ಕರಾವಳಿ

ಸ್ವಚ್ಛ ಭಾರತ ನಿರ್ಮಿಸುವವರಿಗೆ ಸ್ವಚ್ಛ ಹೃದಯವಿದೆಯೇ-ಪಿ.ಸಂಜೀವ

Pinterest LinkedIn Tumblr

CPIM_1

ಮಂಗಳೂರು, ಅ.16: ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಬಣ್ಣ ಬಣ್ಣದ ಆಶ್ವಾಸನೆಗಳೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದು ನಂತರದ ದಿನಗಳಲ್ಲಿ ದೇಶದ ಜನತೆಗೆ ಮೋಸ ಮಾಡಿದೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚಲು ಸ್ವಚ್ಛ ಭಾರತ ನಿರ್ಮಾಣದ ನೆಪವೊಡ್ಡಿ ಜಾಹಿರಾತಿನಲ್ಲಿ ಮಿಂಚುವ ಮೋದಿಗೆ ಈ ದೇಶದ ಬಡತನ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನವಿಲ್ಲ, ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ನಿರ್ಮಾಣ ಮಾಡಲು ಹೊರಟ ಇವರಿಗೆ ಸ್ವಚ್ಛ ಹೃದಯವಿದೆಯೇ ಎಂದು ಸಿಪಿ‌ಐ ಜಿಲ್ಲಾ ಕಾರ್ಯದರ್ಶಿ  ಪಿ.ಸಂಜೀವ ಟೀಕಿಸಿದರು.

CPIM_2

ಅವರು ಇಂದು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ಭಾರತ ಕಮ್ಯೂನಿಸ್ಟ್ ಪಕ್ಷ(ಸಿ.ಪಿ.ಐ)ದ ರಾಷ್ಟ್ರವ್ಯಾಪಿ ಚಳುವಳಿಯ ಅಂಗವಾಗಿ ಪಕ್ಷದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಜರುಗಿದ ಬೆಲೆಯೇರಿಕೆ ವಿರೋಧಿಸಿ ಪ್ರತಿಭಟನಾ ಚಳುವಳಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದೆರಡು ಬಾರಿ ಪೆಟ್ರೋಲ್ ಹಾಗೂ ಒಂದು ಬಾರಿ ಡೀಸೆಲ್ ಬೆಲೆ ಇಳಿಕೆ ಕಂಡಿರಬಹುದು ಆದರೆ ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಸಲು ಈ ಸರಕಾರಕ್ಕೆ ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಸರಕಾರ ಕೂಡಾ ಕೇಂದ್ರಕ್ಕೆ ಹೊರತಾಗಿಲ್ಲ ಎಂದ ಅವರು ನಿವೇಶನ ರಹಿತ ಭೂಹೀನರಿಗೆ ನೀಡಬೇಕಾಗಿದ್ದ ಸರಕಾರಿ ಜಮೀನನ್ನು ರಾಜಕಾರಣಿಗಳು ಕಬಳಿಸುವ ಮೂಲಕ ರಾಜ್ಯದ ಜನತೆಗೆ ಅನ್ಯಾಯ ಎಸಗಲಾಗಿದೆ. ಇಂತಹ ಭ್ರಷ್ಟರು ಎಷ್ಟರ ಮಟ್ಟಿಗೆ ಈ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಈ ರಾಜ್ಯದ ಮುಖ್ಯಮಂತ್ರಿಗೆ ಇದು ಯಾವುದರ ಪರಿವೆಯೇ ಇಲ್ಲದಂತೆ ಮೌನ ವಹಿಸಿರುವುದು ಖಂಡನೀಯ ಎಂದರು.

CPIM_3

ಅನಂತರ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಕುಕ್ಯಾನ್ ಮಾತನಾಡುತ್ತಾ ಮೋದಿ ಸರಕಾರ ಅಧಿಕಾರಕ್ಕೆ ಬಂದ ಸನಿಹದಲ್ಲೇ ನಮ್ಮ ಜಿಲ್ಲೆಯವರೇ ಆದ ಮಾನ್ಯ ರೈಲ್ವೇ ಮಂತ್ರಿ ಸದಾನಂದ ಗೌಡ ಅವರು ರೈಲ್ವೆ ಟಿಕೇಟು ದರ ಏರಿಸುವ ಮೂಲಕ ಬೆಲೆಯೇರಿಕೆಯನ್ನು ಮಾಡಿರುವುದು ಗೊತ್ತಿದೆ. ಚುನಾವಣೆಗೆ ಮುನ್ನ ಇದೇ ಬಿಜೆಪಿಯವರು ಅಬ್ಬರ ಪ್ರಚಾರದೊಂದಿಗೆ ಮೋದಿಗೆ ಅಧಿಕಾರ ಕೊಡಿ ನಾವು ಯು.ಪಿ.ಎ 60 ವರ್ಷದಲ್ಲಿ ಮಾಡದ ಸಾಧನೆಯನ್ನು 60 ದಿನದಲ್ಲಿ ಮಾಡುತ್ತೇವೆ.

CPIM_4

ವಿದೇಶದಲ್ಲಿರುವ ಕಪ್ಪು ಹಣವನ್ನು ತರಿಸುತ್ತೇವೆ ಎಂದೆಲ್ಲ ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ನಂತರ ಸರ್ವಾಧಿಕಾರಿ ಧೋರಣೆ ತಳೆದಿರುವುದು ತೀರಾ ಖಂಡನೀಯ ಎಂದರು. ಅಡುಗೆ ಅನಿಲ ದರ ಕಡಿಮೆ ಮಾಡುತ್ತೇವೆ ಹಾಗೂ ಸಬ್ಸಿಡಿಗೆ ಆಧಾರ್ ಗುರುತು ಕಾರ್ಡು ಅಗತ್ಯವಿಲ್ಲ ಎಂದ ಕೇಂದ್ರ ಸರಕಾರ ಇದೀಗ ಅನಿಲ ದರ ಕಡಿಮೆ ಮಾಡದೆ ಸಬ್ಸಿಡಿಗೆ ಆಧಾರ್ ಕಡ್ಡಾಯಕ್ಕೆ ಒತ್ತಾಯಿಸುತ್ತಿದೆ. ಸರಕಾರ ಮಂಡಿಸಿದ ಬಜೆಟ್ ಕೈಗಾರಿಕೆ ಉದ್ಯಮಿಗಳಿಗೆ ವರದಾನವಾಗಿದೆ. ಸುಮಾರು 60 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಬುಲೆಟ್ ಟ್ರೈನ್ ನಿರ್ಮಿಸುವುದಾದರು ಯಾರ ಹಿತಕ್ಕಾಗಿ ಎಂದು ಪ್ರಶ್ನಿಸಿದ ಅವರು ಮೋದಿಯ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.

ಪ್ರತಿಭಟನಾ ಪ್ರದರ್ಶನಕ್ಕೆ ಮುನ್ನ ಪುರಭನದ ಬಳಿಯಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಮೆರವಣಿಗೆ ನಡೆಸಿ ಬೆಲೆಯೇರಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಲಾಯಿತು.

CPIM_5

ಎ‌ಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್, ಪಕ್ಷದ ಜಿಲ್ಲಾ ಕಾರ್‍ಯಕಾರಿ ಸಮಿತಿ ಸದಸ್ಯರುಗಳಾದ ಆರ್.ಡಿ.ಸೋನ್ಸ್, ಪ್ರಭಾಕರ್ ರಾವ್, ಪಕ್ಷದ ಜಿಲ್ಲಾ ಮಂಡಳಿ ಸದಸ್ಯರುಗಳಾದ ಸುರೇಶ್ ಕುಮಾರ್, ಡಿ.ಹೆನ್ರಿ ಲೋಬೋ, ಕೆ.ಈಶ್ವರ್, ಎಂ.ಕರುಣಾಕರ್, ಸುಲೋಚನಾ, ಚಿತ್ರಾಕ್ಷಿ, ಸರಸ್ವತಿ ಕಡೇಶಿವಾಲಯ, ಕವಿತಾ ಇರಾ, ಹಾಜಿರಾ ಇರಾ, ದಯಾವತಿ, ಮಲ್ಲಿಕಾ, ಶಿವಪ್ಪ ಕೋಟ್ಯಾನ್, ಜಯಂತ ಮೆರವಣಿಗೆ ನೇತೃತ್ವ ವಹಿಸಿದ್ದರು.

ಪ್ರಾರಂಭದಲ್ಲಿ ಸಿಪಿ‌ಐ ಮಂಗಳೂರು ತಾಲೂಕು ಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕೊನೆಯಲ್ಲಿ ಬಂಟ್ವಾಳ ಕಾರ್ಯದರ್ಶಿ ಬಿ.ಶೇಖರ್ ವಂದಿಸಿದರು.

Write A Comment