ಕರಾವಳಿ

ಕರುವಿನ ಜೊತೆಗೆ ಪೈಶಾಚಿಕ ಕೃತ್ಯ; ಎಎಸ್‌ಪಿ ಅಣ್ಣಾಮಲೈ ಭೇಟಿ- ಸೂಕ್ತ ಕ್ರಮದ ಭರವಸೆ

Pinterest LinkedIn Tumblr

ಉಡುಪಿ: ಪಾದೂರು ಶಾಂತಿಗುಡ್ಡೆಯಲ್ಲಿ ಇತ್ತೀಚೆಗೆ ಮೇಯಲು ಕಟ್ಟಿದ್ದ ಕರುವಿನ ಮೇಲೆ ನಡೆದಿತ್ತೆನ್ನಲಾದ ಪೈಶಾಚಿಕ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ಕಾರ್ಕಳ ವಿಭಾಗದ ಎಎಸ್‌ಪಿ ಅಣ್ಣಾಮಲೈ ಗುರುವಾರ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

ASP Annamalai Visit Kapu

ಇದೊಂದು ವಿಭಿನ್ನ ಪ್ರಕರಣವಾದ ಕಾರಣ ಅಪರಾಧ ದೃಢೀಕರಿಸಲು ತಾಂತ್ರಿಕ ಅಡಚಣೆಗಳಿವೆ. ಕರುವಿನ ಜೊತೆಗೆ ನಡೆದಿರುವ ಪೈಶಾಚಿಕ ಕೃತ್ಯದ ಬಗ್ಗೆ ಇಲಾಖೆ ಗಂಭೀರವಾದ ರೀತಿಯಲ್ಲಿ ತನಿಖೆ ಮುಂದುವರಿಸಿದೆ. ಸ್ಥಳದಲ್ಲಿ ಸಂಗ್ರಹಿಸಲಾಗಿರುವ ಘಟನೆ ಸಂಬಂಧಿಯಾದ ಕುರುಹುಗಳನ್ನು ಮತ್ತು ಪಶು ವೈದ್ಯರುಗಳು ನೀಡಿರುವ ಸ್ಯಾಂಪಲ್‌ಗ‌ಳನ್ನು ವಿಧಿ ವಿಜ್ಞಾನ ಪರೀಕ್ಷೆಗಾಗಿ ಮಂಗಳೂರು ಮತ್ತು ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ ಎಂದರು.

ಕಾರ್ಮಿಕರು ವಾಸವಿರುವ ಲೇಬರ್ ಕಾಲೊನಿಯಿಂದ ತಮಗೆ ತೊಂದರೆಗಳು ಎದುರಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ವಿನಂತಿಸಿದರು. ಲೇಬರ್ ಕಾಲೊನಿ ತೆರವುಗೊಳಿಸುವಂತೆ ಪಾದೂರು ಕಂಪೆನಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಹಲವಾರು ಬಾರಿ ವಿನಂತಿ ಮಾಡಲಾಗಿದೆ. ಆದರೂ ನಮ್ಮ ವಿನಂತಿಗೆ ಬೆಲೆಯೇ ಸಿಕ್ಕಿಲ್ಲ. ಜನರು ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಪೊಲೀಸರೇ ಈ ಬಗ್ಗೆ ಜಾಗತರಾಗಿ, ಲೇಬರ್ ಕಾಲೊನಿ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ವಿನಂತಿಸಿದರು.

ಇದಕ್ಕೆ ಸ್ಪಂದಿಸಿದ ಎಎಸ್‌ಪಿ,ಲೇಬರ್ ಕಾಲೊನಿಯನ್ನು ಶೀಘ್ರ ತೆರವುಗೊಳಿಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಪೊಲೀಸ್ ಬೀಟ್‌ನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಶಿರ್ವ ಠಾಣಾಧಿಕಾರಿ ಅಶೋಕ್ ಪಿ., ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಮಜೂರು ಗ್ರಾಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಐತಾಳ್, ಗ್ರಾ. ಪಂ. ಪ್ರತಿನಿಧಿಗಳು, ರಂಗನಾಥ ಶೆಟ್ಟಿ, ಕರುಣಾಕರ ಶೆಟ್ಟಿ ಸೇರಿದಂತೆ ನೂರಾರು ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು.

Write A Comment