ಮನೋರಂಜನೆ

ಮೇರಿ ಕೋಮ್ ಏಷ್ಯನ್ ಗೇವ ್ಸನ ‘ವೌಲ್ಯಯುತ ಆಟಗಾರ್ತಿ’

Pinterest LinkedIn Tumblr

asiad-medal-winnersಹೊಸದಿಲ್ಲಿ, ಅ.13: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಹಿರಿಯ ಬಾಕ್ಸರ್ ಮೇರಿ ಕೋಮ್ ಇತ್ತೀಚೆಗೆ ನಡೆದ ಇಂಚೋನ್ ಏಷ್ಯನ್ ಗೇಮ್ಸ್ ಅಭಿಯಾನದಲ್ಲಿ ಭಾರತದ ವೌಲ್ಯಯುತ ಆಟಗಾರ್ತಿ ಆಗಿ ಆಯ್ಕೆಯಾಗಿದ್ದಾರೆ. ಮೇರಿ ಕೋಮ್ ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ಪ್ಲೈವೇಟ್(-51ಕೆಜಿ) ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದರು.

ವೈಯಕ್ತಿಕ ವಿಭಾಗ(11) ಹಾಗೂ ಪುರುಷರ ಹಾಕಿ ಸೇರಿದಂತೆ ಟೀಮ್ ವಿಭಾಗದಲ್ಲಿ ಚಿನ್ನ ಜಯಿಸಿದ ಅಥ್ಲೀಟ್‌ಗಳಲ್ಲಿ ವೌಲ್ಯಯುತ ಆಟಗಾರ್ತಿಯನ್ನು ಸ್ಯಾಮ್‌ಸಂಗ್ ಇಂಡಿಯಾ ನಡೆಸಿದ್ದ ಮತದಾನದ ಮೂಲಕ ಆಯ್ಕೆ ಮಾಡಲಾಗಿದ್ದು ಈ ಸ್ಪರ್ಧೆಯಲ್ಲಿ ಮೇರಿಗೆ ಹೆಚ್ಚು ಮತಗಳು ಲಭಿಸಿದ್ದವು. ಇಂದು ಇಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಅಥ್ಲೀಟ್‌ಗಳ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಸ್ಯಾಮ್‌ಸಂಗ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೇಮ್ಸ್ ಪದಕ ವಿಜೇತರನ್ನು ಸನ್ಮಾನಿಸಲಾಯಿತು. ಚಿನ್ನ ಜಯಿಸಿದ್ದ ಪುರುಷರ ಹಾಕಿ ತಂಡ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರತಿನಿಧಿಯಾಗಿ ಅನಿಲ್ ಖನ್ನಾ ಆಗಮಿಸಿದ್ದರು.

ಸನ್ಮಾನ ಕಾರ್ಯಕ್ರಮದಲ್ಲಿ ಕುಸ್ತಿಪಟು ಯೋಗೇಶ್ವರ ದತ್ತ್, ಪಿಸ್ತೂಲ್ ಶೂಟರ್ ಜಿತು ರಾಯ್, ಡಿಸ್ಕಸ್ ಎಸೆತಗಾರ್ತಿ ಸೀಮಾ ಪೂನಿಯಾ, 4-400 ಮೀ. ರಿಲೇ ಯಲ್ಲಿ ಚಿನ್ನ ಜಯಿಸಿದ್ದ ರನ್ನರ್, ಕನ್ನಡತಿ ಎಂ.ಆರ್. ಪೂವಮ್ಮ ಹಾಜರಿದ್ದರು. ‘‘ಮೂವರು ಮಕ್ಕಳ ತಾಯಿ ಆಗಿರುವ ನಾನು ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಕುರಿತು ಹಲವರಿಗೆ ಸಂಶಯವಿತ್ತು. ಮಹಿಳೆ ತಾಯಿಯಾದ ನಂತರ ಕ್ರೀಡೆಯಲ್ಲಿ ಮುಂದುವರಿಯಬಾರದು ಎಂಬ ಮನಸ್ಥಿತಿ ಎಲ್ಲರಲ್ಲಿದೆ. ನಾನು ಈ ಮನಸ್ಥಿತಿ ತಪ್ಪು ಎಂದು ಸಾಬೀತುಪಡಿಸಿದ್ದೇನೆ.ಈ ಬಾರಿ ಚಿನ್ನದ ಪದಕವನ್ನು ಜಯಿಸಿದ್ದಕ್ಕೆ ತುಂಬಾನೇ ಸಂತೋಷವಾಗುತ್ತಿದೆ. ಚಿನ್ನ ಜಯಿಸಿದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಕ್ಕೆ ಹೆಮ್ಮೆಯಾಗುತ್ತಿದೆ’’ ಎಂದು ಮೇರಿ ಕೋಮ್ ಹೇಳಿದ್ದಾರೆ.

‘‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾನು ಚಿನ್ನದ ಪದಕವನ್ನು ಜಯಿಸಿಲ್ಲ. ಮುಂದಿನ ವರ್ಷ ಚಿನ್ನ ಗೆಲ್ಲುವುದು ನನ್ನ ಗುರಿ. ಮುಂದಿನ ವರ್ಷ ಒಲಿಂಪಿಕ್ಸ್ ಕೂಟವಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವುದು ಪ್ರತಿ ಅಥ್ಲೀಟ್‌ಗಳ ಕನಸು. ನಾನು ಕಳೆದ ಮೂರು ಟೂರ್ನಿಗಳಲ್ಲಿ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿರುವೆ’’ಎಂದು ಕುಸ್ತಿಪಟು ಯೋಗೇಶ್ವರ್ ದತ್ತ ಹೇಳಿದ್ದಾರೆ.

Write A Comment