ಮಂಗಳೂರು, ಅ.19: ಸಮುದಾಯದ ಅನಾಥ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕುಟುಂಬದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲುಎಫ್)ನ ಐದನೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಲಿ ಅಥವಾ ಏನನ್ನಾ ದರೂ ಕೊಡುವ ಮತ್ತು ತೆಗೆದು ಕೊಳ್ಳುವ ಪದ್ಧತಿ ಇಸ್ಲಾಮ್‌ನಲ್ಲಿಲ್ಲ. ಇದೆಲ್ಲ ನಾವೇ ಸೃಷ್ಟಿಸಿಕೊಂಡದ್ದು. ವರದಕ್ಷಿಣೆ ಪಿಡುಗು ನಿವಾರಿಸುವ ಉದ್ದೇಶದಿಂದ ಸಾಮೂಹಿಕ ಮದುವೆಗಳು ನಡೆಯುತ್ತಿವೆ. ಅದಕ್ಕಿಂತ ಹೆಚ್ಚಾಗಿ ಈ ವಿಷಯದಲ್ಲಿ ಯುವಕರಲ್ಲಿ ಜಾಗೃತಿ ಮೂಡ ಬೇಕಿದೆ. ಮುಸ್ಲಿಂ ಸಮುದಾಯದ ಬಡಕುಟುಂಬಗಳ ನೆಮ್ಮದಿಗಾಗಿ ವರದಕ್ಷಿಣೆ ಪಿಡುಗು ನಿವಾರಿಸಬೇಕಿದೆ ಎಂದು ಕರೆ ನೀಡಿದರು. ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ನಿಕಾಹ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ 17 ಜೋಡಿಗಳಿಗೆ ವಿವಾಹ ನೆರವೇರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಚಿವ ಯು.ಟಿ. ಖಾದರ್ ಮಾತ ನಾಡಿ, ಹಿರಿಯರ ತ್ಯಾಗ ಮತ್ತು ಅವರ ವ್ಯಕ್ತಿತ್ವ ಸಮುದಾಯದ ಆಸ್ತಿಯಾಗಿದೆ. ಆದುದರಿಂದ ಯುವಕರು ಹಿರಿಯರ ಮಾರ್ಗದರ್ಶನ ಪಡೆದು ಸಾಮರಸ್ಯ ಮತ್ತು ನೆಮ್ಮದಿಯ ಬದುಕು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಬಿಡಬ್ಲುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ‘ಬ್ಯಾರೀಸ್’ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಂಗಳೂರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಬಿ.ಎಂ.ಫಾರೂಕ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುಹಮ್ಮದ್ ಬದ್ರುದ್ದೀನ್, ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್.ಇಬ್ರಾಹೀಂ ಕಮ್ಮಾಡಿ, ದುಬೈಯ ಉದ್ಯಮಿ ಥೋಮಸ್ ಡಿಸೋಜ, ಕೃಷ್ಣಾಪುರ ಅಲ್‌ಬದ್ರಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಮ್ತಾಝ್ ಅಲಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಮಿತ್ತೂರು ಉಸ್ಮಾನ್ ಹಾಜಿ, ಹಾಜಿ ಜಿ. ಅಬ್ದುಲ್ ಖಾದರ್, ಹೈದರ್ ಪರ್ತಿಪ್ಪಾಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಡಬ್ಲುಎಫ್‌ನ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿಗಳಾದ ಸಿದ್ದೀಕ್ ಉಚ್ಚಿಲ್ ಸಂಘಟನೆಯ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ, ಮುಖ್ಯ ಸಲಹೆಗಾರ ಬಶೀರ್ ಬಜ್ಪೆ ಸಂಸ್ಥೆಯ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಇಮ್ರಾನ್ ಅಹ್ಮದ್ ಕುದ್ರೋಳಿ ವಂದಿಸಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.




































