
ಬೀದರ್: ಧ್ವನಿವರ್ಧಕದ ಶಬ್ದ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆ ನಗರದ ಲೇಬರ್ ಕಾಲೊನಿಯಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಪರಸ್ಪರ ಮಾರಾಮಾರಿ, ಕಲ್ಲು ತೂರಾಟದಿಂದ ಮುಖ್ಯ ಕಾನ್‌ಸ್ಟೆಬಲ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಕಾಲೊನಿಯಲ್ಲಿ ಭಾನುವಾರ 22 ವರ್ಷದ ಯುವಕನೊಬ್ಬ ಮೃತಪಟ್ಟಿದ್ದ. ಪಕ್ಕದಲ್ಲಿಯೇ ಇರುವ ಪ್ರಾರ್ಥನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಿದ್ದು, ಅದು ಧ್ವನಿವರ್ಧಕದಲ್ಲಿ ಬರುತ್ತಿತ್ತು. ಮೃತ ಯುವಕನ ಕಡೆಯವರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದು, ಧ್ವನಿವರ್ಧಕದ ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಆಗ ಮಾತಿಗೆ ಮಾತು ಬೆಳೆದು ಪರಸ್ಪರ ಮಾರಾಮಾರಿ, ಕಲ್ಲು ತೂರಾಟ ನಡೆಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.
ಬೀದರ್‌ನಲ್ಲಿ ಗುಂಪು ಘರ್ಷಣೆ: ನಾಲ್ವರಿಗೆ ಗಾಯ
ಘಟನೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಮಹಮ್ಮದ್ ಮುಜೀಬ್, ಡೇವಿಡ್, ಜೇಮ್ಸ್, ಅಶೋಕ್ ಗಾಯಗೊಂಡಿದ್ದಾರೆ. ಘಟನೆಯಿಂದ ಕಾಲೊನಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಡಿವೈಎಸ್‌ಪಿ ಎ.ಡಿ.ಬಸವಣ್ಣನವರ್ ಮತ್ತಿತರ ಹಿರಿಯ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.
‘ಕಾಲೊನಿಯಲ್ಲಿ ನಗರಸಭೆಗೆ ಸೇರಿದ ನಿವೇಶನ ತಮ್ಮದೆಂದು ಎರಡು ಗುಂಪುಗಳು ವಾದಿಸುತ್ತಿದ್ದು, ಈ ಸಂಬಂಧ ಹಿಂದೆ ಸಣ್ಣಪುಟ್ಟ ಗಲಾಟೆ ನಡೆದಿದ್ದವು. ನಂತರ ರಾಜಿ ಸಂಧಾನ ಮಾಡಿಕೊಂಡಿದ್ದು, ಪರಿಸ್ಥಿತಿ ಶಾಂತವಾಗಿತ್ತು. ಇದೀಗ ಕ್ಷುಲ್ಲಕ ಕಾರಣಕ್ಕೆ ಮತ್ತೆ ಘರ್ಷಣೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.
‘ಲೇಬರ್ ಕಾಲೊನಿಯಲ್ಲಿ ಸದ್ಯ ಪರಿಸ್ಥಿತಿ ಶಾಂತಗೊಂಡಿದ್ದು, ನಿಯಂತ್ರಣದಲ್ಲಿದೆ. ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ’ ಎಂದು ಎಸ್ಪಿ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಜೆ ಎರಡೂ ಗುಂಪಿನ 10 ಜನರನ್ನು ವಿಚಾರಣೆ ಕರೆದೊಯ್ದಿದ್ದಾರೆ.