jaio
ಮನಾಮ, ಅ. 1: ಬಹ್ರೈನ್‌ನ ಬೃಹತ್ ಕಪ್ಪು ಹಣ ಬಿಳುಪು ಜಾಲ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವೊಂದು ನಿನ್ನೆ 15 ಆರೋಪಿಗಳನ್ನು ದೋಷಿ ಎಂಬುದಾಗಿ ಪರಿಗಣಿಸಿದೆ. ಈ ಜಾಲದ ಮೂಲಕ 35 ಕೋಟಿ ಬಹ್ರೈನ್ ದೀನಾರ್ ಮೊತ್ತವನ್ನು ವಿದೇಶಕ್ಕೆ ಸಾಗಿಸಲಾಗಿದೆ.
ಯುಎಇ ಎಕ್ಸ್‌ಚೇಂಜ್‌ನ 11 ಮ್ಯಾನೇಜರ್‌ಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ಈ ಗುಂಪು ಹಣವನ್ನು ಸೌದಿ ಅರೇಬಿಯಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿತ್ತು. ಆರೋಪಿಗಳ ಪೈಕಿ 14 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಹಾಗೂ ಓರ್ವ ತಪ್ಪಿಸಿಕೊಂಡಿದ್ದಾನೆ. ಆತನ ಅನುಪಸ್ಥಿತಿಯಲ್ಲಿ ಆತನಿಗೆ ಶಿಕ್ಷೆಯಾಗಿದೆ.
11 ಮಂದಿ ಆರೋಪಿಗಳಿಗೆ 8 ವರ್ಷ ಮತ್ತು ಆರು ತಿಂಗಳು ಜೈಲು ವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ಅವರಿಗೆ ತಲಾ 1.3 ಲಕ್ಷ ಬಹ್ರೈನ್ ದೀನಾರ್ ದಂಡವನ್ನೂ ವಿಧಿಸಲಾಗಿದೆ. ಇತರ ನಾಲ್ವರಿಗೆ ಐದು ವರ್ಷ ಮತ್ತು ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇ ವೇಳೆ, ಅವರು ತಲಾ 40,000 ದೀನಾರ್ ದಂಡ ಪಾವತಿಸಬೇಕಾಗಿದೆ. ನ್ಯಾಯಾಲಯವು ಕಂಪೆನಿಗೆ 2 ಲಕ್ಷ ದೀನಾರ್ ದಂಡ ವಿಧಿಸಿದೆ ಹಾಗೂ 20 ಲಕ್ಷ ದೀನಾರ್‌ಗೂ ಅಧಿಕ ಮೊತ್ತವನ್ನು ಮುಟ್ಟುಗೋಲು ಹಾಕುವಂತೆ ಆದೇಶಿಸಿದೆ. ದೋಷಿಗಳ ಶಿಕ್ಷೆ ಮುಗಿದ ಬಳಿಕ ಅವರೆಲ್ಲರನ್ನೂ ಗಡಿಪಾರು ಮಾಡಲಾಗುವುದು.