ಕುಂದಾಪುರ: ಕುಂಭಾಸಿ ಕೊರಗ ಕಾಲೋನಿಗೆ ಉಡುಪಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಗುರುವಾರ ದಿಡೀರ್ ಭೇಟಿ ನೀಡಿದರು.
ಕೊರಗ ಕಾಲೋನಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಸತಿ ಮನೆಗಳು, ನೀರಿನ ವ್ಯವಸ್ಥೆ, ಹಾಗೂ ಮಕ್ಕಳ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಪಡೆದರು. ಅಲ್ಲದೇ ಕೊರಗರ ಆಶ್ರಯಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ನಾಲ್ಕಾರು ಮನೆಗಳ ಕಾಮಗಾರಿ ಪರಿಶೀಲಿಸಿದರು.
ಇದೇ ಸಂದರ್ಭ ಸ್ಥಳೀಯ ಕೊರಗ ನಿವಾಸಿಗಳಲ್ಲಿ ಮಾತಿಗಿಳಿದ ಜಿಲ್ಲಾಧಿಕಾರಿಗಳು, ತಮ್ಮ ಮಕ್ಕಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕಾದರೇ ಶಿಕ್ಷಣ ಅಗತ್ಯ, ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಓದಿಸಬೇಕು, ನೂತನ ಮನೆಗಳು ನಿರ್ಮಾಣವಾದ ಮೇಲೆ ಎಲ್ಲರೂ ಇಲ್ಲಿ ಸಹಬಾಳ್ವೆಯಿಂದ ಬಾಳಬೇಕು ಎಂದರು.
ಈ ಸಂದರ್ಭ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ ಕೊರಗ, ಕುಂಭಾಸಿ ಗ್ರಾ.ಪಂ. ಸದಸ್ಯರಾದ ಮಹಾಬಲೇಶ್ವರ ಆಚಾರ್ಯ, ರಾಧಾದಾಸ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಕಾರ್ಯದರ್ಶಿ ನೀಲು, ಗ್ರಾಮಲೆಕ್ಕಿಗ ದಿನೇಶ್ ಹೂದಾರ್, ನಿರ್ಮಿತಿ ಕೇಂದ್ರದ ಅರುಣಕುಮಾರ್, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ (ಐ.ಟಿ.ಡಿ.ಪಿ.) ಅಧಿಕಾರಿ ಎಚ್.ಎಸ್. ಪ್ರೇಮನಾಥ್ ಮೊದಲಾದವರು ಉಪಸ್ಥಿತರಿದ್ದರು.

















