ಕರಾವಳಿ

ನಗರದ ಮೊಬೈಲ್‌ ಫೋನ್‌ ವಿತರಕರಿಗೆ ರಾಜಸ್ಥಾನದ ಡೀಲರ್‌ಗಳಿಂದ 40 ಲಕ್ಷ ರೂ. ವಂಚನೆ

Pinterest LinkedIn Tumblr

Mobile_Deelar_Cheeting

ಮಂಗಳೂರು,ಅ.16 : ನಗರದ ಮೊಬೈಲ್ ಉದ್ಯಮಿಗಳಿಗೆ ರಾಜಸ್ಥಾನದ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾಜಸ್ಥಾನದ ಬಾಬುಲಾಲ್‌ ಮತ್ತು ಅರ್ಜುನ್‌ ಎಂಬ ಇಬ್ಬರು ಡೀಲರ್‌ಗಳು ನಗರದ ಮೊಬೈಲ್‌ ಫೋನ್‌ ವಿತರಕರಾದ ಗುರುದತ್ತ ಕಾಮತ್‌ ಹಾಗೂ ಮತ್ತಿತರರಿಗೆ ಮೋಸ ಮಾಡಿ ಸುಮಾರು 40 ಲಕ್ಷ ರೂ. ಗಳಷ್ಟು ವಂಚನೆ ಎಸಗಿರುವ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುರುದತ್ತ ಕಾಮತ್‌ ಅವರು ಮೈಕ್ರೊ ಮ್ಯಾಕ್ಸ್‌ ಮತ್ತು ಜಿಯೋನಿ ಎಂಬ ಸಂಸ್ಥೆಯ ಮೊಬೈಲ್‌ ವಿತರಕರಾಗಿ ಕೆಲಸ ಮಾಡುತ್ತಿದ್ದು, ಕಳೆದ 4 ತಿಂಗಳಿಂದ ನಗರದ ಮೈದಾನ್‌ ಉತ್ತರ ರಸ್ತೆಯ ಸಿಟಿ ಟವರ್‌ನಲ್ಲಿರುವ ಬಾಬುಲಾಲ್‌ ಮತ್ತು ಅರ್ಜುನ್‌ ಅವರ ಮಯೂರ್‌ ಎಂಟರ್‌ಪ್ರೈಸಸ್‌ ಎಂಬ ಹೋಲ್‌ಸೇಲ್‌ ಮಳಿಗೆಗೆ ಮೊಬೈಲ್‌ ಫೋನ್‌ ಸೆಟ್‌ಗಳನ್ನು ಪೂರೈಕೆ ಮಾಡುತ್ತಿದ್ದರು. ಎರಡು ತಿಂಗಳು ಕಾಲ ಕಂಪೆನಿಯ ನಿಯಮದಂತೆ ನಗದು ಪಾವತಿಸಿ ವ್ಯವಹಾರ ನಡೆಸಿದ್ದು, ಬಳಿಕ ಎರಡು ತಿಂಗಳಿಂದ ಸರಬರಾಜು ಮಾಡಿದ ಮೊಬೈಲ್‌ಗ‌ಳ ಹಣವನ್ನು ಚೆಕ್‌ ರೂಪದಲ್ಲಿ ಪಾವತಿಸಿದ್ದರು. ಆದರೆ ಅವರು ನೀಡಿದ ಚೆಕ್‌ ಅಮಾನ್ಯಗೊಂಡಿದ್ದು, ಗುರುದತ್ತ ಕಾಮತ್‌ ಅವರಿಗೆ 2,38,000 ರೂಪಾಯಿ ಬರ ಬೇಕಾಗಿದೆ. ಇದೀಗ ಬಾಬುಲಾಲ್‌ ಮತ್ತು ಅರ್ಜುನ್‌ ತಮ್ಮ ಮಳಿಗೆಯನ್ನು ಬಂದ್‌ ಮಾಡಿದ್ದಲ್ಲದೆ ತಮ್ಮ ಮೊಬೈಲ್‌ ಫೋನನ್ನು ಸ್ವಿಚ್‌ ಆಫ್‌ ಮಾಡಿದ್ದಾರೆ.

ಅಲ್ಲದೆ ಗುರುದತ್ತ ಕಾಮತ್‌ ಅವರ ಸ್ನೇಹಿತರಾದ ಶ್ರೀ ಎಂಟರ್‌ಪ್ರೈಸಸ್‌ನ ರಂಜಿತ್‌, ಎಸ್ಟ್ರಾ ಲೈಫ್‌ ಸೊಲ್ಯೂಶನ್ಸ್‌ನ ರವಿ ಕೆ.ಬಿ., ಪದ್ಮಾ ಎಂಟರ್‌ಪ್ರೈಸಸ್‌ನ ರಾಕೇಶ್‌ ಶೆಟ್ಟಿ, ಆರ್ವೀಸ್‌ಏಜಿನ್ಸಿಸ್‌ನ ರಿಚಾರ್ಡ್‌ ರಸ್ಕಿನ್ಹಾ, ಗ್ರೀನ್ಸ್‌ ಎಂಟರ್‌ಪ್ರೈಸಸ್‌ನ ಜೀವನ್‌ ಅವರಿಗೂ ಆರೋಪಿಗಳು ದ್ರೋಹ ಎಸಗಿದ್ದು, ಒಟ್ಟು 40 ಲಕ್ಷ ರೂ. ಮೋಸ ಮಾಡಿ ಪರಾರಿಯಾಗಿರುವ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು,ಪ್ರಕರಣ ದಾಖಲಾಗಿದೆ.

Write A Comment