ಜೊಹೊರ್ ಬಹ್ರು(ಮಲೇಷ್ಯಾ), ಅ.13: ಇಲ್ಲಿ ಇಂದು ನಡೆದ ಸುಲ್ತಾನ್ ಆಫ್ ಜೊಹೊರ್ ಕಪ್ ಹಾಕಿ ಟೂರ್ನಮೆಂಟ್ನಲ್ಲಿ ಭಾರತದ ಅಂಡರ್-21 ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ 0-2 ಅಂತರದ ಸೋಲು ಅನುಭವಿಸಿದೆ.
ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ 5-0 ಅಂತರದಲ್ಲಿ ಜಯ ಗಳಿಸಿದ ಬ್ರಿಟನ್ ಸತತ ಎರಡನೆ ಗೆಲುವು ದಾಖಲಿಸಿದೆ.
ಇಂದು ಜೊಹೊರ್ ಬಹ್ರು ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತಕ್ಕೆ ಬ್ರಿಟನ್ ವಿರುದ್ಧ ಏಕೈಕ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಬೆಂಜಮಿನ್ ಬೂನ್(28ನೆ ನಿಮಿಷ) ಮತ್ತು ಸ್ಯಾಮುಯೆಲ್ ಫ್ರೆಂಚ್(49ನೆ ನಿಮಿಷ) ಗೋಲು ದಾಖಲಿಸಿ ಬ್ರಿಟನ್ಗೆ ಗೆಲುವು ತಂದುಕೊಟ್ಟರು.
ಭಾರತ ತಂಡದ ಗೋಲು ಕೀಪರ್ ಅಭಿನವ್ ಕುಮಾರ್ ಪಾಂಡೆ ತಂಡದ ಸಹ ಆಟಗಾರರಿಂದ ಸೂಕ್ತ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿ ಬ್ರಿಟನ್ಗೆ ಎರಡು ಬಾರಿ ಗೋಲು ಗಳಿಸಲು ಅವಕಾಶ ನೀಡಿದರು. ಭಾರತ ರಕ್ಷಣೆಯಲ್ಲಿ ಮುಗ್ಗರಿಸಿದ್ದು ಬ್ರಿಟನ್ನ ಗೆಲುವಿಗೆ ನೆರವಾಯಿತು.
ಭಾರತ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 2-1 ಗೆಲುವು ದಾಖಲಿಸಿತ್ತು. ಮುಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
