ಕುಂದಾಪುರ: ಸಂಘಟನೆ ಹುಟ್ಟು ಹಾಕಲು ಮಾತ್ರ ಸೀಮಿತವಾಗಿರದೇ ತಮ್ಮ ಸಂಘಟನೆಯ ಸದಸ್ಯರ ಏಳಿಗೆಗಾಗಿ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವ ಕುರಿತು ಚಿಂತನೆ ಮಾಡುವ ಅಗತ್ಯವಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಶನಿವಾರ ಗೋಳಿಹೊಳೆ ಶ್ರೀಮಹಿಷಮರ್ದಿನಿ ಸಭಾಭವನದಲ್ಲಿ ನಡೆದ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಶ್ರೀವಿನಾಯಕ ಆಟೋರಿಕ್ಷಾ, ಗೂಡ್ಸ್, ಟೆಂಪೋ ಮತ್ತು ಟ್ಯಾಕ್ಸಿ ಚಾಲಕ ಮಾಲಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ಜೀವನ ನಿರ್ವಹಣೆಗಾಗಿ ಹೋರಾಟ ಮಾಡುವ ರಿಕ್ಷಾ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿರುವುದು ಕಾಣುತ್ತಿದ್ದೇವೆ. ದೇಶದಲ್ಲಿ ಅಪಘಾತದಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವ ಈ ಕಾಲಘಟ್ಟದಲ್ಲಿ ಸರಿಯಾದ ಕ್ರಮದಲ್ಲಿ ವಾಹನ ಚಾಲನೆ ಮಾಡುವುದರ ಮೂಲಕ ತಮ್ಮೊಂದಿಗೆ ಸಾರ್ವಜನಿಕರ ರಕ್ಷಣೆಯ ಕಾಳಜಿಯನ್ನು ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಂಘಟನೆಯಿಂದ ಜನಜಾಗೃತಿ, ಆರ್ಥಿಕ ಸ್ಥಿತಿ ಮತ್ತು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ. ರಿಕ್ಷಾ ಚಾಲಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದ್ದು, ಇದಕ್ಕೆ ಸರಕಾರ ಕೂಡಾ ಸ್ಪಂದಿಸಿ ಕೆಲವರು ಈಗಾಗಲೇ ಇದರ ವ್ಯಾಪ್ತಿಗೆ ಬಂದಿರುವುದಾಗಿ ತಿಳಿಸಿದರು. ಚಾಲಕರ ಸಂಘಟನೆಯು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ತಮ್ಮದೇ ಆದ ಸೊಸೈಟಿಯನ್ನು ತೆರೆದು ಹಣಕಾಸಿನ ವ್ಯವಹಾರದ ಮೂಲಕ ತಮ್ಮ ಸದಸ್ಯರಿಗೆ ಬೆಂಬಲ ನೀಡಿದಾಗ ಉದ್ಯೋಗ ಮತ್ತು ಉದ್ಯಮ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿ ಹಾಗೂ ಕಡುಬಡವರು ಸಾಗಾಟಕ್ಕೆ ರಿಕ್ಷಾವನ್ನು ಅವಲಂಬಿಸಿದ್ದಾರೆ. ಹಾಗಾಗಿ ಚಾಲಕ ವೃತ್ತಿ ಜೀವನದಲ್ಲಿ ಮಾನವೀಯತೆ ಇರಲಿ ಎಂದರು.
ಕುಂದಾಪುರ ಚಿನ್ಮಯಿ ಆಸ್ಪತ್ರೆ ವೈದ್ಯ ಡಾ. ದಿನೇಶ್ ಕುಮಾರ್ ಶೆಟ್ಟಿ, ವಕೀಲ ಶಶಿಧರ ಹೆಗ್ಡೆ, ಬೈಂದೂರು ಠಾಣಾಧಕಾರಿ ಸಂತೋಷ್ ಕಾಯ್ಕಿಣಿ, ಗೋಳಿಹೊಳೆ ನೇತ್ರಾವತಿ ಗ್ರಾಮೀಣ ವಿಕಾಸ ಬ್ಯಾಂಕಿನ ಶಾಖಾಪ್ರಭಂಧಕ ಸುಬ್ರಹ್ಮಣ್ಯ ಭಟ್, ಜಿಲ್ಲಾ ಟ್ಯಾಕ್ಸಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಮೇಶ ಕೊಟ್ಯಾನ್, ಬೈಂದೂರು ಟೆಂಪೋ ಮತ್ತು ಟ್ಯಾಕ್ಸಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ ಬಟವಾಡಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸಸಿಹಿತ್ಲು ಮಂಜು ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ನಾಯ್ಕ್ ವಂದಿಸಿದರು. ನಂತರ ಮಂಜುನಾಥ ಕುಂದೇಶ್ವರರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.

