ಮಂಗಳೂರು,ಅ. 06 : ಉಳ್ಳಾಲದಲ್ಲಿ ಮತ್ತೆ ಕಳ್ಳರು ಕೈ ಚಲಕ ತೋರಿಸಿದ್ದಾರೆ.ಅಂಬಿಕಾರೋಡ್ ,ಕಾಪಿಕಾಡು ಎಂಬಲ್ಲಿ ಶನಿವಾರ ರಾತ್ರಿ ೨ ಮನೆಗಳಿಗೆ ಯಾರೂ ಇಲ್ಲದ ವೇಳೆ ಕನ್ನ ಹಾಕಿದ ಕಳ್ಳರು ಸತೀಶ್ ಬೇಕಲ್ ಎಂಬವರ ಮನೆಯಲ್ಲಿದ್ದ 5 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ದಿನೇ ದಿನೇ ಉಳ್ಳಾಲವು ಕಳ್ಳರ ನೆಚ್ಚಿನ ತಾಣವಾಗಿ ರೂಪು ಗೊಳ್ಳುತ್ತಿದ್ದರೂ ಪಾಪ ಪೋಲೀಸರು ಮಾತ್ರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲಿಸಿ ಅವರ ಪಾಡಿಗೆ ಸಮ್ಮನುತ್ತಾರೆ. ಉಳ್ಳಾಲದಲ್ಲಿ ಸಾಲು ಸಾಲಾಗಿ ಕಳ್ಳತನದ ಪ್ರಕರಣಗಳು ನಡೆಯುತ್ತಿರುವಾಗಲೇ ಅಂಬಿಕಾರೋಡ್ ,ಸಮೀಪದ ಕಾಪಿಕಾಡು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು 2 ಮನೆಗಳಿಗೆ ಕನ್ನ ಹಾಕಿದ್ದಾರೆ.
ಸತೀಶ್ ಬೇಕಲ್ ಮತ್ತು ಶೇಕರ್ ಬಂಗೇರ ಅವರ ಮನೆಗಳ ಮುಖ್ಯ ದ್ವಾರದ ಲಾಕ್ ಒಡೆದು ಮನೆಗೆ ಕನ್ನ ಹಾಕಲಾಗಿದೆ.ಶೇಖರ್ ಬಂಗೇರ ಅವರು ಕುಟುಂಬ ಸಮೇತರಾಗಿ ವಿದೇಶದಲ್ಲಿ ನೆಲೆಸಿದ್ದು ಕಾಪಿಕಾಡುವಿನ ಮನೆಯನ್ನು ಖಾಲಿ ಬಿಟ್ಟಿದ್ದರು.ಕಳ್ಳರಿಗೆ ಶೇಖರ್ ಬಂಗೇರ ಅವರ ಮನೆಯಲ್ಲಿ ಎಗರಿಸುವ ವಸ್ತುಗಳು ದೊರಕಿಲ್ಲ.ಸತೀಶ್ ಬೇಕಲ್ ಅವರು ನವರಾತ್ರಿ ಪ್ರಯುಕ್ತ ಕುಟುಂಬ ಸಮೇತರಾಗಿ ಶನಿವಾರ ರಾತ್ರಿ ಕಾಸರಗೋಡಿಗೆ ತೆರಳಿ ಆದಿತ್ಯವಾರ ಬೆಳಿಗ್ಗೆ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.ಸತೀಶ್ ಬೇಕಲ್ ಅವರ ಮನೆಯ ಮುಖ್ಯ ದ್ವಾರದ ಲಾಕನ್ನು ತುಂಡರಿಸಿ ಒಳ ನುಗ್ಗಿದ ಕಳ್ಳರು ಬೆಡ್ ರೂಂನಲ್ಲಿ ಕಬಾಟುಗಳನ್ನು ತಡಕಾಡಿಸಿ 5 ಸಾವಿರ ನಗದನ್ನು ಮಾತ್ರ ದೋಚುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲದೆ ಕಳ್ಳರು ಸತೀಶ್ ಬೇಕಲ್ ಅವರ ಫ್ರಿಡ್ಜ್ ನಲ್ಲಿದ್ದ ಊಟವನ್ನೂ ಸ್ವಾಹ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಉಳ್ಳಾಲ ಸಬ್ ಇನ್ಸ್ ಪೆಕ್ಟರ್ ಭಾರತಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.


