
ಆ್ಯಂಕರಾಜ್, ಅ. 1: ಆರ್ಕ್‌ಟಿಕ್ ಸಮುದ್ರದಲ್ಲಿ ವಿಶ್ರಾಂತಿ ಪಡೆಯಲು ಹಿಮಗಡ್ಡೆಗಳ ಕೊರತೆಯನ್ನು ಎದುರಿಸುತ್ತಿರುವ ಪೆಸಿಫಿಕ್ ವಾಲ್‌ರಸ್‌ಗಳು (ಸೀಲ್ ಪ್ರಾಣಿಗಳನ್ನು ಹೋಲುವ ದೊಡ್ಡ ಕೋರೆಹಲ್ಲುಗಳಿರುವ ಸಮುದ್ರ ಪ್ರಾಣಿ) ಈಶಾನ್ಯ ಅಲಾಸ್ಕದ ಸಾಗರ ತೀರಕ್ಕೆ ಭಾರೀ ಸಂಖ್ಯೆಯಲ್ಲಿ ಬರುತ್ತಿವೆ.
ಪಾಯಿಂಟ್ ಲೇ ಇದರ ಉತ್ತರಕ್ಕೆ 8 ಕಿ.ಮೀ. ದೂರದಲ್ಲಿ ಶನಿವಾರ ಸುಮಾರು 35,000 ವಾಲ್‌ರಸ್‌ಗಳನ್ನು ಕ್ಯಾಮರದಲ್ಲಿ ಸೆರೆಹಿಡಿಯಲಾಗಿದೆ ಎಂದು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಇಲಾಖೆ (ಎನ್‌ಒಎಎ) ಹೇಳಿದೆ.
ಪಾಯಿಂಟ್ ಲೇ ಎನ್ನುವುದು ಎಸ್ಕಿಮೊ ಜನಾಂಗೀಯರು ವಾಸಿಸುವ ಗ್ರಾಮವಾಗಿದೆ. ಇದು ಬ್ಯಾರೋದ ಆಗ್ನೇಯಕ್ಕೆ 482 ಕಿ.ಮೀ. ದೂರದಲ್ಲಿ ಹಾಗೂ ಆ್ಯಂಕರಾಜ್‌ನ ವಾಯವ್ಯಕ್ಕೆ 1,126 ಕಿ.ಮೀ. ದೂರದಲ್ಲಿದೆ. ಎನ್‌ಒಎಎಯ ವಾರ್ಷಿಕ ಆರ್ಕ್‌ಟಿಕ್ ಸಾಗರ ಸಸ್ತನಿಗಳ ವೈಮಾನಿಕ ಸಮೀಕ್ಷೆಯ ವೇಳೆ ವಾಲ್‌ರಸ್‌ಗಳು ಭಾರೀ ಪ್ರಮಾಣದಲ್ಲಿ ಒಟ್ಟು ಸೇರಿರುವುದು ಪತ್ತೆಯಾಗಿದೆ ಎಂದು ಎನ್‌ಒಎಎ ವಕ್ತಾರೆ ಜೂಲೀ ಸ್ಪೀಗಲ್ ಹೇಳಿದ್ದಾರೆ.
ಇಷ್ಟೊಂದು ಪ್ರಮಾಣದ ವಾಲ್‌ರಸ್‌ಗಳನ್ನು ಸೆಪ್ಟಂಬರ್ 13ರಂದು ಮೊದಲ ಬಾರಿಗೆ ಗಮನಿಸಲಾಗಿದೆ ಹಾಗೂ ಅವುಗಳು ತೀರಕ್ಕೆ ಬರುತ್ತಿವೆ ಹಾಗೂ ಹೋಗುತ್ತಿವೆ ಎಂದು ಅಮೆರಿಕದ ಮೀನು ಮತ್ತು ವನ್ಯಜೀವಿ ಸೇವೆ ವಿಭಾಗದ ವಕ್ತಾರೆ ಆ್ಯಂಡ್ರಿಯಾ ಮೆಡಾರಸ್ ಹೇಳಿದ್ದಾರೆ. ಕಳೆದ ವಾರ ಸಾಗರ ತೀರದಲ್ಲಿ ವಾಲ್‌ರಸ್‌ಗಳ 50 ಶವಗಳನ್ನು ವೀಕ್ಷಕರು ಪತ್ತೆಹಚ್ಚಿದ್ದಾರೆ. ನೂಕುನುಗ್ಗಲಿನಿಂದ ಈ ಸಾವುಗಳು ಸಂಭವಿಸಿರುವ ಸಾಧ್ಯತೆಯಿದೆ ಎಂದು ಅವರು ಹೇಳುತ್ತಾರೆ.
ಜಾಗತಿಕ ತಾಪಮಾನದಿಂದಾಗಿ ಸಾಗರದಲ್ಲಿ ಬೇಸಿಗೆ ಹಿಮಗಡ್ಡೆಗಳ ಕೊರತೆಯಿಂದಾಗಿ ವಾಲ್‌ರಸ್‌ಗಳು ತೀರದಲ್ಲಿ ಒಟ್ಟು ಸೇರಿರಬಹುದು ಎಂದು ಹೇಳಲಾಗುತ್ತಿದೆ. ಪೆಸಿಫಿಕ್ ವಾಲ್‌ರಸ್‌ಗಳು ಚಳಿಗಾಲಗಳನ್ನು ಬೆರಿಂಗ್ ಸಮುದ್ರದಲ್ಲಿ ಕಳೆಯುತ್ತವೆ. ಹೆಣ್ಣು ಜೀವಿಗಳು ಈ ಅವಧಿಯಲ್ಲಿ ಸಮುದ್ರ ಮಂಜುಗಡ್ಡೆಗಳ ಮೇಲೆ ಮರಿ ಹಾಕುತ್ತವೆ. ಈ ಸಂದರ್ಭದಲ್ಲಿ ಬಸವನ ಹುಳು, ಕಪ್ಪೆಚಿಪ್ಪು ಮತ್ತು ಹುಳಗಳನ್ನು ತಿನ್ನುವುದಕ್ಕಾಗಿ ಅವುಗಳ ಬಳಿಗೆ ಹೋಗಲು ಮಂಜುಗಡ್ಡೆ ತುಂಡುಗಳನ್ನು ಮೆಟ್ಟಿಲುಗಳಂತೆ ಬಳಸಿಕೊಳ್ಳುತ್ತವೆ.