದ್ದುಪಡಿಸಲಾಗಿದೆ.
ಹಳೆ ಮಾದರಿ ಹೆಲ್ಮೆಟ್: ಹ್ಯೂಸ್ ಬ್ಯಾಟಿಂಗ್ ನಡೆಸುವ ವೇಳೆ ಇತ್ತೀಚೆಗೆ ತಯಾರಾಗಿರುವ ಹೆಲ್ಮೆಟ್ ಧರಿಸದೆ ಹಳೆಯ ವಿನ್ಯಾಸದ ಹೆಲ್ಮೆಟ್ ಧರಿಸಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ಮೂಲದ ಹೆಲ್ಮೆಟ್ ತಯಾರಿಕಾ ಕಂಪೆನಿ ಮಸ್ಸುರಿ ತಯಾರಿಸಿರುವ ಹೆಲ್ಮೆಟ್ನ್ನು ಹ್ಯೂಸ್ ಧರಿಸಿದ್ದರು. ಆದರೆ ಈ ಹೆಲ್ಮೆಟ್ ತಲೆ ಹಾಗೂ ಕುತ್ತಿಗೆಯನ್ನು ಪೂರ್ಣವಾಗಿ ರಕ್ಷಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಮನೋರಂಜನೆ
