ಕುಂದಾಪುರ: ಮೀನುಗಾರರ ಬಹುನಿರೀಕ್ಷಿತ ಗಂಗೊಳ್ಳಿ ಅಳಿವೆ ಹೂಳೆತ್ತುವ ಕಾರ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂಬ ಅಂಶ ಹೊರಬಿದ್ದಿದ್ದು, ಡ್ರಜ್ಜಿಂಗ್ ಕಾರ್ಯಕ್ಕೆ ಮತ್ತಷ್ಟು ದಿನ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಶುಕ್ರವಾರ ಗಂಗೊಳ್ಳಿ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳು ಮೀನುಗಾರರೊಂದಿಗೆ ಚರ್ಚೆ ನಡೆಸುತ್ತಿದ್ದ ಸಂದರ್ಭ ಈ ಅಂಶ ಬಹಿರಂಗಗೊಂಡಿದೆ.
ಗಂಗೊಳ್ಳಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತಲು 2007 ರಲ್ಲಿ ರಾಜ್ಯ ಸರಕಾರದ ಮೂಲಕ ಗುತ್ತಿಗೆ ಪಡೆದಿದ್ದ ಮೀನ್ಸ್ ಇನ್‌ಫ್ರಾ ಸಂಸ್ಥೆ ಹೂಳೆತ್ತುವ ಕಾರ್ಯ ನಡೆಸಲು ಸಾಧ್ಯವಿಲ್ಲ ಎಂದು ತೆರಳಿದ ಪರಿಣಾಮ ಸೀ ಈಗಲ್ ಸಂಸ್ಥೆ ರಾಜ್ಯದ ಹಂಗಾರಕಟ್ಟೆ, ಕೋಡಿಬೆಂಗ್ರೆ, ಗಂಗೊಳ್ಳಿ ಹಾಗೂ ಭಟ್ಕಳ ಅಳಿವೆಗಳ ಹೂಳೆತ್ತುವ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಸುಮಾರು 1.95 ಕೋಟಿ ರೂ. ವೆಚ್ಚದ ಈ ಯೋಜನೆ ಕಾರ್ಯಗತಗೊಂಡಿರಲಿಲ್ಲ. ಇದೀಗ ಹೂಳೆತ್ತುವ ಗುತ್ತಿಗೆ ಪಡೆದುಕೊಂಡಿದ್ದ ಸೀಈಗಲ್ ಕಂಪೆನಿ ಗಂಗೊಳ್ಳಿ ಅಳಿವೆಯಲ್ಲಿ ಹೂಳೆತ್ತಲು ಸಾಧ್ಯವಿಲ್ಲ ಎಂಬ ಹೊಸ ರಾಗ ಎಳೆದಿದ್ದು, ಇಲಾಖೆ ಮತ್ತೊಮ್ಮೆ ಪೇಚಿಗೆ ಸಿಲುಕಿದೆ.
2007ರಲ್ಲಿ ನಿಗದಿಪಡಿಸಿದ ಅನುದಾನದಿಂದ ಈಗ ಅಳಿವೆ ಹೂಳೆತ್ತುವ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಸರಕಾರದ ನಿಗದಿಪಡಿಸಿದಂತೆ ನಿಗದಿತ ಪ್ರಮಾಣದ ಹೂಳೆತ್ತಿದರೆ ಯಾವುದೇ ಪ್ರಯೋಜನವಿಲ್ಲ. ಹೂಳೆತ್ತಿದ ಪ್ರದೇಶದಲ್ಲಿ ಮತ್ತಷ್ಟು ಹೂಳು ಶೇಖರಣೆಗೊಳ್ಳುವ ಸಾಧ್ಯತೆ ಇದೆ ಅಲ್ಲದೆ ಅಳಿವೆಯಲ್ಲಿ ಪರಿಸ್ಥಿತಿ ಭಿನ್ನವಾಗಿರುವುದರಿಂದ ಅಲ್ಲಿ ನಿಂತು ಹೂಳೆತ್ತುವುದು ಕಷ್ಟಸಾಧ್ಯ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಅಳಿವೆಯಲ್ಲಿ ಹೂಳೆತ್ತಿದರೆ ಯಾವುದೇ ಪ್ರಯೋಜನವಿಲ್ಲ. ತಿಂಗಳಿನಲ್ಲಿ ಸುಮಾರು ೭-೯ ದಿನ ಹೂಳೆತ್ತಿ ಉಳಿದ ದಿನ ಸುಮ್ಮನೆ ಕುಳಿತುಕೊಂಡರೆ ನಮಗೆ ಯಾವುದೇ ಪ್ರಯೋಜನವಿಲ್ಲ. ನಮ್ಮನ್ನು ಬೇಕಾದರೆ ಕಪ್ಪುಪಟ್ಟಿಗೆ ಸೇರಿಸಲಿ ಎಂದು ಈ ಕೆಲಸದಿಂದ ಹಿಂದೆ ಸರಿಯಲು ಗುತ್ತಿಗೆ ಪಡೆದುಕೊಂಡಿರುವ ಸೀಈಗಲ್ ಕಂಪೆನಿ ನಿರ್ಧಾರಕ್ಕೆ ಬಂದಿದೆ.
ಗುತ್ತಿಗೆ ಪಡೆದುಕೊಂಡಿದ್ದ ಕಂಪೆನಿಯ ನಿರ್ಧಾರಕ್ಕೆ ಸಂಬಂಧಪಟ್ಟ ಇಲಾಖೆ ದನಿಗೂಡಿಸಿದ್ದು, ಸರಕಾರದ ಮೀಸಲಿರಿಸಿರುವ ಅನುದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಅಳಿವೆಯಲ್ಲಿ ಹೂಳೆತ್ತುವ ಕಾರ್ಯ ನಡೆಸುವುದು ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಅಳಿವೆಯಲ್ಲಿ ಹೂಳೆತ್ತಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಪುನ: ಸರ್ವೆ ನಡೆಸಿ ಆ ಬಳಿಕ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ ಅಲ್ಲದೆ ಅನುದಾನ ಕಡಿಮೆ ಎಂದು ಹೂಳೆತ್ತುವ ಕಾರ್ಯದಿಂದ ಹಿಂದೆ ಸರಿಯದಂತೆ ಗುತ್ತಿಗೆ ಪಡೆದುಕೊಂಡಿರುವ ಸೀಈಗಲ್ ಕಂಪೆನಿಯ ಮನವೊಲಿಸಿ ಅವರಿಂದಲೇ ಹೂಳೆತ್ತುವ ಕಾರ್ಯ ನಡೆಸಲು ಇಲಾಖೆ ಪ್ರಯತ್ನ ಮುಂದುವರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದಿನ ಸುಮಾರು 4-5 ತಿಂಗಳಿನಲ್ಲಿ ಬ್ರೇಕ್ ವಾಟರ್ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿದ್ದು, ಬ್ರೇಕ್ ವಾಟರ್ ಕಾಮಗಾರಿ ವೇಳೆ ಅಳಿವೆ ಪ್ರದೇಶದಲ್ಲಿ ಪೂರ್ಣಪ್ರಮಾಣದ ಹೂಳೆತ್ತುವ ಕಾರ್ಯ ನಡೆಸಿದರೆ ಉತ್ತಮ ಎಂಬ ಇಲಾಖಾಧಿಕಾರಿಗಳ ಅಭಿಪ್ರಾಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಮೀನುಗಾರರು, ಐದಾರು ತಿಂಗಳ ಬಳಿಕ ಕಾಮಗಾರಿ ಆರಂಭವಾಗುವುದರೊಳಗೆ ಮತ್ತೊಮ್ಮೆ ಮಳೆಗಾಲ ಪ್ರಾರಂಭವಾಗುತ್ತದೆ. ಮತ್ತೊಂದು ಮೀನುಗಾರಿಕಾ ಋತುವಿಲ್ಲಿಯೂ ಅಳಿವೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಕಷ್ಟ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು ಐದು ಬೋಟ್, ದೋಣಿ ದುರಂತ ಸಂಭವಿಸಿದೆ. ಹೀಗಾಗಿ ತುರ್ತಾಗಿ ಅಳಿವೆಯಲ್ಲಿ ಹೂಳೆತ್ತುವ ಕಾರ್ಯ ನಡೆಸಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಮೀನುಗಾರರ ಬೇಡಿಕೆಗೆ ಸ್ಪಂದಿಸಿದ ಅಧಿಕಾರಿಗಳು ಈ ಸಂಬಂಧ ಕೂಡಲೇ ಸರ್ವೇ ನಡೆಸಿ ಹೂಳೆತ್ತುವ ಬಗ್ಗೆ ಸರಕಾರದಿಂದ ಹೆಚ್ಚುವರಿ ಅನುದಾನ ಪಡೆಯುವ ಹಾಗೂ ಅಳಿವೆ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಎಲ್ಲಾ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಥೋಡ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್, ಇಂಜಿನಿಯರ್ ಲವೀಶ್, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಸೀಈಗಲ್ ಕಂಪೆನಿಯ ಭಗವಾನ್ ಹಾಗೂ ಮೀನುಗಾರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
